ADVERTISEMENT

ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌: ಸಾಕ್ಷಿ ಮಣಿಸಿದ ಸೋನಮ್‌ಗೆ ಚಿನ್ನ

ಹರಿಯಾಣ ಪಟುಗಳ ಪ್ರಾಬಲ್ಯ

ಪಿಟಿಐ
Published 30 ಜನವರಿ 2021, 15:03 IST
Last Updated 30 ಜನವರಿ 2021, 15:03 IST
ಸೋನಂ ಮಲಿಕ್‌ (ಕೆಂಪು ಪೋಷಾಕು)–ಪಿಟಿಐ ಸಂಗ್ರಹ ಚಿತ್ರ
ಸೋನಂ ಮಲಿಕ್‌ (ಕೆಂಪು ಪೋಷಾಕು)–ಪಿಟಿಐ ಸಂಗ್ರಹ ಚಿತ್ರ   

ಆಗ್ರಾ: ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರನ್ನು ಚಿತ್ ಮಾಡಿದ ಯುವ ಕುಸ್ತಿಪಟು ಸೋನಮ್‌ ಮಲಿಕ್‌, ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಶನಿವಾರ ಇಲ್ಲಿ ನಡೆದ 62 ಕೆಜಿ ವಿಭಾಗದ ಬೌಟ್‌ನಲ್ಲಿ ಹರಿಯಾಣದ ಸೋನಮ್‌ 7–5ರಿಂದ ಸಾಕ್ಷಿ ಅವರಿಗೆ ಆಘಾತ ನೀಡಿದರು. ಸಾಕ್ಷಿ ರೇಲ್ವೆ ತಂಡವನ್ನು ಪ್ರತಿನಿಧಿಸಿದ್ದರು.

ಸೋನಮ್‌ ಎದುರು ಸಾಕ್ಷಿಗೆ ಇದು ಒಟ್ಟಾರೆ ಮೂರನೇ ಸೋಲು.

ADVERTISEMENT

ಈ ವಿಭಾಗದಲ್ಲಿ ಮಧ್ಯಪ್ರದೇಶದ ಪುಷ್ಪಾ ಹಾಗೂ ಹರಿಯಾಣದ ಮನೀಷಾ ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಹರಿಯಾಣದ ಮೀನಾಕ್ಷಿ ಅವರು 50 ಕೆಜಿ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದರು. ಅವರದೇ ರಾಜ್ಯದ ಹೆನ್ನಿ ಕುಮಾರಿ ಬೆಳ್ಳಿ, ಮಹಾರಾಷ್ಟ್ರದ ಸ್ವಾತಿ ಶಿಂಧೆ ಹಾಗೂ ದೆಹಲಿಯ ಕೀರ್ತಿ ಕಂಚಿನ ಪದಕಗಳಿಗೆ ಕೊರಳೊಡ್ಡಿದರು.

55 ಕೆಜಿ ವಿಭಾಗದಲ್ಲಿದೆಹಲಿಯ ಬಂಟಿ ಅವರನ್ನು ಸೋಲಿಸಿದ ಹರಿಯಾಣದ ಅಂಜು ಅವರಿಗೆ ಚಿನ್ನದ ಪದಕ ಒಲಿಯಿತು. ಉತ್ತರ ಪ್ರದೇಶದ ಇಂದು ತೋಮರ್ ಹಾಗೂ ದೆಹಲಿಯ ಸುಷ್ಮಾ ಶೋಕಿನ್‌ ಕಂಚಿನ ಪದಕಗಳನ್ನು ಗೆದ್ದರು.

57 ಕೆಜಿ ವಿಭಾಗದಲ್ಲಿ ಹರಿಯಾಣದ ಅನ್ಷು ಚಿನ್ನ, ಆರ್‌ಎಸ್‌ಪಿಬಿಯ ಲಲಿತಾ ಬೆಳ್ಳಿ, ಮಧ್ಯ ಪ್ರದೇಶದ ರಮಣ್ ಯಾದವ್‌ ಹಾಗೂ ಹರಿಯಾಣದ ಮಾನಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಆರ್‌ಎಸ್‌ಪಿಬಿಯ ಪಿಂಕಿ 72 ಕೆಜಿ ವಿಭಾಗದಲ್ಲಿ ಪಾರಮ್ಯ ಮೆರೆದರು. ಹರಿಯಾಣದ ನೈನಾ ಬೆಳ್ಳಿ ಪದಕಕ್ಕೆ ಒಡತಿಯಾದರು. ಉತ್ತರ ಪ್ರದೇಶದ ಪಿಂಕಿ ಹಾಗೂ ಆರ್‌ಎಸ್‌ಪಿಬಿಯ ಕವಿತಾ ಕಂಚಿನ ಪದಕಗಳನ್ನು ಗೆದ್ದುಕೊಂಡರು.

53, 59, 65, 68 ಹಾಗೂ 76 ಕೆಜಿ ವಿಭಾಗದ ಸ್ಪರ್ಧೆಗಳು ಭಾನುವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.