ADVERTISEMENT

ಪಿ.ವಿ. ಸಿಂಧು ರಾಜೀನಾಮೆ ಟ್ವೀಟ್‌ ನನಗೆ ಸಣ್ಣ ಆಘಾತ ನೀಡಿತು: ಸಚಿವ ಕಿರಣ್ ರಿಜಿಜು

ಏಜೆನ್ಸೀಸ್
Published 2 ನವೆಂಬರ್ 2020, 15:18 IST
Last Updated 2 ನವೆಂಬರ್ 2020, 15:18 IST
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು    

ನವದೆಹಲಿ: 'ನಾನು ನಿವೃತ್ತಿ ಹೊಂದಿದ್ದೇನೆ' ಎನ್ನುವ ಶೀರ್ಷಿಕೆಯೊಂದಿಗೆ ಭಾರತದ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮಾಡಿದ ಟ್ವೀಟ್ ತಮಗೆ ಸಣ್ಣ ಆಘಾತ ನೀಡಿದ್ದಾಗಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಸೋಮವಾರ ತಿಳಿಸಿದ್ದಾರೆ.

25 ವರ್ಷದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿರುವ ಸಿಂಧು, ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ಜನರು ಅದನ್ನು ಹೇಗೆ ಲಘುವಾಗಿ ಪರಿಗಣಿಸಬಾರದು ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರಿಜಿಜು, ಪಿ.ವಿ. ಸಿಂಧು ನೀವು ನಿಜವಾಗಿಯೂ ನನಗೆ ಸಣ್ಣ ಆಘಾತವನ್ನು ನೀಡಿದ್ದೀರಿ ಆದರೆ ನಿಮ್ಮ ದೃಢ ನಿಶ್ಚಯದ ಶಕ್ತಿಯ ಬಗ್ಗೆ ನನಗೆ ಅಪಾರ ನಂಬಿಕೆ ಇತ್ತು. ಭಾರತಕ್ಕಾಗಿ ಇನ್ನೂ ಅನೇಕ ಪ್ರಶಸ್ತಿಗಳನ್ನು ತರಲು ನಿಮಗೆ ಶಕ್ತಿ ಮತ್ತು ಉತ್ಸಾಹವಿದೆ ಎಂಬುದು ನನಗೆ ಖಾತ್ರಿಯಿದೆ ಎಂದು ಟ್ವೀಟ್ ಮಾಡಿದ್ದಾರೆ.

ADVERTISEMENT

ಸಿಂಧು ಅವರು 2018ರ ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು 2018ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅಲ್ಲದೆ ಅವರು ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಕಳೆದ ವರ್ಷ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಏಕೈಕ ಭಾರತೀಯ ಶೆಟ್ಲರ್ ಸಿಂಧು ಆಗಿದ್ದಾರೆ.

ಇದಕ್ಕೂ ಮುಂಚೆ ಸಿಂಧು, ಸದ್ಯದ ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ವೈರಸ್‌ ಅನ್ನು ಸೋಲಿಸಲು ಜನರು ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎನ್ನುವ ಕುರಿತು ಜಾಗೃತಿ ಮೂಡಿಸಲು ಟ್ವೀಟ್‌ವೊಂದನ್ನು ಮಾಡಿದ್ದರು. ಸುದೀರ್ಘ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದ ಅವರು 'ನಾನು ನಿವೃತ್ತಿ ಹೊಂದಿದ್ದೇನೆ' ಎನ್ನುವ ಶೀರ್ಷಿಕೆ ನೀಡಿದ್ದರು.

'ಡೆನ್ಮಾರ್ಕ್ ಓಪನ್ ಕೊನೆಯ ಪಂದ್ಯ ಆಗಿತ್ತು. ನಾನು ನಿವೃತ್ತಿ ಹೊಂದಿದ್ದೇನೆ'. ಎಂದು ಮೊದಲನೇ ಪುಟದಲ್ಲಿ ಸಿಂಧು ಬರೆದಿದ್ದನ್ನು ನೋಡಿ ಬಹುತೇಕರು ಒಲಿಂಪಿಕ್ಸ್‌ ಪದಕ ವಿಜೇತೆ ವೃತ್ತಿಪರ ಬ್ಯಾಡ್ಮಿಂಟನ್‌ನಿಂದ ನಿವೃತ್ತರಾಗುತ್ತಿದ್ದಾರೆಯೇ ಎಂದೇ ಭಾವಿಸಿದರು. ಆದರೆ ಸಿಂಧು ಹಂಚಿಕೊಂಡಿದ್ದ ಪೋಸ್ಟ್‌ನ ಸಂಪೂರ್ಣ ಪುಟಗಳನ್ನು ಓದಿದ ಬಳಿಕ ಅವರು ವಿದಾಯ ಘೋಷಿಸಿದ್ದು ಬ್ಯಾಡ್ಮಿಂಟನ್‌ಗಲ್ಲ ಎಂದು ತಿಳಿದಿದೆ.

'ನನ್ನ ಆಲೋಚನೆಗಳನ್ನು ಸ್ಪಷ್ಟವಾಗಿಸಬೇಕೆಂದು ನಾನು ಬಹಳ ಸಮಯದಿಂದ ಯೋಚಿಸುತ್ತಿದ್ದೆ, ನಾನು ಬಹಳ ಸಮಯದಿಂದ ಈ ವಿಷಯದಲ್ಲಿ ಹೋರಾಡುತ್ತಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಇದು ತಪ್ಪು ಎಂದು ನಿಮಗೆ ತಿಳಿದಿದೆ. ಅದನ್ನು ಮುಗಿಸಿದ್ದೇನೆ ಎಂದು ಹೇಳಲು ನಾನು ಇಂದು ಬರೆಯುತ್ತಿದ್ದೇನೆ. ಇದನ್ನು ಓದುವುದರಿಂದ ನೀವು ಆಶ್ಚರ್ಯ ಚಕಿತರಾಗುವಿರಿ ಅಥವಾ ಗೊಂದಲಕ್ಕೊಳಗಾಗುತ್ತೀರಿ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ನೀವು ನನ್ನ ಆಲೋಚನೆಯನ್ನು ಸಂಪೂರ್ಣವಾಗಿ ಓದಿದಾಗ ನಿಮಗೆ ನನ್ನ ಮಾತಿನ ದೃಷ್ಟಿಕೋನವು ಅರ್ಥವಾಗುತ್ತದೆ ಮತ್ತು ನೀವು ನನ್ನನ್ನು ಬೆಂಬಲಿಸುವಿರಿ ಎಂದು ನಾನು ಭಾವಿಸುತ್ತೇನೆ ಎಂದವರು ಆಶಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.