ADVERTISEMENT

ವಿಶ್ವ‌ ಜೂನಿಯರ್ ಬ್ಯಾಡ್ಮಿಂಟನ್‌: ಭಾರತಕ್ಕೆ ಚಾರಿತ್ರಿಕ ಕಂಚು

ಪಿಟಿಐ
Published 10 ಅಕ್ಟೋಬರ್ 2025, 15:55 IST
Last Updated 10 ಅಕ್ಟೋಬರ್ 2025, 15:55 IST
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಮಿಶ್ರ ತಂಡ ವಿಭಾಗದಲ್ಲಿ ಗುರುವಾರ ಕೊರಿಯಾ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದ ಭಾರತದ ತಂಡದವರು ಸಂಭ್ರಮಿಸಿದ್ದು ಹೀಗೆ.... 
ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ ಮಿಶ್ರ ತಂಡ ವಿಭಾಗದಲ್ಲಿ ಗುರುವಾರ ಕೊರಿಯಾ ತಂಡವನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿದ ಭಾರತದ ತಂಡದವರು ಸಂಭ್ರಮಿಸಿದ್ದು ಹೀಗೆ....    

ಗುವಾಹಟಿ: ಆತಿಥೇಯ ಭಾರತ ತಂಡವು ವಿಶ್ವ‌ ಜೂನಿಯರ್ ಬ್ಯಾಡ್ಮಿಂಟನ್‌ ಮಿಶ್ರ ತಂಡ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಶುಕ್ರವಾರ ಹಾಲಿ ಚಾಂಪಿಯನ್‌ ಇಂಡೊನೇಷ್ಯಾ ವಿರುದ್ಧ ಸೋತ ನಂತರ ಚಾರಿತ್ರಿಕ ಕಂಚಿನ ಪದಕದೊಂದಿಗೆ ಅಭಿಯಾನ ಮುಗಿಸಿತು.

ಭಾರತ ತಂಡವು ಗುರುವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಐತಿಹಾಸಿಕ ಮೊದಲ ಪದಕ ಖಚಿತಪಡಿಸಿಕೊಂಡಿತ್ತು. ನಾಲ್ಕರ ಘಟ್ಟದ ಪಂದ್ಯದಲ್ಲಿ 35-45, 21-45ರಿಂದ ಪ್ರಬಲ ಇಂಡೊನೇಷ್ಯಾ ತಂಡಕ್ಕೆ ಮಣಿಯಿತು.  

ಮತ್ತೊಂದು ಸೆಮಿಫೈನಲ್‌ನಲ್ಲಿ 14 ಬಾರಿಯ ಚಾಂಪಿಯನ್ ಚೀನಾ ಮತ್ತು ಜಪಾನ್ ಸೆಣಸಲಿದ್ದು, ವಿಜೇತ ತಂಡವನ್ನು ಇಂಡೊನೇಷ್ಯಾ ಶನಿವಾರ ಫೈನಲ್‌ನಲ್ಲಿ ಎದುರಿಸಲಿದೆ. 

ADVERTISEMENT

ಕೊರಿಯಾವನ್ನು ಸೋಲಿಸಿದ್ದ ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿತ್ತು. ಮಿಶ್ರ ಡಬಲ್ಸ್‌ನಲ್ಲಿ ಅನಾಯಾ ಬಿಷ್ಟ್‌ ಬದಲಿಗೆ ವಿಶಾಖ ಟೊಪ್ಪೊ ಅವರಿಗೆ ಅವಕಾಶ ನೀಡಲಾಗಿತ್ತು. 

ಸ್ಪರ್ಧೆಯಲ್ಲಿ ಅಂಕಗಳು ರಿಲೆ ಮಾದರಿಯಲ್ಲಿ ಇರುತ್ತದೆ. ಒಂದು ಗೇಮ್‌ನಲ್ಲಿ ಐದು ಸುತ್ತುಗಳಿದ್ದು, ತಲಾ 9 ರಂತೆ ಒಟ್ಟು 45 ಅಂಕ ನಿಗದಿ ಮಾಡಲಾಗಿದೆ. ಪುರುಷರ ಡಬಲ್ಸ್‌, ಮಹಿಳೆಯರ ಸಿಂಗಲ್ಸ್‌, ಪುರುಷರ ಸಿಂಗಲ್ಸ್‌, ಮಿಶ್ರ ಡಬಲ್ಸ್‌ ಮತ್ತು ಮಹಿಳೆಯರ ಡಬಲ್ಸ್ ಹೀಗೆ ಐದು ಸುತ್ತುಗಳ ಸ್ಪರ್ಧೆ ನಡೆಯುತ್ತದೆ.

ಮೊದಲ ಗೇಮ್‌ನ ಆರಂಭಿಕ ಸುತ್ತಿನಲ್ಲಿ ಭಾರ್ಗವ್‌ ರಾಮ್ ಅರಿಗೆಲಾ ಮತ್ತು ವಿಶ್ವತೇಜ್ ಗೊಬ್ಬೂರು ಅವರು ಪುರುಷರ ಡಬಲ್ಸ್‌ನಲ್ಲಿ 9–6 ಅಂಕಗಳೊಂದಿಗೆ ಭಾರತಕ್ಕೆ ಉತ್ತಮ ಆರಂಭ ನೀಡಿದ್ದರು. ಆದರೆ, ಅದೇ ಮುನ್ನಡೆಯನ್ನು ಕಾಯ್ದುಕೊಳ್ಳಲು ಉಳಿದ ಆಟಗಾರರಿಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ 10 ಅಂಕಗಳ ಅಂತರದಿಂದ ಇಂಡೊನೇಷ್ಯಾ ತಂಡ ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿತು.

ಎರಡನೇ ಗೇಮ್‌ನಲ್ಲಿ ಭಾರತ ಆಟಗಾರರು ಆರಂಭದಲ್ಲೇ ಎಡವಿದರು. ಪುರುಷರ ಡಬಲ್ಸ್‌ನಲ್ಲಿ ಅರಿಗೆಲಾ ಮತ್ತು ಗೊಬ್ಬೂರು ಜೋಡಿಯು ಮೊದಲ ಸುತ್ತಿನಲ್ಲಿ 2–9 ಹಿನ್ನಡೆ ಅನುಭವಿಸಿತು. ಯಾವುದೇ ಹಂತದಲ್ಲಿ ತಂಡವು ಚೇತರಿಕೆ ಕಾಣದೆ 24 ಅಂಕಗಳ ಅಂತರದಿಂದ ಸೋಲೊಪ್ಪಿಕೊಂಡಿತು. 

ಸೋಮವಾರದಿಂದ ಆರಂಭವಾಗಲಿರುವ ವೈಯಕ್ತಿಕ ಚಾಂಪಿಯನ್‌ಷಿಪ್‌ಗೆ ಭಾರತ ಆಟಗಾರರು ತಯಾರಿ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.