
ವಡೋದರ: ಹಾಲಿ ಚಾಂಪಿಯನ್ ದಿವ್ಯಾಂಶಿ ಭೌಮಿಕ್, ಸಿಂಡ್ರೆಲಾ ದಾಸ್, ಕರ್ನಾಟಕದ ತನಿಷ್ಕಾ ಕಾಲಭೈರವ ಅವರು ಅವರು ಶುಕ್ರವಾರ ಆರಂಭಗೊಂಡ ವಿಶ್ವ ಟೇಬಲ್ ಟೆನಿಸ್ (ಯುಟಿಟಿ) ಯೂತ್ ಕಂಟೆಂಡರ್‌ನ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದರು.
ಕಳೆದ ಆವೃತ್ತಿಯಲ್ಲಿ 15 ಮತ್ತು 17 ವರ್ಷದೊಳಗಿನ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದ ದಿವ್ಯಾಂಶಿ ಅವರು ಗುಂಪು 1ರ ಪಂದ್ಯದಲ್ಲಿ 11-4, 11-1, 11-2ರಿಂದ ಸ್ವದೇಶದ ನೀಝಾ ಕಾಮತ್ ಅವರನ್ನು ಮಣಿಸಿ ಅಭಿಮಾನ ಆರಂಭಿಸಿದರು. ಸಿಂಡ್ರೆಲಾ ಅವರು ಗುಂಪು 3ರ ಪಂದ್ಯದಲ್ಲಿ 11-6, 11-6, 11-2ರಿಂದ ತಾನಿಯಾ ಕರ್ಮಾಕರ್ ಅವರನ್ನು ಸೋಲಿಸಿದರು.
ಕರ್ನಾಟಕದ ಉದಯೋನ್ಮುಖ ತಾರೆ ತನಿಷ್ಕಾ (ಗುಂಪು 9) 11–5, 11–3, 11–1ರಿಂದ ಸ್ವದೇಶದ ಪ್ರೀತಿಕಾ ಪ್ರಭು ಅವರನ್ನು ಹಿಮ್ಮೆಟ್ಟಿಸಿದರು.
ಜಪಾನಿನ ಆಟಗಾರ್ತಿ ಮಿಕು ಮಾತ್ಸುಶಿಮಾ 11-3, 11-4, 11-2ರಿಂದ ಸ್ವರ ಕರ್ಮಾಕರ್ ವಿರುದ್ಧ ಗೆಲುವು ಸಾಧಿಸಿದರು. ತನ್ನ ಎರಡನೇ ಪಂದ್ಯದಲ್ಲಿ 11-6, 11-3, 11-8ರಿಂದ ಅನ್ವಿ ಗುಪ್ತಾ ಅವರನ್ನು ಮಣಿಸಿ ನಾಕೌಟ್ ಹಂತಕ್ಕೆ ಹೆಜ್ಜೆಯಿಟ್ಟರು.
17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ರಿತ್ವಿಕ್ ಗುಪ್ತಾ ಗುಂಪು ಹಂತದ ಎರಡೂ ಪಂದ್ಯಗಳನ್ನು ಗೆದ್ದರು. ಮೊದಲ ಪಂದ್ಯದಲ್ಲಿ ರಿತ್ವಿಕ್ 11-9, 11-5, 11-5ರಿಂದ ಧ್ರುವ ಮಲಿಕಾರ್ಜುನನ್ ವಿರುದ್ಧ; ಎರಡನೇ ಪಂದ್ಯದಲ್ಲಿ 13-11, 11-6, 11-7ರಿಂದ ಶ್ರೇಯಸ್ ಮಂಕೇಶ್ವರ ವಿರುದ್ಧ ಗೆಲುವು ಸಾಧಿಸಿದರು.
ಸ್ಥಳೀಯ ಭರವಸೆಯ ಆಟಗಾರ ವೇದ್ ಪಾಂಚಾಲ್ ಗುಂಪು ಹಂತದ ಮೂರೂ ಪಂದ್ಯಗಳನ್ನು ಗೆದ್ದರು. ತನ್ನ ಮೊದಲ ಪಂದ್ಯದಲ್ಲಿ 11-9, 11-7, 11-7ರಿಂದ ಆರವ್ ಸಿಂಗ್ವಿ ಎದುರು; ಎರಡನೇ ಪಂದ್ಯದಲ್ಲಿ 11-9, 11-8, 9-11, 9-11, 11-6ರಿಂದ ಆರವ್ ರಾಠಿ ಎದುರು; ಮೂರನೇ ಪಂದ್ಯದಲ್ಲಿ 12-10, 11-6, 11-7 ನಿತಿನ್ ವೀರರಾಘವನ್ ಎದುರು ಜಯ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.