ADVERTISEMENT

ಕ್ರಿಕೆಟ್ ಕಣದಲ್ಲಿ ಯೋಗಾಯೋಗ

ಗಿರೀಶದೊಡ್ಡಮನಿ
Published 24 ಜೂನ್ 2020, 19:30 IST
Last Updated 24 ಜೂನ್ 2020, 19:30 IST
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಯೋಗಾಭ್ಯಾಸದಲ್ಲಿ ಪಾಲ್ಗೊಂಡ ಕರ್ನಾಟಕ ರಣಜಿ ತಂಡದ ಆಟಗಾರರು. ಪ್ರಜಾವಾಣಿ ಚಿತ್ರ:ಇರ್ಷಾದ್ ಮೊಹಮ್ಮದ್
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬುಧವಾರ ಯೋಗಾಭ್ಯಾಸದಲ್ಲಿ ಪಾಲ್ಗೊಂಡ ಕರ್ನಾಟಕ ರಣಜಿ ತಂಡದ ಆಟಗಾರರು. ಪ್ರಜಾವಾಣಿ ಚಿತ್ರ:ಇರ್ಷಾದ್ ಮೊಹಮ್ಮದ್   

’ಏನ್ ಮಚ್ಛಾ.. ಅರಾಮಾ..‘, ’ಗುಡ್‌ ಮಾರ್ನಿಂಗ್ ಮಾಮ್..‘

ಇಂತಹ ಡೈಲಾಗ್‌ಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸದೇನಲ್ಲ. ಇಲ್ಲಿಗೆ ಬರುವ ಕ್ರಿಕೆಟಿಗರು ಪರಸ್ಪರ ’ವಿಷ್‘ ಮಾಡುವ ಈ ಪರಿ ಹಳೆಯದು.

ಆದರೆ ಬುಧವಾರ ಬೆಳಿಗ್ಗೆ ಮಾತ್ರ ತುಸು ವಿಭಿನ್ನವಾಗಿತ್ತು. ಈ ಡೈಲಾಗ್‌ಗಳು ಇದ್ದವು ಆದರೆ ಪರಸ್ಪರ ತಬ್ಬಿಕೊಳ್ಳುವ, ಕೈ ಕೈ ತಟ್ಟಿ ಅಭಿನಂದಿಸಿಕೊಳ್ಳುವ ದೃಶ್ಯಗಳು ಮಾಯವಾಗಿದ್ದವು.

ADVERTISEMENT

ಕೆಲವರ ಮುಖದ ಮೇಲೆ ಮಾಸ್ಕ್ ಇದ್ದರೆ, ಇನ್ನೂ ಕೆಲವರ ಮುಖಗಳನ್ನು ಪಾರದರ್ಶಕವಾದ ಫೇಸ್‌ ಶೀಲ್ಡ್‌ ಮುಚ್ಚಿದವು. ಪರಸ್ಪರ ನಾಲ್ಕೈದು ಅಡಿ ದೂರದಲ್ಲಿ ನಿಂತು ಮಾತನಾಡಿದರು. ಒಳಗೆ ಕುಳಿತುಕೊಳ್ಳುವಾಗಲೂ ದೂರ ದೂರವೇ ಇದ್ದರು. ಕೊರೊನಾ ಕಾಲದಲ್ಲಿ ಕ್ರಿಕೆಟ್‌ ಚಟುವಟಿಕೆಗಳ ಆರಂಭದ ಪರಿ ಇದು.

ಇನ್ನು ಕ್ರಿಕೆಟ್ ಅಂಗಳದಲ್ಲಿಯೂ ’ನ್ಯೂ ನಾರ್ಮಲ್‌‘ ದೃಶ್ಯಗಳು. ಸದಾ ಕ್ರಿಕೆಟ್ ಆಟವನ್ನೇ ಧ್ಯಾನಿಸುವ ಹಸಿರು ಅಂಗಳದಲ್ಲಿ ಪರಸ್ಪರ ’ಅಂತರ‘ ಕಾಪಾಡಿಕೊಂಡು ಮ್ಯಾಟ್ ಹಾಸಿಕೊಂಡ ಕ್ರಿಕೆಟಿಗರು ಯೋಗಾಸನಗಳಲ್ಲಿ ಕಳೆದುಹೋದರು. ಕ್ರಿಕೆಟಿ ಪ್ರಿಯರ ಕೇಕೆ. ಚಪ್ಪಾಳೆ ಪ್ರತಿಧ್ವನಿಸುವ ಅಂಗಳದ ಖಾಲಿ ಗ್ಯಾಲರಿಗಳಲ್ಲಿ ಓಂಕಾರದ ನಾದ ರಿಂಗಣಿಸಿತು.

ಭಾರತ ಕ್ರಿಕೆಟ್ ತಂಡದಲ್ಲಿ ಆಡುವ ಕನಸು ಕಂಗಳ ಆ ಹುಡುಗರು ಬೇರೆ ಯಾರೂ ಅಲ್ಲ ಕರ್ನಾಟಕ ರಣಜಿ ಕ್ರಿಕೆಟಿಗರು. ಹೋದ ವರ್ಷ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಜಯಿಸಿದ್ದ ತಂಡದಲ್ಲಿ ಆಡಿದ್ದವರು ಇವರು. ಅಲ್ಲದೇ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದ ಆಟಗಾರರೂ ಇದರಲ್ಲಿ ಇದ್ದರು.

ಕೊರೊನಾ ವೈರಸ್‌ ಸೋಂಕು ತಡೆಯಲು ಹೋದ ಮೂರು ತಿಂಗಳಿನಿಂದ ಲಾಕ್‌ಡೌನ್ ಅವಧಿಯನ್ನು ಮನೆಯಲ್ಲಿ ಕಳೆದಿದ್ದ ಕ್ರಿಕೆಟಿಗರು ಮೊನ್ನೆ ಸೋಮವಾರದಿಂದ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ಆದರೆ ಯಾರೂ ಇನ್ನೂ ಕ್ರಿಕೆಟ್ ಕಿಟ್ ಮುಟ್ಟುವ ಗೋಜಿಗೆ ಹೋಗಿಲ್ಲ. ಮೂರನೇ ದಿನವಾದ ಬುಧವಾರ ಮಾತ್ರ ವಿಶೇಷವಾಗಿ ಯೋಗ ತರಬೇತಿ ಆಯೋಜಿಸಲಾಗಿತ್ತು. ಶಿಕ್ಷಕಿ ಮಾನಸಾ ರಾವ್ ಅವರ ಮಾರ್ಗದರ್ಶನದಲ್ಲಿ ಕೋಚ್ ಯರೇಗೌಡ, ಟ್ರೇನರ್ ಜಾಬಪ್ರಭು, ನಾಯಕ ಕರುಣ್ ನಾಯರ್, ಆಲ್‌ರೌಂಡರ್ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಆರ್. ಸಮರ್ಥ್, ಮಧ್ಯಮವೇಗಿ ರೋನಿತ್ ಮೋರೆ, ವಿಕೆಟ್‌ಕೀಪರ್ ಬಿ.ಆರ್. ಶರತ್, ಅನಿರುದ್ಧ ಜೋಶಿ ಸೇರಿದಂತೆ ಬಹುತೇಕ ಎಲ್ಲ ಆಟಗಾರರೂ ಯೋಗಾಭ್ಯಾಸದಲ್ಲಿ ಹಾಜರಿದ್ದರು.

’ಯೋಗಾಭ್ಯಾಸದಿಂದ ಕ್ರಿಕೆಟಿಗರ ಮಾನಸಿಕ, ದೈಹಿಕ ಸ್ವಾಸ್ಥ್ಯ ಬಲಗೊಳ್ಳುತ್ತದೆ. ನಾವೂ ಮೂರು ತಿಂಗಳಿನಿಂದ ಕ್ರೀಡಾಂಗಣಕ್ಕೆ ಹೋಗಲು ತವಕಿಸುತ್ತಿದ್ದೆವು. ಇದೀಗ ಅವಕಾಶ ಒದಗಿಬಂದಿದೆ. ಅಂತೂ ಚಟುವಟಿಕೆಗಳು ಆರಂಭವಾದವಲ್ಲ ಎಂಬ ಸಮಾಧಾನ ಇದೆ. ಆದರೆ ಮೊದಲಿನಂತೆ ಸ್ನೇಹಿತರೊಂದಿಗೆ ನಿಕಟವಾಗಿ ವರ್ತಿಸುವಂತಿಲ್ಲ. ದೂರದಿಂದಲೇ ಮಾತುಕತೆ. ಟ್ರೇನಿಂಗ್ ಮುಗಿಯುತ್ತಿದ್ದಂತೆಯೇ ಮನೆಗೆ ಮರಳಬೇಕು. ಗೆಳೆಯರೊಂದಿಗೆ ಹರಟೆ, ಊಟ, ತಿಂಡಿ ಮತ್ತಿತರ ಸಂಗತಿಗಳಿಂದ ವಂಚಿತರಾಗುತ್ತಿದ್ದೇವೆ. ಸದ್ಯಕ್ಕೆ ಇದು ಅನಿವಾರ್ಯ. ಮುಂದೆ ಎಲ್ಲವೂ ಸಹಜ ಸ್ಥಿತಿಗೆ ಬರಬಹುದು‘ ಎಂದು ಬೌಲರ್ ರೋನಿತ್ ಮೋರೆ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.