ADVERTISEMENT

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌: ನಿಶಾದ್‌, ಸಿಮ್ರನ್‌ಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 1:39 IST
Last Updated 4 ಅಕ್ಟೋಬರ್ 2025, 1:39 IST
   

ನವದೆಹಲಿ: ಭಾರತದ ನಿಶಾದ್ ಕುಮಾರ ಅವರು ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಹೈಜಂಪ್‌ ಟಿ47 ಸ್ಪರ್ಧೆಯಲ್ಲಿ ಶುಕ್ರವಾರ ನೂತನ ಏಷ್ಯನ್ ದಾಖಲೆಯೊಡನೆ ಚಿನ್ನ ಗೆದ್ದರು. ಈ ಕೂಟದ ಏಳನೇ ದಿನ ಸಿಮ್ರನ್‌ ಶರ್ಮಾ ಅವರು ವೈಯಕ್ತಿಕ ಶ್ರೇಷ್ಠ ಅವಧಿಯೊಡನೆ 100 ಮೀ. (ಟಿ12) ಸ್ಪರ್ಧೆಯಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಈ ಹಿಂದೆ ಹಲವು ಅಂತರರಾಷ್ಟ್ರೀಯ ಕೂಟಗಳಲ್ಲಿ ಎರಡನೇ ಸ್ಥಾನ ಗಳಿಸಿದ್ದ ನಿಶಾದ್‌ 2.14 ಮೀ. ಜಿಗಿಯುವ  ಮೂಲಕ ಮೊದಲ ಬಾರಿ ವಿಶ್ವ ಕೂಟದಲ್ಲಿ ಚಿನ್ನ ಗೆದ್ದರು. ಅವರು  ಟೋಕಿಯೊ ಮತ್ತು ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಮತ್ತು ಎರಡು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಬೆಳ್ಳಿ ಗೆದ್ದಿದ್ದರು.

ಮೂರು ಬಾರಿಯ ವಿಶ್ವ ಚಾಂಪಿಯನ್ ಅಮೆರಿಕದ ರೊಡೆರಿಕ್‌ ಟೌನ್ಸೆಂಡ್ (2.03 ಮೀ.) ಎರಡನೇ ಸ್ಥಾನಕ್ಕೆ ಸರಿದರು.

ADVERTISEMENT

ಇಲ್ಲಿ ಚಿನ್ನ ಖಚಿತವಾದ ನಂತರ ನಿಶಾದ್ ಅವರು ವಿಶ್ವದಾಖಲೆಗೆ ಯತ್ನಿಸಿದರೂ 2.18 ಮೀ. ಜಿಗಿಯಲು ಹೋಗಿ ವಿಫಲರಾದರು. ಮುಂಗೈ ಕಳೆದುಕೊಂಡ ಸ್ಪರ್ಧಿಗಳು ಈ ವಿಭಾಗದಲ್ಲಿ ಸ್ಪರ್ಧಿಸುತ್ತಾರೆ.

ಸಿಮ್ರನ್‌ 100 ಮೀ. ಓಟವನ್ನು 11.95 ಸೆ.ಗಳಲ್ಲಿ ಕ್ರಮಿಸಿದರು. ಈ ವಿಭಾಗದ ಅಥ್ಲೀಟುಗಳು ಭಾಗಶಃ ದೃಷ್ಟಿದೋಷ ಹೊಂದಿರುತ್ತಾರೆ.

ಭಾರತದ ಪ್ರೀತಿ ಪಾಲ್ 30.903 ಸೆ.ಗಳೊಂದಿಗೆ 200 ಮೀ. ಓಟದಲ್ಲಿ (ಟಿ35) ಕಂಚಿನ ಪದಕ ಗೆದ್ದುಕೊಂಡರು. ಪ್ರದೀಪ್ ಕುಮಾರ್ ಷಾಟ್‌ಪಟ್‌ ಎಫ್‌64 ವಿಭಾಗದಲ್ಲಿ ಮೂರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.