ADVERTISEMENT

ಇಂಗ್ಲೆಂಡ್‌ ಅಂಗಳದಲ್ಲಿ ಭಾರತದ ಹೆಜ್ಜೆಗುರುತುಗಳು

ಗಿರೀಶದೊಡ್ಡಮನಿ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಇಂಗ್ಲೆಂಡ್‌ ಅಂಗಳದಲ್ಲಿ ಭಾರತದ ಹೆಜ್ಜೆಗುರುತುಗಳು
ಇಂಗ್ಲೆಂಡ್‌ ಅಂಗಳದಲ್ಲಿ ಭಾರತದ ಹೆಜ್ಜೆಗುರುತುಗಳು   

ಇಂಗ್ಲೆಂಡ್ ಹೆಸರು ಕಿವಿಗೆ ಬಿದ್ದಾಕ್ಷಣ ಭಾರತದ ಕ್ರಿಕೆಟ್‌ಪ್ರೇಮಿಗಳಲ್ಲಿ ನೆನಪಿನಲೆಗಳು ಎತ್ತರಕ್ಕೆ ಚಿಮ್ಮುತ್ತವೆ.

1983ರ ವಿಶ್ವಕಪ್‌ಗೆ ಕಪಿಲ್ ಡೆವಿಲ್ಸ್‌ ಮುತ್ತಿಟ್ಟ ಆ ಕ್ಷಣ, 2002ರಲ್ಲಿ ನ್ಯಾಟ್‌ವೆಸ್ಟ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿ ತಮ್ಮ ಮೈಮೇಲಿನ ಜರ್ಸಿ ತೆಗೆದು ಗಾಳಿಯಲ್ಲಿ ಬೀಸಿದ್ದ ಸೌರವ್‌ ಗಂಗೂಲಿ, 2013ರಲ್ಲಿ  ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ ತಂಡದ ಮಹೇಂದ್ರಸಿಂಗ್ ದೋನಿಯ ಮುಗುಳ್ನಗೆಯ ದೃಶ್ಯಗಳು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಇದೀಗ ಅಂತಹ ಮತ್ತೊಂದು ಹೆಮ್ಮೆಯ ಕ್ಷಣ ದಾಖಲಿಸುವ ನಿರೀಕ್ಷೆಯಲ್ಲಿ ಕ್ರಿಕೆಟ್‌ ಪ್ರೇಮಿಗಳಿದ್ದಾರೆ. ಅದಕ್ಕಾಗಿ ಅವರ ನೋಟ ವಿರಾಟ್ ಕೊಹ್ಲಿ ಮೇಲೆ ನೆಟ್ಟಿದೆ.

ಲಾರ್ಡ್ಸ್‌ ಅಟ್ಟಣಿಗೆಯ ಆ ನೆನಪು
ಲಾರ್ಡ್ಸ್‌ ಕ್ರೀಡಾಂಗಣದ ಅಟ್ಟಣಿಗೆಯಲ್ಲಿ ನಿಂತು ಸಂಭ್ರಮಿಸುವುದೆಂದರೆ  ಯಾವುದೇ ದೇಶದ ಕ್ರಿಕೆಟ್‌ ತಂಡಕ್ಕೂ ಹೆಮ್ಮೆಯ ವಿಷಯ  ಭಾರತಕ್ಕಂತೂ ಅದು ಪ್ರತಿಷ್ಠೆಯ ವಿಷಯ. ಒಂದು ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳು ಕ್ರಿಕೆಟ್ ಆಡುವಾಗ  ಬೆರಗುಗಣ್ಣಿನಿಂದ ನೋಡುತ್ತಿದ್ದ ಭಾರತ  ಇವತ್ತು ವಿಶ್ವ ಕ್ರಿಕೆಟ್‌ನ ಹಿರಿಯಣ್ಣನಾಗಿ ಬೆಳೆದಿದೆ.  ಅದರ ಮುನ್ನುಡಿ ಬರೆದಿದ್ದು  ಅದೇ ಲಾರ್ಡ್ಸ್‌ನಲ್ಲಿ.

ADVERTISEMENT

1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ‘ಕಪ್ಪುಕುದುರೆ’ಯಾಗಿ ಕಣಕ್ಕಿಳಿದಿದ್ದ ಭಾರತ ವಿಂಡೀಸ್ ದೈತ್ಯರನ್ನು ಸದೆಬಡಿದಾಗ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿತ್ತು.

ನಾಯಕ ಕಪಿಲ್ ದೇವ್, ಆಲ್‌ರೌಂಡರ್ ಮೊಹಿಂದರ್ ಅಮರನಾಥ್, ಮದನ್‌ ಲಾಲ್, ಕೀರ್ತಿ ಆಜಾದ್,  ಕರ್ನಾಟಕದ ರೋಜರ್ ಬಿನ್ನಿ,  ಸೈಯ್ಯದ್ ಕಿರ್ಮಾನಿ, ಸುನಿಲ್ ಗಾವಸ್ಕರ್   ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದರು. ದೈತ್ಯ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್‌ ಹೊಡೆದ ಚೆಂಡನ್ನು 20 ಅಡಿಗಳಷ್ಟು ದೂರ ಹಿಮ್ಮೊಗವಾಗಿ ಓಡುತ್ತ ಕ್ಯಾಚ್ ಪಡೆದ ಕಪಿಲ್  ಅವರ ಸಾಹಸವನ್ನು ಮರೆಯುವುದುಂಟೆ.

ಅಮರನಾಥ್ ಅವರ ಛಲ ಬಿಡದ ಆಲ್‌ರೌಂಡ್ ಆಟಕ್ಕೆ  ಸಾಟಿಯೇ ಇಲ್ಲ. ಅವರೆಲ್ಲರ ಶ್ರಮದ ಫಲವಾಗಿ ಸಿಕ್ಕ ಆ ಗೆಲುವಿನಿಂದ  ಭಾರತದಲ್ಲಿ ಕ್ರಿಕೆಟ್‌ನ ಬೆಳವಣಿಗೆ ಏರುಮುಖವಾಯಿತು. ತಾಂತ್ರಿಕವಾಗಿ, ಆರ್ಥಿಕವಾಗಿ ಆಗಸದೆತ್ತರಕ್ಕೆ ಬೆಳೆದು ನಿಂತಿದೆ.  ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ)ಗೆ ಸೆಡ್ಡು ಹೊಡೆಯುವಷ್ಟು ದೊಡ್ಡ ಶಕ್ತಿಯಾಗಿದೆ.

ಗಂಗೂಲಿ ಜರ್ಸಿ ಮತ್ತು ಲಾರ್ಡ್ಸ್
ಭಾರತ ಕ್ರಿಕೆಟ್‌ ಕಂಡ ಆಕ್ರಮಣಕಾರಿ ನಾಯಕರಲ್ಲಿ ಸೌರವ್‌ ಗಂಗೂಲಿ ಪ್ರಮುಖರು. ಎಡಗೈ ಬ್ಯಾಟ್ಸ್‌ಮನ್ ಮತ್ತು ಮಲಗೈ ಮಧ್ಯಮವೇಗಿಯಾಗಿದ್ದ ಬಂಗಾಳಿಬಾಬು  ಗಂಗೂಲಿ ನಾಯಕತ್ವದಲ್ಲಿ  ಭಾರತ ತಂಡವು 2002ರಲ್ಲಿ ನ್ಯಾಟ್‌ವೆಸ್ಟ್ ಕಪ್ ಗೆದ್ದಿತ್ತು.  ಫೈನಲ್‌ನಲ್ಲಿ ಇಂಗ್ಲೆಂಡ್ ತಂಡ ನೀಡಿದ್ದ 325 ರನ್‌ಗಳ ಗುರಿಯನ್ನು  ಬೆನ್ನತ್ತಿ ಗೆದ್ದಿತ್ತು.  

ಗಂಗೂಲಿ, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್ ಅವರ ಅರ್ಧಶತಕಗಳು ಭಾರತಕ್ಕೆ ಮತ್ತೊಂದು  ಮೈಲುಗಲ್ಲು ಸ್ಥಾಪನೆಗೆ ಬಲ ತುಂಬಿದ್ದವು. ಅದರಲ್ಲೂ ಏಳನೇ ಕ್ರಮಾಂಕದಲ್ಲಿ ಕೈಫ್  75 ಎಸೆತಗಳಲ್ಲಿ ಬಾರಿಸಿದ್ದ 87 ರನ್‌ಗಳು ಗೆಲುವಿನ ತೋರಣ ಕಟ್ಟಿದವು. ಇಡೀ ಟೂರ್ನಿಯಲ್ಲಿ ಕರ್ನಾಟಕದ ರಾಹುಲ್ ದ್ರಾವಿಡ್ ಅವರು 245 ರನ್‌ಗಳ ಕಾಣಿಕೆ ನೀಡಿದ್ದರು. ವಿಕೆಟ್‌ಕೀಪರ್‌ ಕಾರ್ಯವನ್ನೂ ನಿಭಾಯಿಸಿದ್ದರು. ಅತ್ತ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಂಗೂಲಿ ತಮ್ಮ ಜರ್ಸಿ ಬಿಚ್ಚಿ ಗಾಳಿಯಲ್ಲಿ ತಿರುಗಿಸಿ ಸುದ್ದಿಯಾದರು.
****
ನೆನಪುಗಳ ಮೆರವಣಿಗೆ...
ಮಹೇಂದ್ರಸಿಂಗ್ ದೋನಿ ಅವರದ್ದು ಗಂಗೂಲಿಯವರ ಸ್ವಭಾವಕ್ಕೆ ತದ್ವಿರುದ್ಧವಾದ ಗುಣ. 2007ರ ಟ್ವೆಂಟಿ–20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದ ಕ್ಯಾಪ್ಟನ್‌ ಕೂಲ್ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿಗೂ ಮುತ್ತಿಕ್ಕಿದ್ದರು. 

ಆ ಟೂರ್ನಿಯಲ್ಲಿ ಫೈನಲ್ ಸೇರಿದಂತೆ ಎಲ್ಲ ನಾಲ್ಕು ಪಂದ್ಯಗಳಲ್ಲಿಯೂ ಭಾರತ ಗೆದ್ದಿತ್ತು. ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಅತಿ ಹೆಚ್ಚು ರನ್ ಗಳಿಸಿದ (363) ಬ್ಯಾಟ್ಸ್‌ಮನ್ ಆಗಿದ್ದರು. ಅವರ ಎರಡು ಶತಕಗಳು ಮತ್ತು ಒಂದು ಅರ್ಧಶತಕದ ಸೊಬಗು ಇಂದಿಗೂ ಮಾಸಿಲ್ಲ.

ಸದ್ಯ ಐಸಿಸಿ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರವೀಂದ್ರ ಜಡೇಜ  ಐದು ಪಂದ್ಯಗಳಲ್ಲಿ 12 ವಿಕೆಟ್ ಕಬಳಿಸಿದ್ದರು. ವೇಗಿಗಳ ಸ್ವರ್ಗದಂತಿದ್ದ ಪಿಚ್‌ಗಳಲ್ಲಿ ಅವರು ಸ್ಪಿನ್ ಜಾದೂ ತೋರಿಸಿದ್ದರು.

ಅಂದು ಪ್ರಶಸ್ತಿಯ ಮುಂದೆ ಗಂಗ್ನಂ ಡ್ಯಾನ್ಸ್‌ ಮಾಡಿದ್ದ ಚಿಗುರುಮೀಸೆಯ ವಿರಾಟ್ ಈಗ ತಂಡದ ನಾಯಕರಾಗಿದ್ದಾರೆ. ದೋನಿ ಕೂಡ ತಂಡದಲ್ಲಿದ್ದಾರೆ. ಹೋದ ಬಾರಿ ಗೆದ್ದ ತಂಡದಲ್ಲಿದ್ದ ಬಹುತೇಕ ಎಲ್ಲ ಆಟಗಾರರು ಈಗಲೂ ಇದ್ದಾರೆ.

ಏಕದಿನ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ವಿದೇಶಿ ನೆಲದಲ್ಲಿ ಮೊದಲ ಬಾರಿಗೆ ಕಣಕ್ಕೆ ಇಳಿಯುತ್ತಿದ್ದಾರೆ.   ಲಂಡನ್ ಅಂಗಳದಲ್ಲಿ ಮತ್ತೊಂದು ಗೆಲುವಿನ ಹೆಜ್ಜೆಗುರುತು ಮೂಡಿಸುವುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.