ಅಂತಿಮ್ ಪಂಘಲ್
ಪಿಟಿಐ ಚಿತ್ರ
ಝಾಗ್ರೆಬ್ (ಕ್ರೊವೇಷ್ಯಾ): ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಲೂಸಿಯಾ ಯೆಪೆಝ್ ಗುಝ್ಮನ್ ಅವರ ಎದುರು ಬುಧವಾರ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ ಭಾರತದ ಅಂತಿಮ್ ಪಂಘಲ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಸೆಣಸಾಡಲಿದ್ದಾರೆ.
ಮನಿಷಾ ಭಾನವಾಲಾ (62 ಕೆ.ಜಿ) ಅವರು ರೆಪೆಷಾಜ್ ಮೂಲಕ ಪದಕದ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆದರೆ ರಾಧಿಕಾ (68 ಕೆ.ಜಿ) ಮತ್ತು ಜ್ಯೋತಿ ಬೆರಿವಾಲ್ ಅವರು ಈ ಪ್ರತಿಷ್ಠಿತ ಕೂಟದ ಐದನೇ ದಿನ ಆರಂಭದ ಹಂತದಲ್ಲಿ ಹೊರಬಿದ್ದರು.
2023ರ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದ ಅಂತಿಮ್, ಈ ಬಾರಿ ಸ್ಪೇನ್‌ನ ಕಾರ್ಲಾ ಜುಮೆ ಸೊನೆರ್ ಅವರನ್ನು ಕೇವಲ 23 ಸೆಕೆಂಡುಗಳಲ್ಲಿ ಸೋಲಿಸಿ ಉತ್ತಮ ಆರಂಭ ಮಾಡಿದ್ದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾದ ಝಾಂಗ್ ಅವರನ್ನು 9–8 ರಿಂದ ಸೋಲಿಸಲು ಅಂತಿಮ ಕ್ಷಣದವರೆಗೆ ಪರಿಶ್ರಮಪಡಬೇಕಾಯಿತು. ಆದರೆ ಈಕ್ವೆಡೋರ್‌ನ ಗುಝ್ಮನ್ ಅವರು ಸೆಮಿಫೈನಲ್‌ನಲ್ಲಿ ಹಿಡಿತ ಸಾಧಿಸಿ ಭಾರತದ ಪೈಲ್ವಾನ್ ವಿರುದ್ಧ 5–3ರಲ್ಲಿ ಜಯಗಳಿಸಿದರು. ತಾಂತ್ರಿಕ ಕೌಶಲದಲ್ಲೂ ಗುಝ್ಮನ್ ಮುಂದಿದ್ದರು.
ಮನಿಷಾ ಅವರು 0–8 ರಿಂದ ಉತ್ತರ ಕೊರಿಯಾದ ಒಕ್ ಜು ಕಿಮ್ ಎದುರು ಹೆಚ್ಚಿನದೇನನ್ನೂ ಸಾಧಿಸಲಾಗಲಿಲ್ಲ. ಕಿಮ್ ನಂತರ ಫೈನಲ್‌ವರೆಗೆ ತಲುಪಿದ ಕಾರಣ ಮನಿಷಾ ಅವರಿಗೆ ರೆಪೆಷಾಜ್ ಮೂಲಕ ಪದಕ ಗೆಲ್ಲುವ ಅವಕಾಶ ಜೀವಂತವಾಗಿ ಉಳಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.