ADVERTISEMENT

ಕ್ಯಾಚ್ ಇಟ್...

ಗಿರೀಶದೊಡ್ಡಮನಿ
Published 20 ಮೇ 2018, 19:30 IST
Last Updated 20 ಮೇ 2018, 19:30 IST
ವಿರಾಟ್ ಕೊಹ್ಲಿ -ಪಿಟಿಐ ಚಿತ್ರಗಳು
ವಿರಾಟ್ ಕೊಹ್ಲಿ -ಪಿಟಿಐ ಚಿತ್ರಗಳು   

1983ರ ಆ ದಿನ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್ ತಂಡದ ದೈತ್ಯ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್‌ ಅವರು ಔಟಾಗಿರದಿದ್ದರೆ ಭಾರತ ವಿಶ್ವಕಪ್ ಗೆಲ್ಲುವುದು ಕಷ್ಟವಾಗುತ್ತಿತ್ತು. ಅಂದು ಭಾರತ ತಂಡದ ನಾಯಕ ಕಪಿಲ್ ದೇವ್ ಕೆಲವು ಗಜಗಳ ದೂರದವರೆಗೆ ಹಿಮ್ಮೊಗವಾಗಿ ಓಡಿ ಪಡೆದಿದ್ದ ಕ್ಯಾಚ್ ಅವಿ ಸ್ಮರಣೀಯವಾಯಿತು.

ಇಂದಿಗೂ ಅದು ಕ್ರಿಕೆಟ್ ಲೋಕದ ಅದ್ಭುತ ಕ್ಯಾಚ್‌ ಆಗಿದೆ. ಕಳೆದ 35 ವರ್ಷಗಳಲ್ಲಿ ಕ್ರಿಕೆಟ್‌ ಲೋಕ ಅಪಾರವಾಗಿ ಬದಲಾಗಿದೆ. ಫೀಲ್ಡಿಂಗ್ ತಂತ್ರಗಾರಿಕೆಗಳಲ್ಲೂ ಹಲವು ಮಹತ್ವದ ಬದಲಾವಣೆಗಳಾಗಿವೆ. ಅದರಲ್ಲೂ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಒಂದೊಂದು ಎಸೆತ ಮತ್ತು ರನ್‌ ಕೂಡ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಈ ಮಾದರಿಯಲ್ಲಿ ಪಡೆದ ಮತ್ತು ಕೈಚೆಲ್ಲಿದ ಕ್ಯಾಚ್‌ಗಳು ಮಹತ್ವದ್ದಾಗುತ್ತವೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟೂರ್ನಿಯಲ್ಲಿ ಆಮೋಘವಾದ, ಸಾಹಸಮಯವಾದ ಕ್ಯಾಚ್‌ಗಳನ್ನು ಕ್ರಿಕೆಟ್‌ ಪ್ರೇಮಿಗಳು ಕಣ್ತುಂಬಿಕೊಂಡಿದ್ದಾರೆ. ಅದರಲ್ಲೂ ಕೆಲವು ಕ್ಯಾಚ್‌ಗಳು ಬಹುಕಾಲ ಮನದಲ್ಲಿ ಉಳಿಯುವಂತಹದ್ದಾಗಿವೆ. ಅದರಲ್ಲಿ ಆಯ್ದ ಐದು ಕ್ಯಾಚ್‌ಗಳು ಇಲ್ಲಿವೆ.

*

ADVERTISEMENT

ಟ್ರೆಂಟ್‌ ಬೌಲ್ಟ್‌
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 21ರಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಿಕ್ಸರ್‌ಗೆ ಎತ್ತಿದ ಚೆಂಡನ್ನು ಬೌಂಡರಿಗೆರೆ ಬಳಿ ಹಿಮ್ಮುಖವಾಗಿ ಓಡಿ ಕ್ಯಾಚ್ ಪಡೆದ ಟ್ರೆಂಟ್ ಬೌಲ್ಟ್‌ ಜಾರಿ ಬಿದ್ದರು. ತಮ್ಮ ಎದೆ, ಹೊಟ್ಟೆಯ ಮೇಲೆ ಜಾರುತ್ತ ಗೆರೆಯಿಂದ ಕೆಲವೇ ಅಂಗುಲಗಳ ಅಂತರದಲ್ಲಿ ದೇಹವನ್ನು ನಿಯಂತ್ರಿದರು. ಅಂತಹ ಅದ್ಭುತ ಕ್ಯಾಚ್ ಪಡೆದದ್ದು ಸ್ವತಃ ಟ್ರೆಂಟ್ ಅವರಿಗೇ ಅಚ್ಚರಿ ತಂದಿತ್ತು. ಅವರ ಮುಖಭಾವ ಅದನ್ನು ಸ್ಪಷ್ಟವಾಗಿ ಹೇಳುತ್ತಿತ್ತು.

*

ಎಬಿ ಡಿವಿಲಿಯರ್ಸ್
ಮೇ 17ರಂದು ಬೆಂಗಳೂರಿನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರಿನ ಪಂದ್ಯದಲ್ಲಿ. ಆರ್‌ಸಿಬಿಯ ‘ಸೂಪರ್‌ ಮ್ಯಾನ್’ ಎಬಿ ಡಿವಿಲಿಯರ್ಸ್ ಮಿಡ್‌ವಿಕೆಟ್‌ ಬೌಂಡರಿ ಗೆರೆಯ ಬಳಿ ಪಡೆದ ಕ್ಯಾಚ್‌ಗೆ ನೋಡುಗರು ಒಂದರೆಕ್ಷಣ ಸ್ಥಬ್ಧರಾಗಿದ್ದರು. ನಂತರ ಆರ್‌ಸಿಬಿ ಅಭಿಮಾನಿಗಳ ಹರ್ಷ ಮುಗಿಲುಮುಟ್ಟಿತ್ತು. ಸಿಕ್ಸರ್‌ ನಿರೀಕ್ಷೆಯಲ್ಲಿದ್ದ ಸನ್‌ರೈಸರ್ಸ್‌ ತಂಡದ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಆಘಾತಕ್ಕೊಳಗಾಗಿ ಡಗ್‌ಔಟ್‌ಗೆ ಮರಳಿದರು.

*
ವಿರಾಟ್ ಕೊಹ್ಲಿ
ಏಪ್ರಿಲ್ 29ರಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರು ಕೆಕೆಆರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಲಾಫ್ಟ್‌ ಮಾಡಿದ ಚೆಂಡನ್ನು ಲಾಂಗ್‌ ಆನ್‌ನಿಂದ ಓಡಿ ಬಂದು ಡೈವ್ ಮಾಡಿ ಪಡೆದಿದ್ದ ಕ್ಯಾಚ್‌ ಪ್ರೇಕ್ಷಕರ ಮನದಲ್ಲಿ ಅಚ್ಚಾಗಿತ್ತು. ಮೇಲ್ನೋಟಕ್ಕೆ ಅಸಾಧ್ಯವೆನಿಸಿದ್ದ ಈ ಸಂದರ್ಭವನ್ನು ಅವಿಸ್ಮರಣೀಯವನ್ನಾಗಿಸಿದ್ದ ವಿರಾಟ್ ಮಿಂಚಿದ್ದರು.

*

ಕಾಲಿನ್ ಡಿ ಗ್ರ್ಯಾಂಡ್‌ಹೋಮ್
ಮೇ 17ರಂದು ಬೆಂಗಳೂರಿನಲ್ಲಿ ಸನ್‌ರೈಸರ್ಸ್‌ ತಂಡದ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಅವರು ಹೊಡೆದ ಚೆಂಡನ್ನು ಫೈನ್‌ ಲೆಗ್‌ ಬೌಂಡರಿಗೆರೆಯ ಅಂಚಿನಲ್ಲಿ ಕ್ಯಾಚ್ ಪಡೆದ  ಕಾಲಿನ್ ಡಿ ಗ್ರ್ಯಾಂಡ್ ಹೋಮ್ ಅವರು ಆರ್‌ಸಿಬಿ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಪಂದ್ಯದ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ  ಆ ಕ್ಯಾಚ್‌ ಅವರು ಕೈಚೆಲ್ಲಿದ್ದರೆ, ಆರ್‌ಸಿಬಿ ಕೈಯಿಂದ ಗೆಲುವು ಕೈತಪ್ಪುವ ಸಂಭವ ಇತ್ತು.

*

ಕರುಣ್ ನಾಯರ್
ಏ.21ರಂದು ಕೋಲ್ಕತ್ತ ಈಡನ್‌ ಗಾರ್ಡನ್‌ನಲ್ಲಿ ಕೆಕೆಆರ್ ತಂಡದ ಆಟಗಾರ ಸುನಿಲ್ ನಾರಾಯಣ್  ಹೊಡೆದಿದ್ದ ಚೆಂಡನ್ನು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಫೀಲ್ಡರ್ ಕರುಣ್ ನಾಯರ್ ಜಿಂಕೆಯಂತೆ ಜಿಗಿದು ಹಿಡಿದರು. ಆ ಕ್ಯಾಚ್‌ ದಕ್ಷಿಣ ಆಫ್ರಿಕಾದ ಫೀಲ್ಡರ್‌ ಜಾಂಟಿ ರೋಡ್ಸ್‌ ಅವರ ಶೈಲಿಯನ್ನು ನೆನಪಿಗೆ ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.