ಚೆಂಗ್ಡು (ಚೀನಾ): ಭಾರತದ ರಿಷಭ್ ಯಾದವ್ ಅವರು ಇಲ್ಲಿ ಶನಿವಾರ ನಡೆದ ವಿಶ್ವ ಗೇಮ್ಸ್ ಆರ್ಚರಿಯ ಕಾಂಪೌಂಡ್ ವಿಭಾಗದಲ್ಲಿ ವೈಯಕ್ತಿಕ ಕಂಚು ಗೆದ್ದರು. ಆದರೆ, ಭಾರತದ ಇತರ ಬಿಲ್ಗಾರರು ನಿರಾಸೆ ಅನುಭವಿಸಿದರು.
10ನೇ ಶ್ರೇಯಾಂಕಿತ ಯಾದವ್ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ 149-147 ಅಂಕಗಳಿಂದ ಸ್ವದೇಶದ ಹಿರಿಯ ಆಟಗಾರ, ಹಲವು ವಿಶ್ವಕಪ್ ಚಿನ್ನದ ಪದಕ ವಿಜೇತ ಅಭಿಷೇಕ್ ವರ್ಮಾ ಅವರಿಗೆ ಆಘಾತ ನೀಡಿದರು.
22 ವರ್ಷದ ಯಾದವ್ ಅವರು ಸೆಮಿಫೈನಲ್‌ನಲ್ಲಿ 145–147ರಿಂದ ಅಮೆರಿಕದ ಕರ್ಟಿಸ್ ಲೀ ಬ್ರಾಡ್ನಾಕ್ಸ್ ವಿರುದ್ಧ; ಐದನೇ ಶ್ರೇಯಾಂಕದ ಅಭಿಷೇಕ್ 145–148ರಿಂದ ಅಗ್ರ ಶ್ರೇಯಾಂಕದ ಮೈಕ್ ಸ್ಕ್ಲೋಸರ್ (ನೆದರ್ಲೆಂಡ್ಸ್) ವಿರುದ್ಧ ಪರಾಭವಗೊಂಡಿದ್ದರು.
ಮಹಿಳೆಯರ ವೈಯಕ್ತಿಕ ಕಾಂಪೌಂಡ್ ವಿಭಾಗದಲ್ಲಿ ಭಾರತದ ಸವಾಲು ಕ್ವಾರ್ಟರ್ ಫೈನಲ್‌ನಲ್ಲಿ ಕೊನೆಗೊಂಡಿತು. ಮೂರನೇ ಶ್ರೇಯಾಂಕದ ಮಧುರಾ ಧಮನ್ ಗಾಂವ್ಕರ್ 145-149ರಿಂದ ಆರನೇ ಶ್ರೇಯಾಂಕದ ಲಿಸೆಲ್ ಜತ್ಮಾ (ಎಸ್ಟೋನಿಯಾ) ವಿರುದ್ಧ ಮತ್ತು 12ನೇ ಶ್ರೇಯಾಂಕದ ಪರ್ನೀತ್ ಕೌರ್ 140-145ರಿಂದ ನಾಲ್ಕನೇ ಶ್ರೇಯಾಂಕದ ಅಲೆಜಾಂಡ್ರಾ ಉಸ್ಕ್ವಿಯಾನೊ (ಕೊಲಂಬಿಯಾ) ವಿರುದ್ಧ ಪರಾಭವಗೊಂಡರು.
ಮಿಶ್ರ ತಂಡಕ್ಕೆ ಆಘಾತ: ಮಿಶ್ರ ಕಾಂಪೌಂಡ್ ಸ್ಪರ್ಧೆಯಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಅಭಿಷೇಕ್ ವರ್ಮಾ ಮತ್ತು ಮಧುರಾ ಜೋಡಿಯು ಆರಂಭಿಕ ಸುತ್ತಿನಲ್ಲೇ ಹೊರಬಿತ್ತು. ಭಾರತದ ಜೋಡಿಯು 151-154ರಿಂದ ದಕ್ಷಿಣ ಕೊರಿಯಾದ ಮೂನ್ ಯೂನ್ ಮತ್ತು ಲೀ ಯೂನ್ಹೋ ಅವರಿಗೆ ಮಣಿಯಿತು.
ಮೊದಲ ಸುತ್ತಿನಲ್ಲಿ (37–38) ಒಂದು ಅಂಕ ಹಿನ್ನಡೆ ಕಂಡ ಭಾರತದ ಜೋಡಿಯು, ಎರಡನೇ ಸುತ್ತಿನಲ್ಲೂ (37–40) ಎಡವಿತು. ಆದರೆ, ಮೂರನೇ ಸುತ್ತಿನಲ್ಲಿ ಸಮಬಲದ (37–37) ಹೋರಾಟ ನಡೆಸಿ, ಕೊನೆಯ ಸುತ್ತಿನಲ್ಲಿ ಭಾರತ (40–39) ಒಂದು ಅಂಕ ಮುನ್ನಡೆ ಪಡೆದರೂ ಅದು ಗೆಲುವಿಗೆ ಸಾಕಾಗಲಿಲ್ಲ.
ಒಟ್ಟು ಎಂಟು ತಂಡಗಳು ಸ್ಪರ್ಧಾ ಕಣದಲ್ಲಿದ್ದವು. ಎರಡು ಪಂದ್ಯ ಗೆದ್ದಿದ್ದರೂ ಪದಕ ಖಚಿತವಾಗುತ್ತಿತ್ತು. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಆರ್ಚರಿ ಮಿಶ್ರ ಕಾಂಪೌಂಡ್ ತಂಡ ಸ್ಪರ್ಧೆಯನ್ನು ಮೊದಲ ಬಾರಿ ಅಳವಡಿಸಲಾಗಿದ್ದು, ಈ ನಿಟ್ಟಿನಲ್ಲಿ ಭಾರತದ ಪ್ರದರ್ಶನ ಮಹತ್ವ ಪಡೆದಿತ್ತು.
ಡೆನ್ಮಾರ್ಕ್‌ನ ಮಥಿಯಾಸ್ ಫುಲ್ಲರ್ಟನ್ ಮತ್ತು ಸೋಫಿ ಲೂಯಿಸ್ ಡ್ಯಾಮ್ ಮಾರ್ಕುಸೆನ್ ಜೋಡಿ 156-155 ಅಂಕಗಳಿಂದ ಮೆಕ್ಸಿಕೊ ತಂಡವನ್ನು ಮಣಿಸಿ ಚಿನ್ನ ಗೆದ್ದುಕೊಂಡಿತು. ಈ ಮೂಲಕ ಡೆನ್ಮಾರ್ಕ್ ಬಿಲ್ಗಾರರು ಮುಂದಿನ ಒಲಿಂಪಿಕ್ಸ್‌ಗೆ ವೇದಿಕೆಯನ್ನು ಸಿದ್ಧಪಡಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.