ಝಾಗ್ರೆಬ್ (ಕ್ರೊವೇಷ್ಯಾ): ಯುವ ಕುಸ್ತಿಪಟು ಅಂತಿಮ್ ಪಂಘಲ್ ಅವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಪದಕ ತಮ್ಮದಾಗಿಸಿಕೊಂಡರು. ಇಲ್ಲಿ ಭಾರತಕ್ಕೆ ದೊರೆತ ಮೊದಲ ಪದಕ ಇದಾಗಿದೆ.
2023ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ 21 ವರ್ಷದ ಅಂತಿಮ್, ಗುರುವಾರ ನಡೆದ ಮಹಿಳೆಯರ 53 ಕೆ.ಜಿ. ವಿಭಾಗದ ಕಂಚಿನ ಪದಕದ ಸ್ಪರ್ಧೆಯಲ್ಲಿ 9–1 ಅಂತರದಿಂದ ಸ್ವೀಡನ್‌ನ ಎಮ್ಮಾ ಜೊನ್ನಾ ಡೆನಿಸ್ ಮಾಲ್ಮ್‌ಗ್ರೆನ್ ಅವರನ್ನು ಸುಲಭವಾಗಿ ಮಣಿಸಿದರು. ಎಮ್ಮಾ ಅವರು 23 ವರ್ಷದೊಳಗಿನ ವಿಶ್ವ ಚಾಂಪಿಯನ್ ಆಗಿದ್ದಾರೆ.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎರಡು ಪದಕ ಗೆದ್ದ ಎರಡನೇ ಮಹಿಳಾ ಕುಸ್ತಿಪಟು ಎಂಬ ಹಿರಿಮೆಗೆ ಅಂತಿಮ್ ಪಾತ್ರವಾದರು. ವಿನೇಶ್ ಪೋಗಟ್ ಎರಡು ಪದಕ ಗೆದ್ದ ಮೊದಲ ಕುಸ್ತಿಪಟು.
ಪುರುಷರಿಗೆ ನಿರಾಸೆ: ಭಾರತದ ಗ್ರೀಕೊ ರೋಮನ್ ಕುಸ್ತಿಪಟುಗಳು ಮತ್ತೆ ವೈಫಲ್ಯ ಅನುಭವಿಸಿದರು. ಕಣದಲ್ಲಿದ್ದ ನಾಲ್ವರು ಪೈಲ್ವಾನರಿಗೆ ಒಂದೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಪುರುಷರ 55 ಕೆ.ಜಿ ವಿಭಾಗದಲ್ಲಿ ಅನಿಲ್ ಮೋರ್ ಕೇವಲ 13 ಸೆಕೆಂಡ್‌ಗಳಲ್ಲಿ ಸೋಲೊಪ್ಪಿಕೊಂಡರು. ವಿಶ್ವದ ಅಗ್ರಮಾನ್ಯ ಕುಸ್ತಿಪಟು ಎಲ್ಡಾನಿಜ್ ಅಜಿಜ್ಲಿ (ಅಜರ್‌ಬೈಜಾನ್) ಅವರಿಗೆ ಅನಿಲ್ ಸುಲಭವಾಗಿ ಶರಣಾದರು.
77 ಕೆ.ಜಿ ವಿಭಾಗದಲ್ಲಿ ಅಮನ್ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಜಪಾನ್‌ನ ನವೋ ಕುಸಾಕಾ ವಿರುದ್ಧ ಸೋತರು.
82 ಕೆ.ಜಿ ವಿಭಾಗದಲ್ಲಿ ರಾಹುಲ್ 1–7ರಿಂದ ಕಜಕಿಸ್ತಾನದ ಅಲ್ಮಿರ್ ಟೊಲೆಬಾಯೆವ್ ವಿರುದ್ಧ ಪರಾಭವಗೊಂಡರು. 130 ಕೆ.ಜಿ ವಿಭಾಗದಲ್ಲಿ ಸೋನು 0-8ರಿಂದ ಕ್ರೊವೇಷ್ಯಾದ ಮಾರ್ಕೊ ಕೊಸ್ಸೆವಿಕ್ ವಿರುದ್ಧ ಸೋಲುಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.