ADVERTISEMENT

ಪದವಿ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ

ಎ.ಎಂ.ಸುರೇಶ
Published 6 ಫೆಬ್ರುವರಿ 2011, 19:35 IST
Last Updated 6 ಫೆಬ್ರುವರಿ 2011, 19:35 IST
ಪದವಿ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ
ಪದವಿ ವ್ಯಾಸಂಗಕ್ಕೆ ವಿದ್ಯಾರ್ಥಿ ವೇತನ   

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೊತ್ಸಾಹಿಸುವ ದೃಷ್ಟಿಯಿಂದ ದ್ವಿತೀಯ ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ‘ರಾಷ್ಟ್ರಮಟ್ಟದ ವಿದ್ಯಾರ್ಥಿ ವೇತನ’ ನೀಡುವ ಯೋಜನೆ ಜಾರಿಯಲ್ಲಿದ್ದು, ಇದರಿಂದ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಬಹಳಷ್ಟು ಅನುಕೂಲವಾಗಿದೆ.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆ  ಈ ವಿನೂತನ ಯೋಜನೆಯನ್ನು ರೂಪಿಸಿದ್ದು, ಪ್ರತಿ ವರ್ಷ ರಾಜ್ಯದ 4237 ವಿದ್ಯಾರ್ಥಿಗಳು ಈ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ.ದ್ವಿತೀಯ ಪಿಯುಸಿಯಲ್ಲಿ ಶೇ 80ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಪದವಿ/ಉನ್ನತ ಶಿಕ್ಷಣ ವ್ಯಾಸಂಗ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಷರತ್ತಿಗೆ ಒಳಪಟ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಬಿ.ಎ., ಬಿ.ಕಾಂ., ಬಿಎಸ್ಸಿ., ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಪಶುವೈದ್ಯಕೀಯ, ಕೃಷಿ ಸೇರಿದಂತೆ ಯಾವುದೇ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಐಟಿಐ, ಡಿಪ್ಲೊಮಾ, ಡಿಇಡಿ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರಲ್ಲ. ಕನಿಷ್ಠ ಮೂರು ವರ್ಷದ ಪದವಿ ಕೋರ್ಸ್‌ನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ಇದರ ಪ್ರಯೋಜನ ಸಿಗಲಿದೆ.

2008ರಿಂದ ಜಾರಿಗೆ ಬಂದಿರುವ ಈ ಯೋಜನೆ ಇನ್ನೂ ಜನಪ್ರಿಯವಾಗಿಲ್ಲ ಎಂಬುದಕ್ಕೆ ಕಳೆದ ಎರಡು ವರ್ಷಗಳಿಂದ ಕರ್ನಾಟಕದ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಇದರ ಲಾಭ ಪಡೆದುಕೊಳ್ಳದೆ ಇರುವುದೇ ಸಾಕ್ಷಿ. 2008ರಲ್ಲಿ 3794 ಹಾಗೂ 2009ರಲ್ಲಿ 3564 ಮಂದಿ ವಿದ್ಯಾರ್ಥಿಗಳು ಮಾತ್ರ ಇದರ ಸದುಪಯೋಗ ಪಡೆದಿದ್ದಾರೆ.

ಫೆ.10ರವರೆಗೆ ಅವಕಾಶ:2010ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಈಗ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಫೆ.10ರವರೆಗೂ ಸಂಬಂಧಪಟ್ಟ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಒಂದು ವೇಳೆ ನಿಗದಿತ ದಿನಾಂಕದ ಒಳಗೆ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಲು ಆಗದೆ ಇದ್ದರೆ ಫೆ.14ರವರೆಗೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪದವಿಪೂರ್ವ ಶಿಕ್ಷಣ ಇಲಾಖೆಗೆ ಹೋಗಿ ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.ಆದರೆ ಇದಕ್ಕೂ ಮುನ್ನ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಂಬಂಧಪಟ್ಟ ಬ್ಯಾಂಕಿನ ಮ್ಯಾನೇಜರ್ ಅವರಿಂದ ದೃಢೀಕರಿಸಿರಬೇಕು.

ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.ವೆಬ್‌ಸೈಟ್‌ನಲ್ಲಿ ಭರ್ತಿ ಮಾಡುವ ವಿಧಾನ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನೂ ನೀಡಲಾಗಿದೆ.ಸೂಚನೆಗಳನ್ನು ಸರಿಯಾಗಿ ಓದಿ, ನಂತರ ಭರ್ತಿ ಮಾಡಿದರೆ ತಪ್ಪುಗಳು ಆಗುವ ಸಾಧ್ಯತೆಗಳು ಇರುವುದಿಲ್ಲ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿ ಎಸ್.ವಿ.ಮೋಹನ್‌ಕುಮಾರ್.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲಿ ವರ್ಷಕ್ಕೆ 10 ಸಾವಿರ ರೂಪಾಯಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 20 ಸಾವಿರ ರೂಪಾಯಿ ನೀಡಲಾಗುತ್ತದೆ. ಪ್ರತಿವರ್ಷ ವಿದ್ಯಾರ್ಥಿ ವೇತನವನ್ನು ನವೀಕರಿಸುವ ಪದ್ಧತಿ ಇದ್ದು, ಆಯಾ ವರ್ಷ ಶೇ 60ರಷ್ಟು ಅಂಕಗಳನ್ನು ಪಡೆಯುವುದಲ್ಲದೆ, ಶೇ 75ರಷ್ಟು ಹಾಜರಾತಿಯನ್ನು ಹೊಂದಿರಬೇಕು. ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನವನ್ನು ನವೀಕರಿಸಲಾಗುತ್ತದೆ.

ವಿದ್ಯಾರ್ಥಿ ವೇತನವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಪೋಷಕರ ಇಲ್ಲವೆ ತಂದೆ- ತಾಯಿ ಖಾತೆಗೆ ಜಮಾ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ವಿದ್ಯಾರ್ಥಿಯು ಎಸ್‌ಬಿಐ, ಎಸ್‌ಬಿಎಂ, ಎಸ್‌ಬಿಎಚ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರಬೇಕು.

2010-11ನೇ ಶೈಕ್ಷಣಿಕ ಸಾಲಿನಲ್ಲಿ ದಾಖಲಾಗಿರುವ ಕಾಲೇಜಿನ ಪ್ರಾಂಶುಪಾಲರಿಂದ ಸಹಿ ಮತ್ತು ಮೊಹರಿನ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಬೇಕು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಿಂದ ಸಹಿ ಮಾಡಿಸಬಾರದು.ಪರಿಶಿಷ್ಟ ಜಾತಿ. ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಅಂಗವಿಕಲರು ಸಂಬಂಧಿಸಿದ ಪ್ರಮಾಣ ಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುತ್ತದೆ.

ವಿದ್ಯಾರ್ಥಿಯ ಪೋಷಕರ ವಾರ್ಷಿಕ ವರಮಾನ 4.50 ಲಕ್ಷ (ಕೇಂದ್ರ ಸರ್ಕಾರದ ನಿಯಮದಂತೆ) ಮೀರಬಾರದು. ಆದಾಯ ಪ್ರಮಾಣ ಪತ್ರ ಸಲ್ಲಿಸುವುದು ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿದೆ. ಆದಾಯ ಪ್ರಮಾಣ ಪತ್ರ ಇಲ್ಲದೆ ಇದ್ದರೆ ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಕಲೆ, ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿರುವವರು ಅರ್ಜಿ ಸಲ್ಲಿಸಬಹುದು. ಆದರೆ ಕಲಾ ವಿಭಾಗದಲ್ಲಿ ಸಾಕಷ್ಟು ಅರ್ಜಿಗಳು ಬರುತ್ತಿಲ್ಲ.

ಇದುವರೆಗೆ ಒಟ್ಟು 3300 ಅರ್ಜಿಗಳು ಬಂದಿವೆ. ಇನ್ನಷ್ಟು ಅರ್ಜಿಗಳು ಬರಲಿ ಎಂಬ ಕಾರಣಕ್ಕಾಗಿಯೇ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆ.10ರವರೆಗೆ ವಿಸ್ತರಿಸಲಾಗಿದೆ.ಪ್ರತಿಯೊಂದು ಸಂಯೋಜನೆ, ಪ್ರವರ್ಗದ ವಿದ್ಯಾರ್ಥಿಗಳು ಒಟ್ಟು 600 ಅಂಕಗಳಿಗೆ ಗಳಿಸಿರಬೇಕಾದ ಕನಿಷ್ಠ ಅಂಕಗಳ ಮಾನದಂಡವನ್ನು ಈ ಬಾರಿ ನಿಗದಿಪಡಿಸಲಾಗಿದೆ.

ವಿದ್ಯಾರ್ಥಿಗಳಿಗೆ ಸೂಚನೆಗಳು....
* ಬ್ಯಾಂಕ್ ಖಾತೆಯು 11ರಿಂದ 16 ಸಂಖ್ಯೆಗಳನ್ನು ಹೊಂದಿರಬೇಕು.
*ಬ್ಯಾಂಕ್ ಹೆಸರು, ಶಾಖೆ, ಶಾಖೆಯ ಕೋಡ್, ಐಎಫ್‌ಎಸ್‌ಸಿ ಕೋಡ್ (11 ಡಿಜಿಟ್) ಇತ್ಯಾದಿಗಳನ್ನು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ದೃಢಪಡಿಸಿಕೊಂಡು ತುಂಬಬೇಕು. ಅಂಕಿ ಸಂಖ್ಯೆಗಳು ವ್ಯಾತ್ಯಾಸವಾದರೆ ವಿದ್ಯಾರ್ಥಿ ವೇತನವನ್ನು ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
*ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿದ ನಂತರ ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳ ಮೂಲಕ ನಿಗದಿತ ಸ್ಥಳದಲ್ಲಿ ಸಹಿ, ಮೊಹರು ಮಾಡಿಸಬೇಕು.
*ಬೇರೆ ಯಾವುದೇ ವಿದ್ಯಾರ್ಥಿ ವೇತನ ಪಡೆಯುತ್ತಿಲ್ಲ ಎಂದು ಪ್ರಮಾಣ ಪತ್ರದಲ್ಲಿ ಸಹಿ ಮಾಡಬೇಕು.
*ಅರ್ಜಿಯಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ವಿವರವಾಗಿ ನೀಡಬೇಕು.
*ದಾಖಲೆಗಳು ಅಪೂರ್ಣವಾಗಿದ್ದರೆ ಅರ್ಜಿಯನ್ನು ತಿರಸ್ಕೃರಿಸಲಾಗುತ್ತದೆ.
*ಸೂಚನೆಗಳನ್ನು ಓದಿ ಅರ್ಥ ಮಾಡಿಕೊಂಡ ನಂತರ ಅರ್ಜಿಯನ್ನು ಭರ್ತಿ ಮಾಡುವುದು.
*ಭಾವಚಿತ್ರ ಅಂಟಿಸುವುದರ ಜತೆಗೆ ಎಲ್ಲ ಕಾಲಂಗಳನ್ನು ಸರಿಯಾಗಿ ಭರ್ತಿ ಮಾಡಿ.

ಹೆಚ್ಚಿನ ಮಾಹಿತಿಗೆ www.puc.kar.nic.in
ಕಚೇರಿ ವಿಳಾಸ: ಲೆಕ್ಕಪತ್ರಾಧಿಕಾರಿ,
ಪದವಿಪೂರ್ವ ಶಿಕ್ಷಣ ಇಲಾಖೆ
ಸಂಪಿಗೆ ರಸ್ತೆ, 18ನೇ ಅಡ್ಡರಸ್ತೆ,
ಮಲ್ಲೇಶ್ವರಂ, ಬೆಂಗಳೂರು-12
ದೂರವಾಣಿ:080-23361856/857/858

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.