ADVERTISEMENT

ಮೈಸೂರಿನಲ್ಲಿ ಮಹಿಳಾ ಕುಸ್ತಿ ಶಾಲೆ ಆರಂಭಿಸಿ: ಕುಸ್ತಿಪಟು ಸಾಕ್ಷಿ ಮಲಿಕ್ ಮನವಿ

ದಸರಾ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 20:30 IST
Last Updated 29 ಸೆಪ್ಟೆಂಬರ್ 2022, 20:30 IST
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟವನ್ನು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ  ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಸಚಿವರಾದ ಕೆ.ಸಿ.ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌ ಇದ್ದರು
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟವನ್ನು ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ  ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಸಚಿವರಾದ ಕೆ.ಸಿ.ನಾರಾಯಣಗೌಡ, ಎಸ್‌.ಟಿ.ಸೋಮಶೇಖರ್‌ ಇದ್ದರು   

ಮೈಸೂರು:‘ಮಹಿಳಾ ಕುಸ್ತಿಪಟುಗಳನ್ನು ಪ್ರೋತ್ಸಾಹಿಸಲು ಮೈಸೂರಿನಲ್ಲಿ ಕುಸ್ತಿ ವಸತಿ ಶಾಲೆ ಆರಂಭಿಸಬೇಕು. ಅದರಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸ್ಪರ್ಧಿಗಳು ಸಾಧನೆ ಮಾಡುವುದು ಖಚಿತ. ಕ್ರೀಡಾ ಸಚಿವರು ನನ್ನ ಮನವಿ ಈಡೇರಿಸಬೇಕು’ ಎಂದು ರಿಯೊ ಒಲಿಂಪಿಕ್ಸ್‌ ಪದಕವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದರು.

ಗುರುವಾರ ಸಂಜೆಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅವರು ಮಾತನಾಡಿದರು.

‘ನಾನು ಎಂಟು ವರ್ಷವಾಗಿದ್ದಾಗಿನಿಂದಲೂ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದೇನೆ. ಒಲಿಂಪಿಂಕ್ಸ್‌ನಲ್ಲಿ ಪದಕ ಗೆದ್ದದ್ದು ಅಪೂರ್ವ ಕ್ಷಣ. ಶಿಸ್ತು- ಪರಿಶ್ರಮ ಗುರಿ ತಲುಪಿಸುತ್ತದೆ. ಕನಸುಗಳನ್ನು ಈಡೇರಿಸುತ್ತದೆ’ ಎಂದರು.

ADVERTISEMENT

ಈ ಸಂದರ್ಭದಲ್ಲಿಪಥ ಸಂಚಲನ ನಡೆಸಿದ ಮೈಸೂರು, ಕಲಬುರ್ಗಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ವಲಯಗಳ ಕ್ರೀಡಾಪಟುಗಳಿಂದ ಸಾಕ್ಷಿ ಮಲಿಕ್ ಗೌರವ ವಂದನೆ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ಕ್ರೀಡಾ ಸಚಿವಕೆ.ಸಿ.ನಾರಾಯಣ ಗೌಡ, ‘₹ 504 ಕೋಟಿ ಅನುದಾನದಲ್ಲಿ ರಾಜ್ಯದ ಪ್ರತಿ ಗ್ರಾಮದಲ್ಲೂ ಕ್ರೀಡಾಂಗಣ ನಿರ್ಮಿಸಲಾಗುವುದು. 100 ಗರಡಿ ಮನೆಗಳಿಗೆ ಕಾಯಕಲ್ಪ ನೀಡಲಾಗಿದೆ’ ಎಂದರು.

ಅಕ್ಟೋಬರ್ 2ರ ವರೆಗೆ ನಡೆಯುವ ಕ್ರೀಡಾಕೂಟದಲ್ಲಿ 27 ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 4,500 ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ದಸರಾ ಕ್ರೀಡಾಕೂಟದ ಕ್ರೀಡಾಜ್ಯೋತಿಯ ಯಾತ್ರೆಗೆ ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಕ್ರೀಡಾಜ್ಯೋತಿ ರಿಲೇ ನಡೆದು ಸಂಜೆ 3.30ಕ್ಕೆ ನಜರಾಬಾದ್‌ನ ನಿಂಬಜಾದೇವಿ ದೇವಸ್ಥಾನಕ್ಕೆ ತರಲಾಯಿತು. ನಂತರ ಕ್ರೀಡಾಪಟುಗಳಿಂದ ಜ್ಯೋತಿಯನ್ನು ಮೇಯರ್ ಶಿವಕುಮಾರ್ ಸ್ವೀಕರಿಸಿದರು.

ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ (ಕೆಒಎ) ಅಧ್ಯಕ್ಷ ಗೋವಿಂದರಾಜ್, ಮೈಲ್ಯಾಕ್ ಅಧ್ಯಕ್ಷ ಆರ್.ರಘು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಹಾಜರಿದ್ದರು.

ದಸರಾ ಪಂಜಕುಸ್ತಿ ಸ್ಪರ್ಧೆಯಲ್ಲಿ ಆಂಥೋಣಪ್ಪ– ದಸರಾ ವಿಶೇಷ ಚೇತನ, ಮಧುರಾ– ದಸರಾ ಕುಮಾರಿ, ಪುನೀತ್‌– ದಸರಾ ಶ್ರೀ ಮತ್ತು ರಿಜ್ವಾನ್‌ ಜಾಮದಾರ್‌– ದಸರಾ ನವ ಚೇತನಾ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.