ADVERTISEMENT

ಬೆಂಗಳೂರು: ಯಂಗ್‌ಸ್ಟರ್ಸ್‌ ಕ್ಲಬ್‌ ರಾಜ್ಯಮಟ್ಟದ ಕಬಡ್ಡಿ 12ರಿಂದ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 16:14 IST
Last Updated 10 ಡಿಸೆಂಬರ್ 2025, 16:14 IST
ಯಂಗ್‌ಸ್ಟರ್ಸ್‌ ಕ್ಲಬ್‌ ಅಧ್ಯಕ್ಷ ಬಿ.ಕೆ. ಶಿವರಾಂ ಅವರು ಟ್ರೋಫಿ ಅನಾವರಣಗೊಳಿಸಿದರು 
ಯಂಗ್‌ಸ್ಟರ್ಸ್‌ ಕ್ಲಬ್‌ ಅಧ್ಯಕ್ಷ ಬಿ.ಕೆ. ಶಿವರಾಂ ಅವರು ಟ್ರೋಫಿ ಅನಾವರಣಗೊಳಿಸಿದರು    

ಬೆಂಗಳೂರು: ಯಂಗ್‌ಸ್ಟರ್ಸ್ ಕಬಡ್ಡಿ ಕ್ಲಬ್‌ ಆಶ್ರಯದಲ್ಲಿ ಇದೇ  12 ರಿಂದ 14ರವರೆಗೆ ಎಸ್‌.ಬಿ. ಶಿವಲಿಂಗಯ್ಯ–ಚಿನ್ನಸ್ವಾಮಿ ರೆಡ್ಡಿ ಅವರ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ನಡೆಯಲಿದೆ. 

ಕೋದಂಡರಾಮಪುರದ ಆಟದ ಮೈದಾನದಲ್ಲಿ ಟೂರ್ನಿ ನಡೆಯಲಿದೆ. ಇದಕ್ಕಾಗಿ ಮಟ್ಟಿಯ ಅಂಕಣವನ್ನು ವಿಶೇಷವಾಗಿ ಸಿದ್ಧಗೊಳಿಸಲಾಗಿದೆ. 

ಬುಧವಾರ ಟೂರ್ನಿಯ ಟ್ರೋಫಿಯನ್ನು ಅನಾವರಣಗೊಳಿಸಿದ ಯಂಗ್‌ಸ್ಟರ್ಸ್ ಕಬಡ್ಡಿ ಕ್ಲಬ್‌ ಅಧ್ಯಕ್ಷ ಬಿ.ಕೆ. ಶಿವರಾಂ, ‘ರಾಜ್ಯದ ಬೇರೆ ಬೇರೆ ಕಡೆಗಳಿಂದ 36 ಕಬಡ್ಡಿ ತಂಡಗಳು ಸ್ಪರ್ಧಿಸಲಿವೆ. ನಗದು ಪುರಸ್ಕಾರಗಳನ್ನು ನೀಡಲಾಗುವುದು’ ಎಂದರು. 

ADVERTISEMENT

‘ಕಬಡ್ಡಿ ಅಂಕಣಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸಿದ್ಧಗೊಳಿಸಲಾಗಿದೆ. ಕುಂಕುಮ, ಅರಿಶಿನ, ಪಚ್ಚಕರ್ಪೂರ, ಹರಳಣ್ಣೆ,  ಶ್ರೀಗಂಧದದ ಸಮ್ಮಿಶ್ರದ ಮಟ್ಟಿಯನ್ನು ಹಾಕಿ ಅಂಕಣವನ್ನು ಸಜ್ಜುಗೊಳಿಸಲಾಗಿದೆ’ ಎಂದರು.

‘ದೇಶಿ ಕ್ರೀಡೆ ಕಬಡ್ಡಿಯನ್ನು ಪ್ರೋತ್ಸಾಹಿಸಲು ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್  ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ.  ಈ ಕ್ಲಬ್‌ 1965ರಲ್ಲಿ ಸ್ಥಾಪನೆಯಾಯಿತು. ಇಲ್ಲಿಯವರೆಗೂ 500ಕ್ಕಿಂತ ಹೆಚ್ಚು ಕಬಡ್ಡಿ ಪಟುಗಳು ತರಬೇತಿ ಪಡೆದಿದ್ದಾರೆ. 80ಕ್ಕೂ ಹೆಚ್ಚು ಆಟಗಾರರು ರಾಷ್ಟ್ರ, ರಾಜ್ಯ ಮತ್ತು ವಿಶ್ವವಿದ್ಯಾಲಯಗಳ ತಂಡಗಳನ್ನು ಪ್ರತಿನಿಧಿಸಿದ್ದಾರೆ.  1982ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ ನಮ್ಮ ಕ್ಲಬ್ ಆಟಗಾರರಾದ ವೈ.ಕುಪ್ಪರಾಜ್ ಮತ್ತು ಚಿನ್ನಸ್ವಾಮಿರೆಡ್ಡಿ ಅವರು ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆಗ ತಂಡ ಚಿನ್ನದ ಪದಕ ಗಳಿಸಿತ್ತು. 60ವರ್ಷ ಇತಿಹಾಸವಿರುವ ನಮ್ಮ ಕ್ಲಬ್ 25 ರಾಜ್ಯಮಟ್ಟದ, ನಾಲ್ಕು ಅಖಿಲ ಭಾರತ ಹಾಗೂ ಕೆವಿಎಲ್ ಮಾದರಿಯಲ್ಲಿ ವಾಲಿಬಾಲ್ ಟೂರ್ನಿ, ಪುಟ್ ಬಾಲ್ ಟೂರ್ನಿಗಳನ್ನು ಆಯೋಜಿಸಿದೆ’ ಎಂದು ವಿವರಿಸಿದರು. 

‘ಡಿ.12ರಂದು ಸಂಜೆ 6ಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ, ಧಾರ್ಮಿಕ ದತ್ತಿ ಇಲಾಖೆ ಸಮಿತಿ ಸದಸ್ಯರಾದ ಕೆ.ಎಂ.ನಾಗರಾಜ್, ಶಾಸಕರಾದ ಡಾ. ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನಂ ನಾಯ್ಡು, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ಹೊನ್ನಪ್ಪಗೌಡ, ವಸಂತ ಚಿನ್ನಸ್ವಾಮಿರೆಡ್ಡಿ, ಆಶಾ ಸೋಮಶೇಖರ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

‘ಡಿ. 14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕಬಡ್ಡಿ ಕೋಚ್ ಬಿ.ಸಿ. ರಮೇಶ್ ಮತ್ತಿತರರು ಹಾಜರಿರುವರು’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.