ADVERTISEMENT

ಬ್ರಿಜ್‌ಭೂಷಣ್‌ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 3:04 IST
Last Updated 29 ಏಪ್ರಿಲ್ 2023, 3:04 IST
ಕುಸ್ತಿಪಟುಗಳಾದ ವಿನೇಶಾ ಫೋಗಟ್‌, ಸಂಗೀತಾ ಫೋಗಟ್‌ ಮತ್ತು ಸಾಕ್ಷಿ ಮಲಿಕ್‌ ಅವರು ಧರಣಿ ನಡೆಸುತ್ತಿರುವ ಜಂತರ್‌ ಮಂಥರ್‌ನಲ್ಲಿ ಶುಕ್ರವಾರ ವ್ಯಾಯಾಮ ಮಾಡಿದರು
ಕುಸ್ತಿಪಟುಗಳಾದ ವಿನೇಶಾ ಫೋಗಟ್‌, ಸಂಗೀತಾ ಫೋಗಟ್‌ ಮತ್ತು ಸಾಕ್ಷಿ ಮಲಿಕ್‌ ಅವರು ಧರಣಿ ನಡೆಸುತ್ತಿರುವ ಜಂತರ್‌ ಮಂಥರ್‌ನಲ್ಲಿ ಶುಕ್ರವಾರ ವ್ಯಾಯಾಮ ಮಾಡಿದರು    ಚಿತ್ರ: ಪಿಟಿಐ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಪೋಕ್ಸೊ ಸೇರಿದಂತೆ ಎರಡು ಎಫ್‌ಐಆರ್‌ ದಾಖಲಿಸಿದ್ದಾರೆ. ಆದರೂ ಕಳೆದ ಆರು ದಿನಗಳಿಂದ ಜಂತರ್‌ ಮಂಥರ್‌ನಲ್ಲಿ ನಡೆಸುತ್ತಿರುವ ಧರಣಿಯನ್ನು ಮುಂದುವರಿಸಲು ಕುಸ್ತಿಪಟುಗಳು ತೀರ್ಮಾನಿಸಿದ್ದಾರೆ.

‘ಬ್ರಿ‌ಜ್‌ಭೂಷಣ್‌ ವಿರುದ್ಧ ಶುಕ್ರವಾರ ಎಫ್‌ಐಆರ್‌ ದಾಖಲಿಸಲಾಗುವುದು’ ಎಂದು ದೆಹಲಿ ಪೊಲೀಸರನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ ಪೀಠಕ್ಕೆ ತಿಳಿಸಿದರು. ಅದರ ಬೆನ್ನಲ್ಲೇ ಎಫ್‌ಐಆರ್‌ ದಾಖಲಾಗಿದೆ.

ಅಪ್ತಾಪ್ತ ವಯಸ್ಸಿನ ಕುಸ್ತಿಪಟು ಮೇಲೆ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿರುವುದರಿಂದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

‘ಎಫ್‌ಐಆರ್‌ ದಾಖಲಿಸಲು ನಿರ್ಧರಿಸಿರುವುದು ಗೆಲುವಿನ ಹಾದಿಯಲ್ಲಿ ಇಟ್ಟಿರುವ ಮೊದಲ ಹೆಜ್ಜೆ. ಆದರೆ ಬ್ರಿಜ್‌ಭೂಷಣ್‌ ಬಂಧನದವರೆಗೂ ಧರಣಿ ಮುಂದುವರಿಯಲಿದೆ’ ಎಂದು ಸಾಕ್ಷಿ ಮಲಿಕ್‌ ಇದಕ್ಕೂ ಮುನ್ನ
ಪ್ರತಿಕ್ರಿಯಿದ್ದರು.

‘ದೆಹಲಿ ಪೊಲೀಸರು ದಾಖಲಿಸಲಿರುವ ಎಫ್‌ಐಆರ್‌ ಮೇಲೆ ನಮಗೆ ನಂಬಿಕೆಯಿಲ್ಲ. ಎಫ್‌ಐಆರ್‌ನಲ್ಲಿ ಏನೇನಿದೆ ಎಂಬುದನ್ನು ತಿಳಿದುಕೊಂಡ ಬಳಿಕ ಮುಂದಿನ ನಿರ್ಧಾರ (ಧರಣಿ ಕೈಬಿಡುವ ಬಗ್ಗೆ) ತೆಗೆದುಕೊಳ್ಳುತ್ತೇವೆ. ಬ್ರಿಜ್‌ಭೂಷಣ್‌ ಅವರು ಹೊಂದಿರುವ ಎಲ್ಲ ಹುದ್ದೆಗಳನ್ನೂ ಕಿತ್ತುಹಾಕಿ ಜೈಲಿಗೆ ಕಳುಹಿಸಬೇಕು. ಇಲ್ಲದಿದ್ದರೆ ಅವರು ತನಿಖೆಯ ಮೇಲೆ ಪ್ರಭಾವ ಬೀರಲಿದ್ದಾರೆ’ ಎಂದು ವಿನೇಶಾ ಫೋಗಟ್‌ ಹೇಳಿದ್ದಾರೆ.

‘ಹಲವು ಕ್ರೀಡಾಪಟುಗಳು ಮತ್ತು ಬಾಲಿವುಡ್‌ ನಟ, ನಟಿಯರು ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದಿದ್ದಾರೆ.

‘ಕುಸ್ತಿಪಟುಗಳ ಜೀವದ ಮೇಲೆ ಬೆದರಿಕೆಯಿದ್ದರೂ, ಎಲ್ಲರೂ ಒಗ್ಗಟ್ಟಿನಿಂದ ಇದುವರೆಗೆ ಪ್ರತಿಭಟನೆ ನಡೆಸಿದ್ದೇವೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ’ ಎಂದು ಬಜರಂಗ್‌ ಪೂನಿಯಾ ಅಸಮಾಧಾನ ಹೊರಹಾಕಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿರುವ ಕುಸ್ತಿಪಟುಗಳು ಧರಣಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.