
ಕೋಲ್ಕತ್ತ: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ನಿಹಾಲ್ ಸರಿನ್ ಅವರು ಟಾಟಾ ಸ್ಟೀಲ್ ಚೆಸ್ ಇಂಡಿಯಾ ಟೂರ್ನಿಯಲ್ಲಿ ಶುಕ್ರವಾರ ರ್‍ಯಾಪಿಡ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.
ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ವಿರುದ್ಧ ಒಂಬತ್ತನೇ ಸುತ್ತಿನ ಪಂದ್ಯವನ್ನು ಸಂಯಮದಿಂದ ಡ್ರಾ ಮಾಡಿಕೊಳ್ಳುವ ಮೂಲಕ 21 ವರ್ಷ ವಯಸ್ಸಿನ ನಿಹಾಲ್ 6.5 ಅಂಕಗಳೊಡನೆ ‘ಓಪನ್’ ವಿಭಾಗದ ಚಾಂಪಿಯನ್ ಆದರು.
ಆರು ಅಂಕ ಗಳಿಸಿದ ಆನಂದ್ ಎರಡನೇ ಸ್ಥಾನ ಪಡೆದರು. ಇತ್ತೀಚೆಗಷ್ಟೇ ದೋಹಾದಲ್ಲಿ ವಿಶ್ವ ರ್‍ಯಾಪಿಡ್ ಮತ್ತು ಬ್ಲಿಟ್ಝ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಿದ್ದ ಅರ್ಜುನ್ ಇರಿಗೇಶಿ ಇಲ್ಲಿ ಐದು ಅಂಕಗಳನ್ನು ಗಳಿಸಿ ಮೂರನೇ ಸ್ಥಾನ ಪಡೆದರು.
‘ನನ್ನ ಅಜ್ಜ (ತಾಯಿಯ ತಂದೆ) ಮೃತರಾದ ಸುದ್ದಿ ಗುರುವಾರ ರಾತ್ರಿ ಗೊತ್ತಾಯಿತು. ಅವರು ನನಗೆ ಚೆಸ್ ಕಲಿಸಿದ್ದರು. ಈ ಪ್ರಶಸ್ತಿ ಅವರಿಗೆ ಅರ್ಪಿಸುತ್ತೇನೆ’ ಎಂದು ನಿಹಾಲ್ ಹೇಳಿದರು.
ಮಹಿಳಾ ವಿಭಾಗದಲ್ಲಿ ರಷ್ಯಾದ ಕ್ಯಾತರಿನಾ ಲಾಗ್ನೊ (6.5) ವಿಜೇತರಾದರು. ಇದೇ ದೇಶದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (5) ಎರಡನೇ ಮತ್ತು ದಿವ್ಯಾ ದೇಶಮುಖ್ (4.5) ಮೂರನೇ ಸ್ಥಾನ ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.