ಝಾಗ್ರೆಬ್ (ಕ್ರೊವೇಷ್ಯಾ): ಭಾರತದ ಕುಸ್ತಿಪಟುಗಳು ಇಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ದಿನವೂ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದರು.
ಯುವ ಕುಸ್ತಿಪಟು ಅಂಕುಷ್ ಅವರು ಮಹಿಳೆಯರ 50 ಕೆ.ಜಿ. ವಿಭಾಗದ ಕ್ವಾಲಿಫಿಕೇಶನ್ ಸುತ್ತಿನಲ್ಲಿ 5–6ರಿಂದ ಬೆಲರೂಸ್‌ನ ನಶಾಲಿಯಾ ವರಕಿನಾ ಎದುರು ವೀರೋಚಿತ ಸೋಲು ಕಂಡರು. ತಪಸ್ಯಾ ಅವರು 2–4ರಿಂದ ಮೆಕ್ಸಿಕೊದ ಬೆರ್ತಾ ರೋಜಾಸ್ ಚಾವೆಝ್ ಅವರಿಗೆ ಮಣಿದರು.
ಪುರುಷರ 65 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಕಣಕ್ಕಿಳಿದಿರುವ ಸುಜೀತ್ ಕಲ್ಕಲ್ ಅವರು 5–7ರಿಂದ ಅಮೆರಿಕದ ರಿಯಲ್ ಮಾರ್ಷಲ್ ರೇ ವುಡ್ಸ್ ಎದುರು ಸೋತು ಅಭಿಯಾನ ಮುಗಿಸಿದರು. 97 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕ್ಕಿ ಅವರು ಬಲ್ಗೇರಿಯಾದ ಅಖ್ಮದ್ ಮಗಮೇವ್ ವಿರುದ್ಧ ಪರಾಭವಗೊಂಡರು. ಸುಜೀತ್ ಅವರು ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರೆಹಮಾನ್ ಮೌಸಾ ಎದುರು 5–6ರಿಂದ ವೀರೋಚಿತ ಸೋಲು ಕಂಡಿದ್ದರು.
ವೈಷ್ಣವಿ ಪಾಟೀಲ (65 ಕೆ.ಜಿ.) ಹಾಗೂ ಪ್ರಿಯಾ ಮಲಿಕ್ (76 ಕೆ.ಜಿ.) ಅವರು ಮಂಗಳವಾರ ತಡರಾತ್ರಿ ನಡೆಯಲಿರುವ ಪಂದ್ಯಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.