ADVERTISEMENT

ಆವಿಷ್ಕಾರಗಳಿಗೆ ಇಲ್ಲಿದೆ ಪ್ರೋತ್ಸಾಹ

ಮಂಜುನಾಥ ಗೌಡರ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ವ್ಯಕ್ತಿಯ ಸೃಜನಾತ್ಮಕ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಉದ್ಯಮಶೀಲರನ್ನಾಗಿ ಪರಿವರ್ತಿಸುವುದುಮುಖ್ಯ ಉದ್ದೇಶ.

ಹೆ ಸರು ಅಣ್ಣಾ ಸಾಹೇಬ್ ಉಡ್ಡಗಾವಿ. ವಯಸ್ಸು 62. ವಿದ್ಯಾರ್ಹತೆ 7ನೇ ತರಗತಿ. ಅಷ್ಟಾಗಿ ಸಾರಿಗೆ ಸಂಪರ್ಕಗಳಿಲ್ಲದ ಬೆಳಗಾವಿ ಜಿಲ್ಲೆಯ ಗ್ರಾಮದಲ್ಲಿ ಇವರ ವಾಸ.
ಅಣ್ಣಾ ಸಾಹೇಬರ ಸಂಶೋಧನೆ `ರೇನ್ ಗನ್~.

ಇದರಿಂದ ಕಬ್ಬು ಬೆಳೆಗೆ ಅನಾಯಾಸವಾಗಿ ನೀರು ಸಿಂಪರಣೆ ಮಾಡಬಹುದು. ಇಳುವರಿ ಸಹ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತದೆ. ಆದರೆ ಅಣ್ಣಾ ಆರ್ಥಿಕವಾಗಿ ಸಬಲರಲ್ಲ. ಹೀಗಾಗಿ ಇವರ ಮಹತ್ವದ ಸಂಶೋಧನೆಗೆ ಪ್ರಚಾರವೇ ಸಿಗಲಿಲ್ಲ. ಈ ಹಂತದಲ್ಲಿ ಅಣ್ಣಾ ಅವರಿಗೆ ನೆರವಾದದ್ದು `ಟೆಪ್~. (ಛಿ)

2008ರಲ್ಲಿ ಅಣ್ಣಾ ಸಾಹೇಬರಿಗೆ ಕೇವಲ ಪ್ರಚಾರ ದೊರೆಯುವುದು ಅಷ್ಟೇ ಅಲ್ಲ. ಅವರ ಸಂಶೋಧನೆಗೆ ಪೇಟೆಂಟ್ ಸಿಗಲೂ `ಟೆಪ್~ ಸಹಾಯ ಮಾಡಿತು. ಸಹಾಯಧನ ಸಹ ದೊರಕಿಸಿಕೊಟ್ಟಿತು.

ಏನಿದು ಟೆಪ್?:
ಭಾರತ ಸರ್ಕಾರ ತಾಂತ್ರಿಕೋದ್ಯಮಿಗಳ ಪ್ರೋತ್ಸಾಹಕ್ಕೆ ಜಾರಿಗೆ ತಂದಿರುವ ವಿನೂತನ ಕಾರ್ಯಕ್ರಮ ಈ `ಟೆಪ್~ (ಟಿಇಪಿಪಿ-ಟೆಕ್ನೊಪ್ರಿನ್ಯೂರ್ ಪ್ರಮೋಷನ್ ಪ್ರೋಗ್ರಾಂ). ವ್ಯಕ್ತಿಯ ಸೃಜನಾತ್ಮಕ ಸಾಮರ್ಥ್ಯ ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಉದ್ಯಮಶೀಲರನ್ನಾಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.
ಅಂತಹ ಉದ್ದೇಶದ ಟೆಪ್ ಶಾಖೆಯೊಂದು ತುಮಕೂರಿನ ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ಸ್ಥಾಪನೆಯಾಗಿದೆ. 

 2003 ಸ್ಥಾಪನೆಯಾದ ಶಾಖೆ ಇಲ್ಲಿಯವರೆಗೂ ಎಂಟು ಮಂದಿಯ ಆವಿಷ್ಕಾರಗಳಿಗೆ ಫಲ ದೊರಕಿಸಿಕೊಟ್ಟಿದೆ.ಅದೇ ರೀತಿ ಸಂಶೋಧಕರಿಗೆ ಮಾರ್ಗದರ್ಶನ, ಕನಸಿನ ಉದ್ಯಮ ಸ್ಥಾಪನೆಗೆ ಸಲಹೆ ಹಾಗೂ ಸೂಚನೆಗಳನ್ನು ಕಳೆದ ಐದಾರು ವರ್ಷಗಳಿಂದ ನೀಡುತ್ತಿದೆ. ರಾಜ್ಯದಲ್ಲಿ ತುಮಕೂರು ಹೊರತುಪಡಿಸಿದರೆ ಟೆಪ್ ಶಾಖೆ ಇರುವುದು ಸುರತ್ಕಲ್ ಹಾಗೂ ಬೆಂಗಳೂರಿನಲ್ಲಿ ಮಾತ್ರ.

`ಪ್ರಾಥಮಿಕ ಶಿಕ್ಷಣ ಹೊಂದಿದ ವ್ಯಕ್ತಿಯೊಬ್ಬ ತನ್ನಲ್ಲಿನ ಸೃಜನಾತ್ಮಕತೆ ಬಳಸಿ ಸಂಶೋಧಿಸಿದ ವಸ್ತುವಿಗೆ ಸರಿಯಾದ ಬೆಲೆ, ಬೆಂಬಲ ಸಿಗುವಂತೆ ಮಾಡುವುದು ಟೆಪ್‌ನ ಮೊದಲ ಆದ್ಯತೆ ಎನ್ನುತ್ತಾರೆ~ ಶಾಖೆಯ ನಿರ್ದೇಶಕ ಪ್ರೊ.ಎಲ್.ಸಂಜೀವ್‌ಕುಮಾರ್.

ಆವಿಷ್ಕಾರಗಳನ್ನು ಆರಂಭಿಕ ಕೈಗಾರಿಕೆಗಳನ್ನಾಗಿ ಪ್ರೋತ್ಸಾಹಿಸುವ ವ್ಯಕ್ತಿಗಳಿಗೆ, ಯಾವುದೇ ಸಂಸ್ಥೆಯಲ್ಲಿ  ಹೊಸ ಆವಿಷ್ಕಾರಗಳಿಗಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗೆ (ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ ಅಗತ್ಯ) ಟೆಪ್‌ನ ಮಾರ್ಗದರ್ಶನ  ದೊರೆಯುತ್ತದೆ ಎನ್ನುತ್ತಾರೆ ಅವರು.

ಬೆಂಬಲ:
`ಸಂಶೋಧಕರಿಗೆ `ಟೆಪ್~ ಎರಡು ಹಂತದಲ್ಲಿ ಬೆಂಬಲ ನೀಡುತ್ತದೆ. ಮೊದಲ ಹಂತದಲ್ಲಿ ಸೂಕ್ಷ್ಮ ತಾಂತ್ರಿಕೋದ್ಯಮಶೀಲತಾ ಬೆಂಬಲ (ಗರಿಷ್ಠ ರೂ.75 ಸಾವಿರ), ಟೆಪ್ ಯೋಜನಾ ನಿಧಿ (ಗರಿಷ್ಠ ರೂ.15 ಲಕ್ಷ ), ಎರಡನೇ ಹಂತದಲ್ಲಿ ಪೂರಕ ಟೆಪ್ ನಿಧಿ (ಮೊದಲನೆ ಹಂತ ಮುಕ್ತಾಯವಾದ ನಂತರ ಗರಿಷ್ಠ ರೂ.7.5 ಲಕ್ಷ),

ಅಭೂತಪೂರ್ವ (ಸಿಮಲೆಸ್) ಉನ್ನತೀಕರಣ (ಸ್ಕೇಲ್-ಅಪ್) ಬೆಂಬಲ ಗರಿಷ್ಠ ರೂ.45 ಲಕ್ಷ, ಬೌದ್ಧಿಕ ಸ್ವಾಮ್ಯ ಹಕ್ಕುಗಳು (ಐಪಿಆರ್) ಎಲ್ಲ ಹಕ್ಕುಗಳು  ಆವಿಷ್ಕರಿಸಿದ ಸಂಶೋಧಕರದೇ ಹಕ್ಕುಗಳಾಗಿರುತ್ತವೆ. `ಟೆಪ್~ ಹಕ್ಕುಗಳನ್ನು ಕೇಳುವುದಿಲ್ಲ~ ಎನ್ನುತ್ತಾರೆ ಶಾಖೆಯ ನಿರ್ದೇಶಕ.


ಟೆಪ್‌ಗೆ ನೆರವು :
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿಎಸ್‌ಐಆರ್) ಮತ್ತು ತಂತ್ರಜ್ಞಾನ ಮಾಹಿತಿ, ಮುನ್ಸೂಚನೆ ಮತ್ತು ಮೌಲ್ಯಮಾಪನಾ ಮಂಡಳಿ (ಟೈಪ್ಯಾಕ್), ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ (ಡಿಎಸ್‌ಟಿ), ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಉದ್ಯಮಶೀಲತಾ ಸಂಸ್ಥೆಗಳು ನೆರವು ನೀಡುತ್ತಿವೆ.

ಸೂಚನೆ:
ಈ ಯೋಜನೆಯಡಿ ವಿಶಿಷ್ಟ ತಂತ್ರಾಂಶ ಅಭಿವೃದ್ಧಿ ಮತ್ತು ಕೇವಲ ಹಕ್ಕುಪತ್ರಕ್ಕಾಗಿ ಅಥವಾ ಪ್ರತ್ಯಕ್ಷ ವಾಣಿಜ್ಯ ಭೂಮಿಕೆ ಇಲ್ಲದಂತಹ ಮೂಲ ವೈಜ್ಞಾನಿಕ ಸಂಶೋಧನೆಯ ಪ್ರತಿಪಾದನೆಗಳನ್ನು ಟೆಪ್ ಯೋಜನೆ ಪರಿಗಣಿಸುವುದಿಲ್ಲ. ಆದರೆ ಗ್ರಾಮೀಣ ಉತ್ಪನ್ನದ ಪ್ರತಿಪಾದನೆಗಳಿಗೆ ಅವಕಾಶವಿದೆ.

ಯೋಜನೆಯ ವಿವರಗಳಿಗೆ ಪ್ರೊ.ಸಂಜೀವಕುಮಾರ್ (ಮೊ.9845040167) ಹಾಗೂ ಟೆಪ್ ಕುರಿತು www.dsir.gov.in  ವೆಬಸೈಟ್ ಸಂಪರ್ಕಿಸಬಹುದು.

ADVERTISEMENT


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.