ADVERTISEMENT

ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಒಲಿಂಪಿಕ್ಸ್‌ ಅರ್ಹತೆಯತ್ತ ಮೀರಾ ಚಿತ್ತ

ಪಿಟಿಐ
Published 17 ಸೆಪ್ಟೆಂಬರ್ 2019, 19:30 IST
Last Updated 17 ಸೆಪ್ಟೆಂಬರ್ 2019, 19:30 IST
ಮೀರಾಬಾಯಿ ಚಾನು
ಮೀರಾಬಾಯಿ ಚಾನು   

ಪಟ್ಟಾಯ: ಭಾರತದ ಮೀರಾಬಾಯಿ ಚಾನು ಅವರು ಬುಧವಾರದಿಂದ ಆರಂಭವಾಗುವ ವಿಶ್ವ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ರಹದಾರಿ ಪಡೆಯುವ ಕನಸಿನಲ್ಲಿದ್ದಾರೆ.

2017ರಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮೀರಾ ಚಿನ್ನದ ಪದಕ ಜಯಿಸಿದ್ದರು. 48 ಕೆ.ಜಿ. ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು. ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ಈ ವರ್ಷದ ಆರಂಭದಲ್ಲಿ ಹಲವು ತೂಕದ ವಿಭಾಗಗಳಲ್ಲಿ ಬದಲಾವಣೆ ಮಾಡಿತ್ತು.

ಹೀಗಾಗಿ 25 ವರ್ಷದ ಮೀರಾ ಈ ವರ್ಷ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು. ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಒಟ್ಟು 199 ಕೆ.ಜಿ. ಭಾರ ಎತ್ತಿ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನೂ ಮಾಡಿದ್ದರು.

ADVERTISEMENT

ಈ ವರ್ಷದ ಚಾಂಪಿಯನ್‌ಷಿಪ್‌ನಲ್ಲಿ ಮೀರಾ ಅವರಿಗೆ ಚೀನಾದ ಹೊವು ಜಿಹುಯಿ ಮತ್ತು ಜಿಯಾಂಗ್‌ ಹುಯಿಹುವಾ ಅವರಿಂದ ಕಠಿಣ ಸವಾಲು ಎದುರಾಗಲಿದೆ. ಹೊವು ಅವರು ಹೋದ ವರ್ಷ ಬೆಳ್ಳಿಯ ಪದಕ ಗೆದ್ದಿದ್ದರು. ಜಿಯಾಂಗ್‌ ಕಂಚಿನ ಪದಕ ಗಳಿಸಿದ್ದರು. ಉತ್ತರ ಕೊರಿಯಾದ ರಿ ಸಾಂಗ್‌ ಗಮ್‌ ಮತ್ತು ಬಿಯಾಟ್ರಿಜ್‌ ಪಿರೊನ್‌ ಅವರೂ ಈ ವಿಭಾಗದಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಾಗಿದ್ದಾರೆ.

‘ತರಬೇತಿಯ ವೇಳೆ 203 ಕೆ.ಜಿ.ಸಾಮರ್ಥ್ಯ ತೋರಿದ್ದೇನೆ. ಹೀಗಾಗಿ ವಿಶ್ವಾಸ ಹೆಚ್ಚಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 210 ಕೆ.ಜಿ. ಭಾರ ಎತ್ತಬೇಕೆಂಬ ಗುರಿ ಇಟ್ಟುಕೊಂಡಿದ್ದೇನೆ. ಇದನ್ನು ಸಾಧಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ’ ಎಂದು ಮೀರಾಬಾಯಿ ತಿಳಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಎಲ್ಲರ ಆಕರ್ಷಣೆಯಾಗಿದ್ದಾರೆ. 16 ವರ್ಷ ವಯಸ್ಸಿನ ಜೆರೆಮಿ, ಯೂತ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಇತ್ತೀಚೆಗೆ ನಡೆದಿದ್ದ ಇಜಿಎಟಿ ಕಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಅವರು ಸ್ನ್ಯಾಚ್‌ನಲ್ಲಿ 131 ಕೆ.ಜಿ. ಹಾಗೂ ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 157 ಕೆ.ಜಿ. ಸಾಮರ್ಥ್ಯ ತೋರಿದ್ದರು.

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 297 ಕೆ.ಜಿ. ಸಾಮರ್ಥ್ಯ ತೋರಿದ್ದ ಜೆರೆಮಿ, ವಿಶ್ವ (ಯೂತ್‌ ವಿಭಾಗ) ಮತ್ತು ಏಷ್ಯನ್‌ ದಾಖಲೆಗಳನ್ನು ನಿರ್ಮಿಸಿದ್ದರು.

ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಅಜಯ್‌ ಸಿಂಗ್‌ (81 ಕೆ.ಜಿ) ಮತ್ತು ರಾಷ್ಟ್ರೀಯ ಚಾಂಪಿಯನ್‌ ಅಚಿಂತಾ ಶೆವುಲಿ (73 ಕೆ.ಜಿ) ಅವರೂ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಜಿಲ್ಲಿ ದಲಬೆಹೆರಾ (45 ಕೆ.ಜಿ), ಸ್ನೇಹಾ ಸೋರೆನ್‌ (55 ಕೆ.ಜಿ) ಮತ್ತು ರಾಖಿ ಹಲ್ದಾರ್‌ (64 ಕೆ.ಜಿ) ಅವರು ಮಹಿಳಾ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.