ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌: ಸೇನ್‌, ಟ್ರೀಸಾ–ಗಾಯತ್ರಿ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 15:39 IST
Last Updated 13 ಜನವರಿ 2026, 15:39 IST
<div class="paragraphs"><p>ಭಾರತದ ಲಕ್ಷ್ಯ ಸೇನ್ </p></div>

ಭಾರತದ ಲಕ್ಷ್ಯ ಸೇನ್

   

ಪಿಟಿಐ ಚಿತ್ರ

ನವದೆಹಲಿ: ಮಾಜಿ ಚಾಂಪಿಯನ್‌ ಲಕ್ಷ್ಯ ಸೇನ್‌ ಅವರು ಇಲ್ಲಿ ಮಂಗಳವಾರ ಆರಂಭಗೊಂಡ ಇಂಡಿಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಸೈಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿಯ ಚಾಂಪಿಯನ್‌ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯೂ ಗೆಲುವಿನೊಡನೆ ಅಭಿಯಾನ ಆರಂಭಿಸಿತು.

ADVERTISEMENT

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಭಾರತದ ಸೇನ್‌ ಅವರು 21-12, 21-15ರಿಂದ ಸ್ವದೇಶದ ಆಯುಷ್‌ ಶೆಟ್ಟಿ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು 

24 ವರ್ಷದ ಸೇನ್‌ ಅವರು ಮೊದಲ ಗೇಮ್‌ನಲ್ಲಿ 7-1 ಅಂತರದ ಮುನ್ನಡೆಯೊಂದಿಗೆ ಆರಂಭದಲ್ಲೇ ಹಿಡಿತ ಸಾಧಿಸಿದರು. ಯಾವುದೇ ಹಂತದಲ್ಲಿ ಕರ್ನಾಟಕದ 20 ವರ್ಷದ ಆಯುಷ್‌ ಶೆಟ್ಟಿ ಅವರಿಗೆ ಚೇತರಿಸಿಕೊಳ್ಳಲು ಅವಕಾಶ ನೀಡದೆ ಮೊದಲ ಗೇಮ್‌ ಗೆದ್ದರು. 

ಎರಡನೇ ಗೇಮ್‌ನ ಆರಂಭದಲ್ಲಿ 5–1 ಮುನ್ನಡೆಯೊಂದಿಗೆ ಆಯುಷ್‌ ಪ್ರತಿರೋಧ ತೋರಿಸಿದರು. ಆದರೆ, ನಂತರದಲ್ಲಿ ಲಯ ಕಂಡುಕೊಂಡ ಸೇನ್‌ ಮತ್ತೆ ಚುರುಕಿನ ಆಟದ ಮೂಲಕ ನೇರ ಗೇಮ್‌ಗಳ ಗೆಲುವು ಸಾಧಿಸಿದರು. ಕೇವಲ 36 ನಿಮಿಷದಲ್ಲಿ ಜಯ ಗಳಿಸಿದ ಅಲ್ಮೋರಾದ ಆಟಗಾರ ಎರಡನೇ ಸುತ್ತಿನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಅವರ ಸವಾಲನ್ನು ಎದುರಿಸಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಟ್ರೀಸಾ ಮತ್ತು ಗಾಯತ್ರಿ ಜೋಡಿಯು 21-15, 21-11 ರಿಂದ ಥಾಯ್ಲೆಂಡ್‌ನ ಓರ್ನಿಚಾ ಜೋಂಗ್ಸಾತಪೋರ್ನ್ಪರ್ನ್ ಮತ್ತು ಸುಕಿರ್ತ ಸುವಾಚೈ ಅವರನ್ನು ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿತು. ವಿಶ್ವ ಕ್ರಮಾಂಕದಲ್ಲಿ 21ನೇ ಸ್ಥಾನದಲ್ಲಿರುವ ಭಾರತದ ಜೋಡಿಯು 42 ನಿಮಿಷದ ಹೋರಾಟದಲ್ಲಿ ಯಾವುದೇ ಹಂತದಲ್ಲಿ ಒತ್ತಡಕ್ಕೆ ಒಳಗಾಗದೆ ಗೆಲುವು ಸಾಧಿಸಿತು.

ಟ್ರೀಸಾ ಮತ್ತು ಗಾಯತ್ರಿ ಜೋಡಿಯು ಮುಂದಿನ ಸುತ್ತಿನಲ್ಲಿ ಏಳನೇ ಶ್ರೇಯಾಂಕದ ಲಿ ಯಿ ಜಿಂಗ್ ಮತ್ತು ಲುವೊ ಕ್ಸು ಮಿನ್ ಅವರನ್ನು ಎದುರಿಸಲಿದೆ. ಚೀನಾದ ಈ ಆಟಗಾರ್ತಿಯರು 21-12, 21-8 ರಿಂದ ಅಮೆರಿಕದ ಫ್ರಾನ್ಸೆಸ್ಕಾ ಕಾರ್ಬೆಟ್ ಮತ್ತು ಜೆನ್ನೀ ಗೈ ಅವರನ್ನು ಸೋಲಿಸಿದರು.

ಟಿಯೆನ್, ಲ್ಯಾನಿಯರ್‌ಗೆ ಆಘಾತ: ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಚೌ ಟಿಯೆನ್ ಚೆನ್, ಆರನೇ ಶ್ರೇಯಾಂಕದ ಅಲೆಕ್ಸ್ ಲ್ಯಾನಿಯರ್‌ ಮತ್ತು ಏಳನೇ ಶ್ರೇಯಾಂಕದ ಕೊಡೈ ನರೋಕಾ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಕೆನಡಾದ ಬ್ರಿಯಾನ್ ಯಾಂಗ್ 21-19, 21-11ರಿಂದ ತೈವಾನ್‌ನ ಚೌ ಅವರಿಗೆ ಆಘಾತ ನೀಡಿದರು. ತೈವಾನ್‌ನ ಚಿ ಯು ಜೆನ್ 21-17, 21-19ರಿಂದ ಫ್ರಾನ್ಸ್‌ನ ಲ್ಯಾನಿಯರ್ ಅವರನ್ನು ಅವರನ್ನು ಮಣಿಸಿದರು. ಜಪಾನ್‌ನ ನರೋಕಾ 6-21, 5-7ರಿಂದ ಸ್ವದೇಶದ ನಿಶಿಮೊಟೊ ವಿರುದ್ಧ ಹಿನ್ನಡೆಯಲ್ಲಿದ್ದಾಗ ಸ್ಪರ್ಧೆಯಿಂದ ಹಿಂದೆ ಸರಿದರು. 

ಪುರುಷರ ಡಬಲ್ಸ್‌ನಲ್ಲಿ ಭಾರತದ ಹರಿಹರನ್ ಅಂಶಕರುಣನ್ ಮತ್ತು ಎಂ.ಆರ್. ಅರ್ಜುನ್ ಜೋಡಿಯು 21-15, 21-18ರಿಂದ ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಈ ಯಿ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.

‘ಯೋಗ್ಯ ವಾತಾವರಣವಿಲ್ಲ’

ಕ್ರೀಡಾಂಗಣದಲ್ಲಿ ಆಡವಾಡಲು ಯೋಗ್ಯ ವಾತಾವರಣವಿಲ್ಲ ಎಂದು ಡೆನ್ಮಾರ್ಕ್‌ನ ಆಟಗಾರ್ತಿ ಮಿಯಾ ಬ್ಲಿಚ್‌ಫೆಲ್ಡ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. 17 ವರ್ಷಗಳ ನಂತರ ವಿಶ್ವ ಚಾಂಪಿಯನ್‌ಷಿಪ್‌ ಭಾರತದ ಆತಿಥ್ಯದಲ್ಲಿ ಆಗಸ್ಟ್‌ನಲ್ಲಿ ನಡೆಯಲಿದೆ. ಅದರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಇಂಡಿಯಾ ಓಪನ್ ಟೂರ್ನಿಯನ್ನು ಕೆ.ಡಿ. ಜಾಧವ್ ಸಭಾಂಗಣದಿಂದ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. 

ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದಿರುವ ಬ್ಲಿಚ್‌ಫೆಲ್ಡ್ ಅವರು ‘ಸ್ಥಳ ಬದಲಾವಣೆಯಿಂದ ಸುಧಾರಣೆಗಳನ್ನು ನಿರೀಕ್ಷೆ ಮಾಡಿದ್ದೆ. ಆದರೆ ಕ್ರೀಡಾಂಗಣದಲ್ಲಿನ ವಾತಾವರಣ ಆಟಕ್ಕೆ ಪೂರಕವಾಗಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಇಲ್ಲಿನ ವಾತಾವರಣ ತುಂಬಾ ಕೊಳಕಿನಿಂದ ಕೂಡಿದ್ದು ಆಟಗಾರರಿಗೆ ಯೋಗ್ಯವಾಗಿಲ್ಲ. ಎಲ್ಲರೂ ಎರಡು ಪದರಗಳ ಪ್ಯಾಂಟ್ ಚಳಿಗಾಲದ ಜಾಕೆಟ್ ಕೈಗವಸು ಮತ್ತು ಟೋಪಿಗಳನ್ನು ಧರಿಸಿ ಬೆಚ್ಚಗಾಗುತ್ತಿದ್ದಾರೆ’ ಎಂದು ಹೇಳಿದರು.

ಕೆ.ಡಿ. ಜಾಧವ್ ಸಭಾಂಗಣದಲ್ಲಿ ನಡೆದಿದ್ದ ಕಳೆದ ಆವೃತ್ತಿಯ ಟೂರ್ನಿಯ ವೇಳೆಯೂ ‘ಇಲ್ಲಿನ ಪರಿಸ್ಥಿತಿಯು ಅನಾರೋಗ್ಯಕರವಾಗಿದ್ದು ಸ್ವೀಕಾರಾರ್ಹವಾಗಿಲ್ಲ’ ಎಂದು ಬ್ಲಿಚ್‌ಫೆಲ್ಡ್‌ ಟೀಕಿಸಿದ್ದರು.