ADVERTISEMENT

ರೆಫರಿ ಮೇಲೆ ಹಲ್ಲೆ: ಕುಸ್ತಿಪಟು ಸತ್ಯೆಂದರ್‌ ಮಲಿಕ್‌ಗೆ ಆಜೀವ ನಿಷೇಧ

ಕಾಮನ್‌ವೆಲ್ತ್‌ ಗೇಮ್ಸ್ ಆಯ್ಕೆ ಟ್ರಯಲ್ಸ್ ವೇಳೆ ಘಟನೆ

ಪಿಟಿಐ
Published 17 ಮೇ 2022, 13:40 IST
Last Updated 17 ಮೇ 2022, 13:40 IST
ಸತ್ಯೆಂದರ್ ಮಲಿಕ್‌– ಟ್ವಿಟರ್‌ ಚಿತ್ರ
ಸತ್ಯೆಂದರ್ ಮಲಿಕ್‌– ಟ್ವಿಟರ್‌ ಚಿತ್ರ   

ನವದೆಹಲಿ: ಕಾಮನ್‌ವೆಲ್ತ್‌ ಗೇಮ್ಸ್ ಆಯ್ಕೆ ಟ್ರಯಲ್ಸ್ ವೇಳೆ ರೆಫರಿ ಮೇಲೆ ಹಲ್ಲೆ ನಡೆಸಿದ ಕುಸ್ತಿಪಟು ಸತ್ಯೆಂದರ್‌ ಮಲಿಕ್ ಅವರಿಗೆ ರಾಷ್ಟ್ರೀಯ ಫೆಡರೇಷನ್‌ ಆಜೀವ ನಿಷೇಧ ಹೇರಿದೆ.

ಮಂಗಳವಾರ ನಡೆದ 125 ಕೆಜಿ ವಿಭಾಗದ ಫೈನಲ್‌ ಬೌಟ್‌ನಲ್ಲಿ ಸತ್ಯೆಂದರ್‌ ಅವರು ರೆಫರಿ ಜಗಬೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ.

ಏರ್‌ಫೋರ್ಸ್‌ ತಂಡದ ಸತ್ಯೆಂದರ್‌, ಬೌಟ್‌ ಕೊನೆಗೊಳ್ಳಲು 18 ಸೆಕೆಂಡುಗಳಿರುವಾಗ 3–0ಯಿಂದ ಮುನ್ನಡೆಯಲ್ಲಿದ್ದರು. ಈ ವೇಳೆ ‘ಟೇಕ್‌ಡೌನ್‘ ನಡೆ ಪ್ರಯೋಗಿಸಿದ ಎದುರಾಳಿ ಮೋಹಿತ್‌ ಸತ್ಯೇಂದರ್ ಅವರನ್ನು ಮ್ಯಾಟ್‌ನಿಂದ ಹೊರದೂಡಿದರು. ಆದರೆ ರೆಫರಿ ವೀರೇಂದ್ರ ಮಲಿಕ್‌ ಟೇಕ್‌ಡೌನ್‌ಗೆ ಮಾತ್ರ ಎರಡು ಪಾಯಿಂಟ್‌ ನೀಡಿ, ಹೊರದೂಡಿದ್ದಕ್ಕೆ ಪಾಯಿಂಟ್‌ ನೀಡಲಿಲ್ಲ.

ADVERTISEMENT

ಇದರಿಂದ ಅಸಮಾಧಾನಗೊಂಡ ಮೋಹಿತ್‌, ಪಾಯಿಂಟ್‌ಗಾಗಿ ಮೇಲ್ಮನವಿ ಸಲ್ಲಿಸಿದರು. ಬೌಟ್‌ನ ಜ್ಯೂರಿ ಆಗಿದ್ದ ಸತ್ಯದೇವ್‌ ಮಲಿಕ್‌, ರೆಫರಿಯ ನಿರ್ಧಾರಕ್ಕೆ ಕ್ಷಮೆ ಕೋರಿದರು.

ಸೀನಿಯರ್ ರೆಫರಿ ಆಗಿದ್ದ ಜಗಬೀರ್ ಸಿಂಗ್ ಅವರು ಮೋಹಿತ್‌ ಮನವಿಯನ್ನು ಪರಿಗಣಿಸಿ ಟಿವಿ ಮರುಪರಿಶೀಲನೆಗೆ ಸೂಚಿಸಿದರು. ಬಳಿಕ ಮೋಹಿತ್‌ ಅವರಿಗೆ ಮೂರು ಪಾಯಿಂಟ್ಸ್ ನೀಡಿದರು. ಈ ವೇಳೆ ಬೌಟ್‌ 3–3ರಿಂದ ಸಮಬಲವಾಯಿತು. ಬೌಟ್‌ ಸಮಬಲದಲ್ಲೇ ಕೊನೆಯಾಯಿತು. ಆದರೆ ಬೌಟ್‌ನ ಕೊನೆಯ ಪಾಯಿಂಟ್‌ ಗಳಿಸಿದ್ದ ಮೋಹಿತ್ ಅವರನ್ನು ವಿಜಯೀ ಎಂದು ಪ್ರಕಟಿಸಲಾಯಿತು.

ಇದರಿಂದ ಸಂಯಮ ಕಳೆದುಕೊಂಡ ಸತ್ಯೆಂದರ್‌ ಇನ್ನೊಂದು ಬೌಟ್‌ ನಡೆಯುತ್ತಿದ್ದ ಮ್ಯಾಟ್‌ಗೆ ತೆರಳಿ ಅಲ್ಲಿದ್ದ ಜಗಬೀರ್ ಸಿಂಗ್ ಮೇಲೆ ಹಲ್ಲೆ ನಡೆಸಿದರು. ಆರಂಭದಲ್ಲಿ ಜಗಬೀರ್‌ ಅವರನ್ನು ನಿಂದಿಸಿದ ಸತ್ಯೇಂದರ್‌, ಬಳಿಕ ಕಪಾಳಕ್ಕೆ ಹೊಡೆದರು. ಇದರಿಂದ ಸಮತೋಲನ ಕಳೆದುಕೊಂಡ ರೆಫರಿ ನೆಲಕ್ಕೆ ಬಿದ್ದರು. ಹೀಗಾಗಿ ಆ ವೇಳೆ ನಡೆಯುತ್ತಿದ್ದ 57 ಕೆಜಿ ವಿಭಾಗದ ಫೈನಲ್‌ ಬೌಟ್‌ಅನ್ನು (ರವಿ ದಹಿಯಾ ಮತ್ತು ಅಮನ್‌ ನಡುವಣ) ಸ್ಥಗಿತಗೊಳಿಸಲಾಯಿತು.

ಬಳಿಕ ಸತ್ಯೆಂದರ್‌ ಅವರನ್ನು ಹೊರಗೆ ಕಳುಹಿಸಿ ಬೌಟ್‌ ಪುನರಾರಂಭಿಸಲಾಯಿತು. ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷನ್ ಶರಣ್ ಸಿಂಗ್‌ ಈ ಘಟನೆಗೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.