ADVERTISEMENT

PV Web Exclusive| ಕುಸ್ತಿ ಕಣದ ‘ಸುಲ್ತಾನ’ನ ವಿವಾದದ ಪಯಣ

ವಿಕ್ರಂ ಕಾಂತಿಕೆರೆ
Published 23 ಮೇ 2021, 9:12 IST
Last Updated 23 ಮೇ 2021, 9:12 IST
ದೆಹಲಿಯಲ್ಲಿ 2019ರಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಸೆಣಸಿದ ಸುಶೀಲ್ ಕುಮಾರ್ (ಕೆಂಪು ಪೋಷಾಕು) –ಪಿಟಿಐ ಚಿತ್ರ
ದೆಹಲಿಯಲ್ಲಿ 2019ರಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಸೆಣಸಿದ ಸುಶೀಲ್ ಕುಮಾರ್ (ಕೆಂಪು ಪೋಷಾಕು) –ಪಿಟಿಐ ಚಿತ್ರ   

ಅದು, 2017ರ ಡಿಸೆಂಬರ್‌. ನವದೆಹಲಿಯ ಕೆ.ಡಿ.ಜಾಧವ್‌ ಅರೇನಾದಲ್ಲಿ ಕಾಮನ್ವೆಲ್ತ್‌ ಕ್ರೀಡಾಕೂಟದ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. 74 ಕೆ.ಜಿ.ವಿಭಾಗದ ಬೌಟ್‌ನಲ್ಲಿ ಪ್ರವೀಣ್‌ ರಾಣಾ ಎದುರುಒಲಿಂಪಿಯನ್ ಸುಶೀಲ್ ಕುಮಾರ್ ಗೆದ್ದಿದ್ದರು. ಆದರೆ ಸ್ಪರ್ಧೆಯ ನಂತರ ಕುಸ್ತಿ ಕಣ ರಣಾಂಗಣವಾಗಿ ಬದಲಾಗಿತ್ತು. ಪ್ರವೀಣ್‌ ಮತ್ತು ಅವರ ಹಿರಿಯ ಸಹೋದರ ನವೀನ್‌ ಮೇಲೆ ಸುಶೀಲ್‌ ಬೆಂಬಲಿಗರು ದಾಳಿ ಮಾಡಿ ಥಳಿಸಿದ್ದರು. ಘಟನೆಯ ನಂತರ ಸುಶೀಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಮತ್ತೊಂದು ಘಟನೆ

2019ರಲ್ಲಿ ನಡೆದದ್ದು. ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಕೆ.ಡಿ.ಜಾಧವ್‌ ಅರೇನಾದಲ್ಲಿ ಆಯೋಜಿಸಲಾಗಿದ್ದ ಆಯ್ಕೆ ಟ್ರಯಲ್ಸ್‌. 74 ಕೆ.ಜಿ.ವಿಭಾಗದ ಬೌಟ್‌ ವಿವಾದದ ಸ್ವರೂಪ ಪಡೆದುಕೊಂಡಿತ್ತು. ಜಿತೇಂದರ್‌ ಕುಮಾರ್‌ ಎದುರಿನ ಫೈನಲ್‌ ಹೋರಾಟದಲ್ಲಿ ಸುಶೀಲ್‌ ‘ಕ್ರೀಡಾ ಸ್ಫೂರ್ತಿ’ಯನ್ನೇ ಮರೆತು ವರ್ತಿಸಿದ್ದೇ ಇದಕ್ಕೆ ಕಾರಣ.

ADVERTISEMENT

ಅನುಭವಿ ಸುಶೀಲ್‌ 4–2 ಪಾಯಿಂಟ್ಸ್‌ನಿಂದ ಜಿತೇಂದರ್ ಅವರನ್ನು ‘ಚಿತ್‌’ ಮಾಡಿದ್ದರು. ಆದರೆ ಅದಕ್ಕೂ ಮೊದಲು ಮ್ಯಾಟ್‌ನಲ್ಲಿ ಅಹಿತಕರ ಪ್ರಸಂಗ ನಡೆದಿತ್ತು. ಮೊದಲಾರ್ಧದಲ್ಲಿ ಪರಾಕ್ರಮ ಮೆರೆದು 4–0 ಮುನ್ನಡೆ ಗಳಿಸಿದ್ದ ಸುಶೀಲ್‌ ದ್ವಿತೀಯಾರ್ಧದಲ್ಲಿ ಒರಟು ಆಟ ಆಡಿದ್ದರು. ಹೆಬ್ಬೆರಳಿನಿಂದ ಜಿತೇಂದರ್‌ ಅವರ ಎಡಗಣ್ಣಿಗೆ ತಿವಿದಿದ್ದರು. ಜಿತೇಂದರ್‌ ಕಣ್ಣಿಂದ ರಕ್ತ ಸುರಿದಿತ್ತು. ನೋವು ತಾಳಲಾರದೆ ಅವರು ಮ್ಯಾಟ್‌ನಲ್ಲೇ ಬಿದ್ದು ಒದ್ದಾಡಿದ್ದರು. ಅವರ ಕೋಚ್‌ ಜೈವೀರ್‌ ಆಕ್ಷೇಪ ಸಲ್ಲಿಸಿದ್ದರು. ಸ್ಪರ್ಧೆಯ ನಂತರ ಜಿತೇಂದರ್ ಬೇಸರದ ನುಡಿಗಳನ್ನಾಡಿದ್ದರು.

ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತ, ಭಾರತದ ಕುಸ್ತಿಗೆ ವಿಶ್ವಮಟ್ಟದಲ್ಲಿ ಹೊಸ ಛಾಪು ತಂದುಕೊಟ್ಟ, ಅನೇಕ ಯುವ ಕುಸ್ತಿಪಟುಗಳು ಒಲಿಂಪಿಕ್ಸ್ ಕನಸು ಕಾಣುವಂತೆ ಮಾಡಿದ್ದ ‘ದೆಹಲಿ ಸುಲ್ತಾನ್’ ಸುಶೀಲ್ ಕುಮಾರ್ ಅವರ ಒಳಗಿನ ಕೊಳಕನ್ನು ಎತ್ತಿತೋರಿಸಲು ಇಂಥ ಅನೇಕ ಪ್ರಸಂಗಗಳು ಇವೆ. ಕುಸ್ತಿಯಲ್ಲಿ ಪಳಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಿದ್ದಂತೆ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದ್ದ ಸುಶೀಲ್ ಸ್ಪರ್ಧಾಕಣದಲ್ಲೂ ವೈಯಕ್ತಿಕ ಬದುಕಿನಲ್ಲೂ ದುಷ್ಟತನ ಬೆಳೆಸಿಕೊಂಡರು. ಗಳಿಸಿದ ಖ್ಯಾತಿ ಅವರಲ್ಲಿ ದುರಂಹಕಾರವನ್ನು ತುಂಬಿತ್ತು. ತಪ್ಪುಗಳನ್ನು ಮಾಡುತ್ತ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತ ಸಾಗಿ ಬಂದಿದ್ದ ಅವರು ಈಗ ಕೊಲೆ ಪ್ರಕರಣದಲ್ಲೂ ಸಿಕ್ಕಿಬಿದ್ದಿದ್ದಾರೆ. ರಾಣಾ ಕುಟುಂಬದ ಮೇಲೆ ಸದಾ ಕೆಂಗಣ್ಣು ಬೀರುತ್ತಿದ್ದ ಸುಶೀಲ್‌ ಅವರನ್ನು ಯುವ ಕುಸ್ತಿಪಟು ಸಾಗರ್ ರಾಣಾ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಲ್ಲಿಗೆ ವಿಶ್ವಮಟ್ಟದ ಕ್ರೀಡಾಪಟುವೊಬ್ಬನ ಬದುಕು ಮೂರಾಬಟ್ಟೆಯಾಗಿ ಬದಲಾಗಿದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್‌ಗಳು ಅವರ ದುಷ್ಟ ಪ್ರವೃತ್ತಿಗೆ ತಲೆತಗ್ಗಿಸಿವೆ.

ಖ್ಯಾತಿಗಾಗಿ ಕ್ಯಾತೆ ತೆಗೆಯುವ ಪೈಲ್ವಾನ್

ಅವಕಾಶಗಳಿಗಾಗಿ, ಆ ಮೂಲಕ ಖ್ಯಾತಿ ಗಳಿಸುವುದಕ್ಕಾಗಿ ಏನು ಮಾಡುವುದಕ್ಕೂ ಸಿದ್ದ ಎಂಬಂತಿತ್ತು ಸುಶೀಲ್ ಕುಮಾರ್ ಅವರ ವರ್ತನೆ. ಇದನ್ನು ವೃತ್ತಿಜೀವನದ ಉದ್ದಕ್ಕೂ ಅವರು ‘ಪಾಲಿಸಿಕೊಂಡು’ ಬಂದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತನಗೇ ಅವಕಾಶ ನೀಡಬೇಕೆಂದು ಸುಶೀಲ್‌ ಹಠ ಹಿಡಿದಿದ್ದರು. ನರಸಿಂಗ್‌ ಯಾದವ್‌ 2015ರಲ್ಲಿ ಲಾಸ್‌ ವೇಗಸ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು. ಇದು ಗೊತ್ತಾದ ಕೂಡಲೇ ಟ್ರಯಲ್ಸ್‌ ನಡೆಸಬೇಕೆಂದು ಸುಶೀಲ್ ಪಟ್ಟು ಹಿಡಿದಿದ್ದರು. ಭಾರತ ಕುಸ್ತಿ ಫೆಡರೇಷನ್‌ ಇದಕ್ಕೆ ಸೊಪ್ಪು ಹಾಕದಿದ್ದಾಗ ಕಾನೂನು ಹೋರಾಟಕ್ಕೂ ಮುಂದಾಗಿದ್ದರು. ದೆಹಲಿ ನ್ಯಾಯಾಲಯ ಸುಶೀಲ್‌ ಮನವಿಯನ್ನು ತಿರಸ್ಕರಿಸಿತು. ನಂತರ ನರಸಿಂಗ್‌ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದರು. ಹೀಗಾಗಿ ಸುಶೀಲ್‌ ಒಲಿಂಪಿಕ್ಸ್‌ ಹಾದಿ ಸುಗಮವಾಯಿತು. ನರಸಿಂಗ್ ಅವರ ಡೋಪಿಂಗ್ ಪ್ರಕರಣದಲ್ಲೂ ಸುಶೀಲ್ ಸಂಚು ಇದೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು.

2017ರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಮೂರು ಸುತ್ತುಗಳಲ್ಲಿ ವಾಕ್‌ ಓವರ್‌ ಪಡೆಯುವುದಕ್ಕೂ ಸುಶೀಲ್‌ ಸಂಚು ರೂಪಿಸಿದ್ದರು. ಎದುರಾಳಿಗಳನ್ನು ಬೆದರಿಸಿ ಕಣದಿಂದೆ ಹಿಂದೆ ಸರಿಯುವಂತೆ ಮಾಡಿದ್ದರು ಎಂಬ ಸಂದೇಹ ಮೂಡಿತ್ತು. ಅಂದು ಅವರು ಚಾಂಪಿಯನ್ ಆಗಿದ್ದರು. 2014ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಅವಕಾಶ ನೀಡದ್ದಕ್ಕೆ ಬೇಸರಗೊಂಡು ಏಷ್ಯನ್‌ ಕ್ರೀಡಾಕೂಟದಿಂದ ಕೊನೆಯ ಕ್ಷಣದಲ್ಲಿ ಹಿಂದೆ ಸರಿದು ಭಾರತ ಕುಸ್ತಿ ಫೆಡರೇಷನ್ ಮೇಲೆ ಸೇಡು ತೀರಿಸಿಕೊಂಡ ಕಳಂಕವೂ ಅವರ ಮೇಲಿದೆ.

ಪೊಲೀಸರ ನಿದ್ದೆಗೆಸಿದ ಚಾಂಪಿಯನ್

ಅನೇಕ ಕುಸ್ತಿ ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟಗಳನ್ನು ಅಲಂಕರಿಸಿದ್ದ ಸುಶೀಲ್ ಆಗಾಗ ತೋರಿದ ದುರ್ವರ್ತನೆಗಳಿಂದಲೂ ಸುದ್ದಿಯಾಗುತ್ತಾ ಬಂದರು. ಸಾಗರ್ ರಾಣಾ ಕೊಲೆಗೆ ಸಂಬಂಧಿಸಿ ಮೂರು ವಾರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿನಿತ್ಯ ವಾಸದ ಸ್ಥಳ ಬದಲಿಸುತ್ತಿದ್ದ ಅವರು ಸಿಮ್ ಕಾರ್ಡ್‌ಗಳನ್ನೂ ಪದೇ ಪದೇ ಬದಲಿಸುತ್ತಿದ್ದರು. ಹೀಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಬೇಕಾಯಿತು. ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಬೇಕಾಯಿತು. ಅಂತಿಮ ಅಸ್ತ್ರವಾಗಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿ ಅವರಿಗೆ ಬಲವಾದ ಪೆಟ್ಟು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.