ADVERTISEMENT

ಪ್ಯಾರಿಸ್ ಒಲಿಂಪಿಕ್ಸ್‌ | ನಿಯಮ ಉಲ್ಲಂಘನೆ: ಅಂತಿಮ್ ಪಂಘಲ್ ಮೇಲೆ ನಿಷೇಧ ಸಾಧ್ಯತೆ

ಪಿಟಿಐ
Published 8 ಆಗಸ್ಟ್ 2024, 3:27 IST
Last Updated 8 ಆಗಸ್ಟ್ 2024, 3:27 IST
<div class="paragraphs"><p>ಅಂತಿಮ್‌ ಪಂಘಲ್</p></div>

ಅಂತಿಮ್‌ ಪಂಘಲ್

   

ಪಿಟಿಐ

ಪ್ಯಾರಿಸ್‌: ತನ್ನ ಮಾನ್ಯತಾ ಪತ್ರದ ಮೂಲಕ ಸೋದರಿಯನ್ನು ಕ್ರೀಡಾ ಗ್ರಾಮಕ್ಕೆ ಕಳುಹಿಸಲು ಪ್ರಯತ್ನಿಸಿ ಮುಜುಗರಕ್ಕೆ ಕಾರಣರಾದ ಮಹಿಳಾ ಕುಸ್ತಿಪಟು ಅಂತಿಮ್ ಪಂಘಲ್ ಅವರಿಗೆ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಮೂರು ವರ್ಷಗಳ ನಿಷೇಧ ಹೇರುವ ಸಾಧ್ಯತೆಯಿದೆ.

ADVERTISEMENT

ಐಒಎ ಮೂಲವೊಂದು ಗುರುವಾರ ಪಿಟಿಐಗೆ ಈ ವಿಷಯ ತಿಳಿಸಿದೆ. ಬುಧವಾರ ನಡೆದ 53 ಕೆ.ಜಿ. ವಿಭಾಗದ ಮೊದಲ ಸೆಣಸಾಟದಲ್ಲೇ ಅಂತಿಮ್ ದೊಡ್ಡ ಅಂತರದಲ್ಲಿ ಟರ್ಕಿಯ ಎದುರಾಳಿಗೆ 0–10ರಿಂದ ಸೋತಿದ್ದರು.

‘ಎಲ್ಲರಿಗೂ ಮುಜುಗರಕ್ಕೆ ಕಾರಣವಾದ ಈ ವಿಷಯದ ಬಗ್ಗೆ ಐಒಎ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಕೋಚ್‌ ಸೇರಿದಂತೆ ಈ ವಿಷಯದಲ್ಲಿ ಭಾಗಿಯಾದ ಎಲ್ಲರ ಮೇಲೂ ಮೂರು ವರ್ಷಗಳ ನಿಷೇಧ ಹೇರಲು ಚಿಂತನೆಯನ್ನು ನಡೆಸಲಾಗಿದೆ’ ಎಂದು ಭಾರತದ ಪಾಳಯದ ಮೂಲವೊಂದು ತಿಳಿಸಿದೆ.

‘ಅವರು ಮೊದಲು ಭಾರತಕ್ಕೆ ತಲುಪುವುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಅವರು ಸ್ವದೇಶಕ್ಕೆ  ತಲುಪಿದ ಮೇಲಷ್ಟೇ ನಿರ್ಧಾರ ಪ್ರಕಟಿಸಲಾಗುವುದು’ ಎಂದು ಮೂಲ ತಿಳಿಸಿದೆ.

ಅಂತಿಮ್ ಅವರು ಗುರುವಾರ ಸಂಜೆ ದೆಹಲಿಗೆ ವಿಮಾನ ಹತ್ತಿದ್ದಾರೆ. ಶಿಸ್ತುಕ್ರಮದ ಭಾಗವಾಗಿ ಅವರು ಮತ್ತು ಅವರ ನೆರವು ಸಿಬ್ಬಂದಿಯನ್ನು ಭಾರತಕ್ಕೆ ಕಳುಹಿಸಲು ಐಒಎ ನಿರ್ಧರಿಸಿದೆ.

ಆಗಿದ್ದೇನು:

ವಿನೇಶ್‌ ಅವರು ಪಂದ್ಯ ಮುಗಿಸಿದ ಮೇಲೆ ಕೋಚ್‌ ಭಗತ್ ಸಿಂಗ್ ಮತ್ತು ಅಭ್ಯಾಸ ನಡೆಸಲು ಜೊತೆಗೆ ಬಂದಿದ್ದ ಇನ್ನೊಬ್ಬ ಕೋಚ್‌ ವಿಕಾಸ್ ಅವರು ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿದ್ದರು. ಕ್ರೀಡಾಗ್ರಾಮದಲ್ಲಿದ್ದ ತನ್ನ ವಸ್ತುಗಳನ್ನು ತರಲು ಸೋದರಿಯನ್ನು ಮಾನ್ಯತಾ ಪತ್ರದೊಡನೆ ಅಲ್ಲಿಗೆ ಕಳುಹಿಸಿದ್ದರು. ಇಬ್ಬರೂ ಒಂದೇ ರೀತಿಯಿದ್ದರೂ ಅಧಿಕಾರಿ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಅವರ ಹೇಳಿಕೆ ದಾಖಲಿಸಲು ಪೊಲೀಸ್‌ ಠಾಣೆಗೆ ಕರೆದೊಯ್ಯಲಾಯಿತು.

ಅಂತಿಮ್ ಅವರ ನೆರವು ಸಿಬ್ಬಂದಿ ವಿಕಾಸ್‌ ಮತ್ತು ಭಗತ್‌ ಅವರು ಟ್ಯಾಕ್ಸಿಯಲ್ಲಿ ಕುಡಿದ ಮತ್ತಿನಲ್ಲಿ ತೆರಳಿದ್ದರು. ನಂತರ ಚಾಲಕನಿಗೆ ಹಣ ನೀಡಲು ನಿರಾಕರಿಸಿದ್ದರು. ಚಾಲಕ ನಂತರ ಪೊಲೀಸರಿಗೆ ದೂರು ನೀಡಿದ್ದರು. ‘ನಾವು ಇದನ್ನೆಲ್ಲ ಶಮನಗೊಳಿಸಬೇಕಾಯಿತು’ ಎಂದು ಐಒಎ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಸಂಪರ್ಕಿಸಿದಾಗ, ವಿಕಾಸ್‌ ಇಂಥ ಪ್ರಕರಣ ನಡೆದಿರುವುದನ್ನು ನಿರಾಕರಿಸಿದರು.

‌ಅಂತಿಮ್‌ ಶಿಸ್ತು  ಉಲ್ಲಂಘಿಸಿದ್ದನ್ನು ಫ್ರಾನ್ಸ್‌ನ ಅಧಿಕಾರಿಗಳು ತನ್ನ ಗಮನಕ್ಕೆ ತಂದಿರುವುದಾಗಿ ಐಒಎ  ಹೇಳಿಕೆಯಲ್ಲಿ ತಿಳಿಸಿದೆ.

ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಪಿಟಿಐ ಜೊತೆ ಮಾತನಾಡಿದ 19 ವರ್ಷದ ಪಂಗಲ್, ‘ನಾನು ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಮಾಡಿಲ್ಲ. ನನಗೆ ಅನಾರೋಗ್ಯವಿದ್ದು, ಸ್ವಲ್ಪ ಗೊಂದಲವಾಯಿತು. ಇದೆಲ್ಲಾ ಗೊಂದಲದಿಂದ ಆಗಿರುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಆದರೆ ನಂತರ ವಿಡಿಯೊ ಹೇಳಿಕೆಯಲ್ಲಿ ಅಂತಿಮ್ ಅವರು ‘ತಾವು ಪೊಲೀಸ್‌ ಠಾಣೆಗೆ ಹೋಗಿದ್ದನ್ನು ಒಪ್ಪಿಕೊಂಡರು. ಅದು ಕೇವಲ ಮಾನೃತಾ ಪತ್ರ ದೃಢೀಕರಣಕ್ಕಾಗಿಯಷ್ಟೇ’ ಎಂದಿದ್ದಾರೆ.

‘ನನಗೆ ಒಳ್ಳೆಯ ದಿನವಾಗಿರಲಿಲ್ಲ. ನಾನು ಸೆಣಸಾಟದಲ್ಲಿ ಸೋತೆ. ನನ್ನ ಬಗ್ಗೆ ಇಲ್ಲಸಲ್ಲದ್ದು ಹಬ್ಬಿಸಲಾಯಿತು. ಅವೆಲ್ಲಾ ಸುಳ್ಳು. ನನಗೆ ತುಂಬಾ ಜ್ವರವಿತ್ತು. ನನ್ನ ಸೋದರಿಯ ಜೊತೆ ಹೋಟೆಲ್‌ಗೆ ಹೋಗಲು ನನ್ನ ಕೋಚ್‌ನಿಂದ ಅನುಮತಿ ಪಡೆದಿದ್ದೆ’ ಎಂದಿದ್ದಾರೆ.

‘ಕ್ರೀಡಾ ಗ್ರಾಮದಲ್ಲಿದ್ದ ನನ್ನ ಕೆಲವು ವಸ್ತುಗಳನ್ನು ತರಬೇಕಿತ್ತು. ನನ್ನ ಸೋದರಿ ನನ್ನ ಮಾನ್ಯತಾ ಪತ್ರ ಪಡೆದಳು. ಅಲ್ಲಿದ್ದ ಅಧಿಕಾರಿಗಳ ಬಳಿ ತನ್ನ ವಸ್ತುಗಳನ್ನು ಪಡೆಯಬಹುದೇ ಎಂದು ಕೇಳಿದಳು. ಅವರು ಆಕೆಯನ್ನು ಮಾನ್ಯತಾ ಪತ್ರ ದೃಢೀಕರಣಕ್ಕೆ ಠಾಣೆಗೆ ಕರೆದೊಯ್ದರು’ ಎಂದು ವಿವರಿಸಿದರು.

ತಮ್ಮ ಕೋಚ್‌ಗಳು ಕುಡಿದ ಮತ್ತಿನಲ್ಲಿ ಕ್ಯಾಬ್‌ ಚಾಲಕನ ಜೊತೆ ದರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆಸಿದ್ದನ್ನು ಅಂತಿಮ್ ನಿರಾಕರಿಸಿದರು.

‘ನನ್ನ ಕೋಚ್‌ಗಳು ಸ್ಥಳದಲ್ಲೇ ಉಳಿದಿದ್ದರು. ಅವರೂ ನಮ್ಮ ಜೊತೆ ಬರಲು ಬಯಸಿದ್ದರು. ನಾವು ಅವರಿಗೆ ಕ್ಯಾಬ್‌ ಬುಕ್‌ ಮಾಡಿದ್ದೆವು. ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ಭಾಷೆ ಬರದಿದ್ದ ಕಾರಣ ಚಾಲಕನ ಜೊತೆ ವಾದ ಆರಂಭವಾಗಿರಬಹುದು’ ಎಂದರು.

ಹೋಟೆಲ್ ರೂಮ್‌ನಿಂದ ಅವರು ಕೆಲವು ಯುರೊಗಳನ್ನು ಪಡೆಯಲು ಬಂದಿದ್ದರು. ಇದು ವಾಗ್ವಾದಕ್ಕೆ ದಾರಿ ಮಾಡಿತು. ನಾನು ಈಗಾಗಲೇ ಸೋತಿದ್ದೇನೆ. ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ. ನನ್ನನ್ನು ಬೆಂಬಲಿಸಿ’ ಎಂದು ಅಂತಿಮ್ ಮನವಿ ಮಾಡಿದ್ದಾರೆ.

ಆಘಾತ, ಮುಜುಗರ....
ಭಾರತಕ್ಕೆ ಕ್ರೀಡೆಗಳ 13ನೇ ದಿನ (ಬುಧವಾರ) ಸುದಿನವಾಗಲಿಲ್ಲ. ಫೈನಲ್ ಆಡಬೇಕಾದ ವಿನೇಶ್ ಫೋಗಟ್‌ ಬೆಳಿಗ್ಗೆ 100 ಗ್ರಾಂ ಹೆಚ್ಚು ತೂಕ ತೂಗಿದ ಕಾರಣ ಅರ್ನಹರಾಗಿದ್ದು ಆಘಾತಕ್ಕೆ ಕಾರಣವಾಯಿತು. ಅಂತಿಮ್ ಪಂಘಲ್‌ ಅವರು ಶಿಸ್ತುಕ್ರಮ ಉಲ್ಲಂಘಿಸಿ ಭಾರತದ ಪಾಳಯ ಮುಜುಗರ ಎದುರಿಸಬೇಕಾಯಿತು. ಸಂಜೆ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬಹುತೇಕ ಹೊತ್ತು ಮೂರನೇ ಸ್ಥಾನದಲ್ಲಿದ್ದರು, ಅಂತಿಮವಾಗಿ ನಾಲ್ಕನೇ ಸ್ಥಾನಕ್ಕೆ ಸರಿಯಬೇಕಾಯಿತು. ಮೂರು ವರ್ಷ ಹಿಂದೆ ಚಾನು ಅವರು ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದರು. ಅಥ್ಲೀಟುಗಳ ನಿರಾಶಾದಾಯಕ ಪ್ರದರ್ಶನ ಮುಂದುವರಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.