ADVERTISEMENT

ಸ್ಪೀಡ್ ಚೆಸ್‌ನಲ್ಲಿ ವೈಶಾಲಿಗೆ ಮಣಿದ ಮಾಜಿ ವಿಶ್ವ ಚಾಂಪಿಯನ್‌ ಸ್ಟೆಫನೋವ

ಪಿಟಿಐ
Published 25 ಜೂನ್ 2020, 8:42 IST
Last Updated 25 ಜೂನ್ 2020, 8:42 IST
ಚೆಸ್
ಚೆಸ್   

ಚೆನ್ನೈ: ಭರವಸೆ ಹುಸಿಯಾಗಲಿಲ್ಲ. ನಿರೀಕ್ಷೆಗೆ ತಕ್ಕ ಆಟವಾಡಿದ ಯುವ ಪ್ರತಿಭೆ ವೈಶಾಲಿ ಅವರು ಫಿಡೆ ಚೆಸ್ ಡಾಟ್ ಕಾಮ್ ಆಯೋಜಿಸಿರುವ ಮಹಿಳೆಯರ ಸ್ಪೀಡ್ ಚೆಸ್ಗ್ರ್ಯಾಂಡ್‌ ಪ್ರಿ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಗೆಲುವು ದಾಖಲಿಸಿದರು. ಅವರಿಗೆ ತಲೆಬಾಗಿದವರು ಬೇರೆ ಯಾರೂ ಅಲ್ಲ; ಮಾಜಿ ವಿಶ್ವ ಚಾಂಪಿಯನ್ ಅಂಟೋನೆಟಾ ಸ್ಟೆಫನೋವ.

ಆದರೆ ಭಾರತದ ಅಗ್ರ ಕ್ರಮಾಂಕದ ಆಟಗಾರ್ತಿ ಕೊನೆರು ಹಂಪಿ ಮೊದಲ ಲೆಗ್‌ನ ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಈಗಾಗಲೇ ಗ್ಡ್ರಾಂಡ್‌‌ಮಾಸ್ಟರ್ ಪಟ್ಟ ಅಲಂಕರಿಸಿರುವಚೆನ್ನೈ ಮೂಲದ ವೈಶಾಲಿ ಈ ಗೆಲುವಿನೊಂದಿಗೆ ಕ್ವಾರ್ಟರ್‌ ಫೈನಲ್ ಹಂತ ತಲುಪಿದ್ದು ಮುಂದಿನ ಪಂದ್ಯದಲ್ಲಿ ಇಂಟರ್‌ನ್ಯಾಷನಲ್ ಮಾಸ್ಟರ್ ಮಂಗೋಲಿಯಾದ ಮುಂಕ್ಸುಲ್ ತುರ್ಮುಕ್ ವಿರುದ್ಧ ಸೆಣಸುವರು.

ADVERTISEMENT

2017ರ ಏಷ್ಯನ್ ಬ್ಲಿಟ್ಜ್ಸ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದಿದ್ದ ವೈಶಾಲಿ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದ ವ್ಯಾಲೆಂಟಿನಾ ಗುನಿನಾ ಮತ್ತು ಅಲಿನಾ ಕಶ್ಲಿಂಗ್ಶಿಯಾ ಅವರನ್ನು ಮಣಿಸಿದ್ದರು. ಬಲ್ಗೇರಿಯಾದ ಅಂಟೋನೆಟಾ ವಿರುದ್ಧ 6–5ರ ಗೆಲುವು ಸಾಧಿಸಿದರು.

ಹಾಲಿ ವಿಶ್ವ ರ್‍ಯಾಪಿಡ್ ಚಾಂಪಿಯನ್ ಕೊನೆರು ಹಂಪಿ ವಿಯೆಟ್ನಾಮ್‌ನ ಎದುರಾಳಿಗೆ 4.5–5.5ರಲ್ಲಿ ಮಣಿದರು. ಮೊದಲ ಎರಡು ಹಂತಗಳು ಮುಕ್ತಾಯಗೊಂಡಾಗ ಇಬ್ಬರ ಪಾಯಿಂಟ್ 3.5 ಆಗಿತ್ತು. ಅಂತಿಮ ಹಂತದ ಮೊದಲ ಎರಡು ಗೇಮ್‌ಗಳನ್ನು ಗೆದ್ದು ವಿಯೆಟ್ನಾಂ ಆಟಗಾರ್ತಿ ಹಿಡಿತ ಸಾಧಿಸಿದರು. ನಂತರ ಜಯ ಸಾಧಿಸಿ ಎಂಟರ ಘಟ್ಟದಲ್ಲಿ ಸ್ಥಾನ ಗಳಿಸಿದರು.

ಗೆಲುವಿನ ಸಂಭ್ರಮದಲ್ಲಿ ವೈಶಾಲಿ

‘ಮಾಜಿ ವಿಶ್ವ ಚಾಂಪಿಯನ್ ವಿರುದ್ಧ ಆಡಿ ಗೆದ್ದಿದ್ದೇನೆ. ಇದು ರೋಮಾಂಚಕಾರಿ ಅನುಭವ. ಮೊದಲ ಒಂದು ತಾಸಿನಲ್ಲಿ ನಾನು 5.5–2.5ರ ಮುನ್ನಡೆ ಸಾಧಿಸಿದ್ದೆ. ಕೊನೆಯ ಹಂತದಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿತು. ಹೀಗಾಗಿ ಹಿನ್ನಡೆಯಾಯಿತು. ಆದರೂ ಗೆಲುವು ಸಾಧಿಸಿರುವುದು ಖುಷಿಯ ಸಂಗತಿ’ ಎಂದು ವೈಶಾಲಿ ಹೇಳಿದರು.

ನಾಲ್ಕು ಲೆಗ್‌ಗಳಲ್ಲಿ ನಡೆಯಲಿರುವ ಗ್ರ್ಯಾಂಡ್‌ ಪ್ರಿಯಲ್ಲಿ ಒಟ್ಟು 21 ಆಟಗಾರ್ತಿಯರು ಪಾಲ್ಗೊಂಡಿದ್ದಾರೆ. ಮೂರು ಲೆಗ್‌ಗಳಲ್ಲಿ ಅತ್ಯಧಿಕ ಪಾಯಿಂಟ್ ಕಲೆ ಹಾಕುವ ಇಬ್ಬರು ಆಟಗಾರ್ತಿಯರು ಸೂಪರ್ ಫೈನಲ್‌ಗೆ ಅರ್ಹತೆ ಗಳಿಸಲಿದ್ದಾರೆ. ಸೂಪರ್ ಫೈನಲ್ ಜುಲೈ 20ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.