ADVERTISEMENT

ನೀಟ್ ಪರೀಕ್ಷೆ ಅಕಾಲಿಕ ಗುಮ್ಮ!

ವೆಂಕಟೇಶ್ ಜಿ.ಎಚ್
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆಯಲು ಅಗತ್ಯವಾದ `ನೀಟ್~ ಪ್ರವೇಶ ಪರೀಕ್ಷೆಯನ್ನು ರಾಜ್ಯ ಸರ್ಕಾರ ತರಾತುರಿಯಲ್ಲಿ ಈ ವರ್ಷದಿಂದಲೇ ಜಾರಿಗೊಳಿಸಲು ಹೊರಟಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ವಿದ್ಯಾರ್ಥಿಗಳು ಪೂರ್ವಸಿದ್ಧತೆ ಮಾಡಿಕೊಳ್ಳಲು ಅವಕಾಶವನ್ನೇ ನೀಡದ ಸರ್ಕಾರದ ಕ್ರಮಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 
__________________________________________________

`ದಸರಾ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಓಟಗಾರರನ್ನು ಕರೆದೊಯ್ದು ಒಲಿಂಪಿಕ್ ಕೂಟದ ಟ್ರ್ಯಾಕ್‌ನಲ್ಲಿ ಓಡಲು ನಿಲ್ಲಿಸಿದಂತಾಗಿದೆ ನಮ್ಮ ಮಕ್ಕಳ ಪರಿಸ್ಥಿತಿ~.
ದ್ವಿತೀಯ ಪಿಯುಸಿ ಮುಗಿಸುವ ವಿದ್ಯಾರ್ಥಿಗಳು ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಸೀಟು ಪಡೆಯಲು ರಾಷ್ಟ್ರೀಯ ಮಟ್ಟದ ಪ್ರವೇಶ ಅರ್ಹತಾ ಪರೀಕ್ಷೆ (ಎನ್‌ಇಇಟಿ-ನ್ಯಾಶನಲ್ ಎಲಿಜಿಬಿಲಿಟಿ ಎಂಟ್ರೆನ್ಸ್ ಟೆಸ್ಟ್) ಬರೆಯುವುದನ್ನು ಪ್ರಸಕ್ತ ವರ್ಷದಿಂದ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮದ ಬಗ್ಗೆ ಹುಬ್ಬಳ್ಳಿಯ ವೈದ್ಯ ಡಾ. ಹರೀಶ್ ಕನಕಪುರ ವ್ಯಂಗ್ಯ ಮಿಶ್ರಿತವಾಗಿ ಮೇಲಿನಂತೆ ಪ್ರತಿಕ್ರಿಯಿಸುತ್ತಾರೆ.

ADVERTISEMENT

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಅಖಿಲ ಭಾರತ ಮಟ್ಟದಲ್ಲಿ ನಡೆಸುವ ನೀಟ್ ಪರೀಕ್ಷೆ ಬಗ್ಗೆ ಡಾ. ಹರೀಶ್ ಮಾತ್ರವಲ್ಲ, ಈ ಬಾರಿ ದ್ವಿತೀಯ ಪಿಯುಸಿ ಓದುತ್ತಾ ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರಿ ಕೋಟಾದಡಿ ಸೀಟು ಪಡೆಯಲು ಸಿದ್ಧತೆ ನಡೆಸುತ್ತಿರುವ ಸುಮಾರು 50 ಸಾವಿರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಲ್ಲಿ ಇದೇ ಆತಂಕ ಮನೆಮಾಡಿದೆ.

ಭಾರತೀಯ ವೈದ್ಯಕೀಯ ಮಂಡಳಿ (ಐಎಂಸಿ) ಉಸ್ತುವಾರಿಯಲ್ಲಿ ನೀಟ್ ನಡೆಯುವುದರಿಂದ ಸಿಬಿಎಸ್‌ಇ ಪಠ್ಯಕ್ರಮದ ಅನ್ವಯವೇ ಪ್ರಶ್ನೆಪತ್ರಿಕೆ ಸಿದ್ಧಗೊಳಿಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ 8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಸಿಬಿಎಸ್‌ಇ ಪಠ್ಯಕ್ರಮ ಓದಿರುವ ವಿದ್ಯಾರ್ಥಿಗಳಿಗೆ ಇದು ಸುಲಭವಾಗಲಿದೆ.

ಆದರೆ ರಾಜ್ಯದಲ್ಲಿ ಶೇ 99ರಷ್ಟು ವಿದ್ಯಾರ್ಥಿಗಳು ಪಿಯು ಮಂಡಳಿ ಸಿದ್ಧಗೊಳಿಸಿರುವ ಪಠ್ಯಕ್ರಮ ಓದುತ್ತಿದ್ದಾರೆ. ಅವರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಅಸಾಧ್ಯವಾಗುತ್ತದೆ ಎಂಬುದು ಆತಂಕದ ಹಿಂದಿನ ವಾಸ್ತವ.

`ಇದು ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಈ ವರ್ಷ ನೀಟ್ ಪರೀಕ್ಷೆಗೆ ಒಪ್ಪಿಗೆ ನೀಡುವ ಮೂಲಕ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ~ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ. ಅದೇ ಕಾರಣಕ್ಕೆ ಡಾ. ಹರೀಶ್ ಕನಕಪುರ ರಾಜ್ಯದ ವಿದ್ಯಾರ್ಥಿಗಳನ್ನು ದಸರಾ ಕೂಟದ ಕ್ರೀಡಾಪಟುಗಳಿಗೆ ಹೋಲಿಸಿ ನೀಟ್ ಪರೀಕ್ಷೆಯನ್ನು ಒಲಿಂಪಿಕ್ ಕೂಟಕ್ಕೆ ಹೋಲಿಸಿದ್ದು.

ಮುಂದಿನ ವರ್ಷ ಮಾಡಲಿ
ನೀಟ್ ಪರೀಕ್ಷೆಯನ್ನು ರಾಜ್ಯದಲ್ಲಿ  ಮುಂದಿನ ವರ್ಷದಿಂದ ಜಾರಿಗೊಳಿಸಲಿ, ಈ ವರ್ಷ ಸಿ.ಇ.ಟಿ.ಯೇ ಇರಲಿ ಎಂಬುದು ಬಹು ತೇಕ ಪೋಷಕರ ಒತ್ತಾಯ. ಪ್ರಸಕ್ತ ವರ್ಷ ಪ್ರಥಮ ಪಿಯುಸಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್‌ಇ ಪಠ್ಯಕ್ರಮವನ್ನು ಪರಿಚಯಿಸಲಾಗಿದೆ. ಬೇಕಿದ್ದರೆ 2014ನೇ ಸಾಲಿನಿಂದ ನೀಟ್ ಪರೀಕ್ಷೆ ಪರಿಚಯಿಸಲಿ ಎಂಬುದು ಅವರ ವಾದ.

ಕಳೆದ ಜೂನ್‌ನಲ್ಲಿ `ಈ ವರ್ಷ ರಾಜ್ಯದಲ್ಲಿ ನೀಟ್ ಪರೀಕ್ಷೆ ಸುತಾರಾಂ ಜಾರಿ ಮಾಡುವುದಿಲ್ಲ~ ಎಂದು ಆಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿಕೆ ನೀಡಿದ್ದರು. ಆದರೆ ಅಕ್ಟೋಬರ್ 5ರಂದು ಸಚಿವ ಎ.ರಾಮದಾಸ್ ಅವರ ನೇತೃತ್ವದಲ್ಲಿ ನಡೆದ ವೈದ್ಯಕೀಯ ಶಿಕ್ಷಣ ಇಲಾಖೆ ಸಭೆಯಲ್ಲಿ ಈ ವರ್ಷದಿಂದಲೇ ರಾಜ್ಯದಲ್ಲಿ ನೀಟ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಇದು ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ವಿಶೇಷವೆಂದರೆ ಅಕ್ಟೋಬರ್‌ನಲ್ಲೇ ನಿರ್ಧಾರ ಕೈಗೊಂಡಿದ್ದರೂ ಇಲ್ಲಿಯವರೆಗೂ ನೀಟ್ ಜಾರಿಯ ಬಗ್ಗೆ ಅಧಿಕೃತವಾಗಿ ಶಿಕ್ಷಣ ಇಲಾಖೆಯಿಂದ ಯಾವುದೇ ಕಾಲೇಜಿಗೆ ಸುತ್ತೋಲೆ ಕಳುಹಿಸಿಲ್ಲ.

ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಮಧ್ಯ ಪ್ರದೇಶ ರಾಜ್ಯಗಳು `ನಮ್ಮ ವಿದ್ಯಾರ್ಥಿಗಳು ಇನ್ನೂ ನೀಟ್ ಪರೀಕ್ಷೆಗೆ ಸಿದ್ಧರಾಗಿಲ್ಲ~ ಎಂಬ ಕಾರಣ ನೀಡಿ ಆಯಾಯ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿವೆ. ಆಂಧ್ರ ಪ್ರದೇಶ ಸರ್ಕಾರ ಪಠ್ಯಕ್ರಮದ ತಾರತಮ್ಯದ ಜೊತೆಗೆ ತೆಲುಗು ಭಾಷೆಯಲ್ಲಿ ನೀಟ್ ಪ್ರಶ್ನೆಪತ್ರಿಕೆ ಇರುವುದಿಲ್ಲ ಎಂಬ ವಿಚಾರಕ್ಕೂ ವಿರೋಧ ವ್ಯಕ್ತಪಡಿಸಿದೆ

. ಮಹಾರಾಷ್ಟ್ರದಲ್ಲಿ ಅಲ್ಲಿನ ವಿದ್ಯಾರ್ಥಿಗಳ ಪೋಷಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ರಾಜ್ಯದಲ್ಲಿಯೂ ಈ ವರ್ಷ ಸರ್ಕಾರ ಅದೇ ಕೆಲಸ ಮಾಡಬಹುದಿತ್ತು. ವೈದ್ಯಕೀಯ ಶಿಕ್ಷಣ ಸಚಿವರನ್ನು ಪೋಷಕರು ಭೇಟಿ ಮಾಡಿ ಸಮಸ್ಯೆಯ ಗಂಭೀರತೆ ಮನವರಿಕೆ ಮಾಡಿಕೊಟ್ಟರೂ ಉಪಯೋಗಆಗಲಿಲ್ಲ~ ಎಂದು ಧಾರವಾಡದ ಉದ್ಯಮಿ ವಿಶ್ವೇಶ್ವರ ಕುಲಕರ್ಣಿ ಬೇಸರ ವ್ಯಕ್ತಪಡಿಸುತ್ತಾರೆ.

ರಾಜ್ಯದಲ್ಲಿ ಈ ವರ್ಷ ನೀಟ್ ಪರೀಕ್ಷೆ ಜಾರಿ ಬೇಡ ಎಂದು ಡಾ. ಹರೀಶ್ ಕನಕಪುರ, ಡಾ. ಸುಭಾಷ್ ಮಹದೇವರಾವ್ ಮೊಹಿತೆ ನೇತೃತ್ವದಲ್ಲಿ ಹುಬ್ಬಳ್ಳಿಯ 23 ಪೋಷಕರು ನವೆಂಬರ್ 18ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದಾರೆ. ಇದೀಗ ನೀಟ್‌ನ ಚೆಂಡು ಸುಪ್ರೀಂಕೋರ್ಟ್ ಅಂಗಳದಲ್ಲಿದೆ.

ಪಠ್ಯಕ್ರಮದಲ್ಲಿ ವ್ಯತ್ಯಾಸ
`ಸಿಬಿಎಸ್‌ಇ ಪಠ್ಯಕ್ರಮ ಸಾಮಾನ್ಯವಾಗಿ ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ರೂಪುಗೊಂಡಿರುತ್ತದೆ. ರಾಜ್ಯದ ಪಠ್ಯಕ್ರಮಕ್ಕಿಂತ ಶೇ 30ರಷ್ಟು ಹೆಚ್ಚಿನ ವಿಷಯ ಜ್ಞಾನ ಒಳಗೊಂಡಿರುತ್ತದೆ. ಸಿಬಿಎಸ್‌ಇ ಪಠ್ಯಕ್ರಮ ನಮ್ಮ ಮಕ್ಕಳ ಪಾಲಿಗೆ ಕಬ್ಬಿಣದ ಕಡಲೆಯೇನೂ ಅಲ್ಲ.

ಬದಲಿಗೆ ವರ್ಷದ ಹಿಂದೆಯೇ ರಾಜ್ಯದಲ್ಲಿ ನೀಟ್ ಜಾರಿಯ ಬಗ್ಗೆ ಸರ್ಕಾರ ಲಿಖಿತ ಸೂಚನೆ ನೀಡಿದ್ದರೆ ಏಪ್ರಿಲ್ ವೇಳೆಗೆ ಮಕ್ಕಳನ್ನು ಸಿದ್ಧಗೊಳಿಸುತ್ತಿದ್ದೆವು. ಸಿಬಿಎಸ್‌ಇ ಪಠ್ಯಕ್ರಮ ಕಲಿಸಲು ಶಿಕ್ಷಕರಿಗೆ ವಿಶೇಷ ತರಬೇತಿ ಅಥವಾ ಅರ್ಹತೆಯ ಅಗತ್ಯವೇನೂ ಇಲ್ಲ. ಒಂದಷ್ಟು ಆಳ ಅಧ್ಯಯನ ನಡೆಸಿದರೆ ಸಾಕು~ ಎನ್ನುತ್ತಾರೆ ಹುಬ್ಬಳ್ಳಿಯ ಚೇತನಾ ಕಾಲೇಜಿನ ಅಧ್ಯಕ್ಷ ಗುರುಶಾಂತ ವೀರಪ್ಪ ವಳಸಂಗ.

`ನಿಯಮಾವಳಿ ಪ್ರಕಾರ ಶೇಕಡಾ 85ರಷ್ಟು ವೈದ್ಯಕೀಯ ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಬೇಕಿದೆ. ಆದರೆ ರಾಜ್ಯದಲ್ಲಿ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಇತರ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 1ರಷ್ಟು ಮಾತ್ರ ಇದೆ~ ಎಂದೂ ವಳಸಂಗ ಹೇಳುತ್ತಾರೆ.

ಸರ್ಕಾರ ನಮ್ಮ ನೆರವಿಗೆ ಬರಲಿ
ಸಿಬಿಎಸ್‌ಇ ಪಠ್ಯಕ್ರಮದೊಂದಿಗೆ ಸ್ಪರ್ಧಿಸಬೇಕಿರುವುದರಿಂದ ನಮಗೆ ವೈದ್ಯಕೀಯ ಸೀಟು ದೊರೆಯುವ ಖಾತರಿ ಇಲ್ಲ. ಇದರಿಂದ ಅನಿವಾರ್ಯವಾಗಿ ಎಂಜಿನಿಯರಿಂಗ್ ಸೀಟುಗಳಿಗಾಗಿ ಸಿಇಟಿ ಪರೀಕ್ಷೆಗೆ ಪ್ರಯತ್ನ ಮಾಡಬೇಕಾದ ಒತ್ತಡವೂ ಎದುರಾಗಿದೆ. ಈ ವರ್ಷ ಸರ್ಕಾರ ನಮ್ಮ ನೆರವಿಗೆ ಬರಲಿ.
ಸೌಮ್ಯಾ ಗ್ರಾಮಪುರೋಹಿತ್, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ

ಈ ಬಾರಿ ಬೇಡವೇ ಬೇಡ
ನಾಲ್ಕು ತಿಂಗಳಲ್ಲಿ ಪರೀಕ್ಷೆ ಬರಲಿದೆ. ಅಷ್ಟರೊಳಗೆ  ಸಿಬಿಎಸ್‌ಇ ಪಠ್ಯಕ್ರಮ ಓದುವುದು ಅಸಾಧ್ಯ. ಹಾಗಾಗಿ ಈ ವರ್ಷ ಸಿಇಟಿ ಮೂಲಕವೇ ಪ್ರವೇಶ ಕೊಡಲಿ. ನೀಟ್ ಬೇಡವೇ ಬೇಡ.
    ಶಶಾಂಕ್ ಕನಕಪುರ, ದ್ವಿತೀಯ ಪಿಯುಸಿ ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.