ADVERTISEMENT

ಅತಿ ಕಾಳಜಿ ಅತಿರೇಕವಾದೀತು

ಎಚ್.ಕೆ.ಶರತ್
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ರಿಚಯಸ್ಥ ಮಹಿಳೆಯೊಬ್ಬರು ಈಚೆಗೆ ಮನೆಗೆ ಬಂದಿದ್ದರು. ತಮ್ಮ ಮೊಮ್ಮಕ್ಕಳ ಗುಣಗಾನ ಮಾಡುವ ಭರದಲ್ಲಿ ಅವರು ಆಡಿದ ಮಾತುಗಳು, ಮಕ್ಕಳನ್ನು ಮಾರ್ಕ್ಸ್ ತೆಗೆಯುವ ಯಂತ್ರಗಳಂತೆ ನಡೆಸಿಕೊಳ್ಳುವ ಒಂದು ವರ್ಗದ ಜನರ ಮನಃಸ್ಥಿತಿಗೆ ಕನ್ನಡಿ ಹಿಡಿಯುತ್ತಿದ್ದವು.

`ಬೆಂಗಳೂರಿನಲ್ಲಿರುವ ಮಗನ ಮಗಳು ಎಲ್ಲ ಸಬ್ಜೆಕ್ಟ್‌ನಲ್ಲೂ ನೂರಕ್ಕೆ ನೂರು, ತೊಂಬತ್ತೊಂಬತ್ತು, ತೊಂಬತ್ತೆಂಟು ಅಂಕ ಪಡೆಯುತ್ತಾಳೆ. ಈ ವಿಚಾರವನ್ನು ಪಕ್ಕದ ಮನೆಯವರಿಗೆ ನಾನು ಹೇಳಿದರೆ ಅವರು ನಗುತ್ತಿದ್ದರು. ಕಳೆದ ತಿಂಗಳು ಅವಳು ನನ್ನ ಮನೆಗೆ ಬಂದಾಗ ಅವರಿಗೂ ಮಾರ್ಕ್ಸ್ ಕಾರ್ಡ್ ತೋರಿಸಿದ ಮೇಲೆ ಅವರು ಹುಬ್ಬೇರಿಸಿದರು. ನನ್ನ ಮಗ ತನ್ನ ಮಕ್ಕಳನ್ನು ಚೆನ್ನಾಗಿ ಬೆಳೆಸುತ್ತಿದ್ದಾನೆ.

ಸ್ಕೂಲಿಗೆ ಕರೆದುಕೊಂಡು ಹೋಗಿ ಬರುವವನು ಅವನೇ. ಮಕ್ಕಳನ್ನು ಪೋಲಿ ಹೊಡೆಯಲು ಬಿಡಲ್ಲ. ಸ್ಕೂಲಿಂದ ಬಂದ ಕೂಡಲೇ ಕೂರಿಸಿ ಓದಿಸುತ್ತಾನೆ. ಮಕ್ಕಳೂ ಅಷ್ಟೇ. ತುಂಬಾ ಒಳ್ಳೆಯವರು. ಯಾರನ್ನೂ ಫ್ರೆಂಡ್ಸ್ ಮಾಡ್ಕೊಂಡಿಲ್ಲ. ಮಕ್ಳು ಅಂದ್ರೆ ಹೀಗಿರಬೇಕು. ಅದೇ ಲತಮ್ಮನ ಮನೆಯ ಹುಡುಗ ಆಕಾಶನ್ನ ನೋಡಿ. ಯಾವಾಗ್ಲೂ ಪೋಲಿ ಹುಡುಗರ ಜೊತೆ ತಿರುಗ್ತಿರ್ತಾನೆ. ಸರಿಯಾಗಿ ಓದದೇ ಹಾಳಾಗಿದ್ದಾನೆ' ಹೀಗೆ ಸಾಗಿತ್ತು ಅವರ ಮೊಮ್ಮಕ್ಕಳ ಗುಣಗಾನ.

ತಮ್ಮ ಮಕ್ಕಳನ್ನು ನೆರೆಹೊರೆಯ ಮಕ್ಕಳೊಂದಿಗೆ ಆಡಲು ಬಿಡದೇ ಅವರನ್ನು ನಾಲ್ಕು ಗೋಡೆಗಳ ನಡುವೆ ಕೂಡಿ ಹಾಕಿಕೊಂಡು ಓದು, ಓದು ಎಂದು ಪೀಡಿಸುವುದು, ಇಲ್ಲವೇ ಟ್ಯೂಷನ್‌ಗೆ ಸೇರಿಸುವ ಮೂಲಕ ಆ ಜವಾಬ್ದಾರಿಯನ್ನು ಬೇರೆಯವರ ಹೆಗಲಿಗೆ ಏರಿಸುವುದು ಹಲವು ಪೋಷಕರ ಪಾಲಿಗೆ ಹೆಮ್ಮೆಯ ವಿಚಾರ ಆಗಿರುವುದು ವಿಪರ್ಯಾಸ.

ಇಂದಿನ ಸ್ಪರ್ಧಾತ್ಮಕ ಯುಗ ಎದುರು ನೋಡುವುದು ಹೆಚ್ಚು ಅಂಕ ಗಳಿಸಿದ ರ‍್ಯಾಂಕ್ ‌ ಹೋಲ್ಡರ್‌ಗಳನ್ನಲ್ಲ. ಸ್ವತಂತ್ರವಾಗಿ ಚಿಂತಿಸುವ, ಚುರುಕಾಗಿ ಗ್ರಹಿಸುವ ಮತ್ತು ಅಗತ್ಯ ಕೌಶಲ ಇರುವವರಿಗೆ ಇಂದು ಹೆಚ್ಚೆಚ್ಚು ಅವಕಾಶಗಳು ದೊರೆಯುತ್ತಿವೆ. ನಾಲ್ಕು ವರ್ಷದ ಎಂಜಿನಿಯರಿಂಗ್ ಪದವಿ ಪಡೆಯಲು ಎಂಟು ವರ್ಷ ತೆಗೆದುಕೊಂಡ ನನ್ನ ಗೆಳೆಯನೊಬ್ಬ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾನೆ. ಅದೇ ನಮ್ಮ ಗುಂಪಿನಲ್ಲೆಲ್ಲ ಅತ್ಯಧಿಕ ಅಂಕ ಗಳಿಸಿದ್ದವನು ಇನ್ನೂ ಕೆಲಸ ಹುಡುಕುತ್ತಲೇ ಇದ್ದಾನೆ.

ಮಕ್ಕಳ ಓದಿಗೆ ಒಳ್ಳೆಯ ಅಡಿಪಾಯ ಹಾಕಬೇಕು ಎಂಬುದೇನೋ ಸರಿ. ಆದರೆ ಅವರು ಕೇವಲ ಪುಸ್ತಕದ ಹುಳುಗಳಾದರೆ ಬದುಕಿನ ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ ಆತ್ಮಸ್ಥೈರ್ಯ ಅವರಿಗೆ ದೊರೆಯುವುದಿಲ್ಲ. ಓದು ಮಕ್ಕಳ ಜೀವನ ಶೈಲಿಯ ಒಂದು ಭಾಗವಾಗಬೇಕೇ ಹೊರತು ಅದೇ ಎಲ್ಲವೂ ಆಗಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳೂ ಅತ್ಯಗತ್ಯ ಎಂಬ ಸರಳ ಸಂಗತಿಯೂ ಎಷ್ಟೋ ಪೋಷಕರಿಗೆ ಅರಿವಾಗದಿರುವುದು ಮಕ್ಕಳ ಪಾಲಿನ ದುರಂತ.

ಮಕ್ಕಳನ್ನು ಒಳ್ಳೆಯ ಶಾಲೆಗಳಲ್ಲಿ ಓದಿಸಲೆಂದೇ ಹಳ್ಳಿ ತೊರೆದು ನಗರಗಳಲ್ಲಿ ನೆಲೆಸುವ ಪೋಷಕರಲ್ಲಿ ಇಂತಹ ಪ್ರವೃತ್ತಿ ಹೆಚ್ಚಾಗಿ ಕಂಡು ಬರುತ್ತದೆ. ಕೆಲ ಸುಶಿಕ್ಷಿತ ತಂದೆ ತಾಯಿ, ಮಕ್ಕಳ ವಿಚಾರದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಗ್ರಾಮೀಣ ಹಿನ್ನೆಲೆಯುಳ್ಳ ನೆರೆಹೊರೆಯ ಮಕ್ಕಳೊಂದಿಗೆ ಆಡಿದರೆ ಅವರ ಬುದ್ಧಿಯೇ ಇವರಿಗೂ ಬಂದುಬಿಡುತ್ತದೆ ಎಂಬ ಸಂಕುಚಿತ ಮನೋಭಾವ ಹೊಂದಿರುತ್ತಾರೆ.

ಈ ಮೂಲಕ ತಮ್ಮ ಮಕ್ಕಳು ಎಲ್ಲ ವರ್ಗದ ಮಕ್ಕಳೊಂದಿಗೆ ಮುಕ್ತವಾಗಿ ಬೆರೆಯಲು ಅವಕಾಶ ನೀಡುವುದಿಲ್ಲ. ಮಕ್ಕಳನ್ನು ಮಕ್ಕಳಾಗಿಯೇ ಇರಲು ಬಿಟ್ಟರೆ ಯಾವುದೇ ಸಮಸ್ಯೆ ಇಲ್ಲ. ಅವರ ಮೇಲೆ ಬೇಡದ ಹೊರೆ ಹೇರುವುದರಿಂದ ಹೊಸ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಒಂದು ಹಂತದವರೆಗೂ ತಂದೆ-ತಾಯಿ ಹೇಳಿದಂತೆ ಕೇಳಿಕೊಂಡು ನಡೆಯುವ ಮಕ್ಕಳು, ಇದ್ದಕ್ಕಿದ್ದಂತೆ ತಿರುಗಿ ಬೀಳುತ್ತಾರೆ. ಇಂತಹ ನಿದರ್ಶನಗಳೂ ನಮ್ಮ ಕಣ್ಣ ಮುಂದೆಯೇ ಇವೆ.

ಮಕ್ಕಳ ಬಗ್ಗೆ ಕಾಳಜಿ ತೋರುವುದು, ಅವರು ಹಾದಿ ತಪ್ಪದಂತೆ ನಿಗಾ ವಹಿಸುವುದು, ಓದಿನಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ಖಂಡಿತಾ ತಪ್ಪಲ್ಲ. ಆದರೆ ಯಾವುದೂ ಅತಿರೇಕಕ್ಕೆ ಹೋಗಬಾರದು. ಅತಿಯಾದರೆ ಅಮೃತವೂ ವಿಷವಾಗುವ ಅಪಾಯವಿದೆ ಅಲ್ಲವೇ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.