ADVERTISEMENT

ಪಿಯುಸಿಗೆ ಆನ್‌ಲೈನ್ ಪದ್ಧತಿ

ಎಂ.ನವೀನ್ ಕುಮಾರ್
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಪ್ರತಿಭೆ ಮತ್ತು ಮೀಸಲಾತಿಗೆ ಅನುಗುಣವಾಗಿ ವಿದ್ಯಾರ್ಥಿಗೆ ಪಿಯುಸಿಗೆ ಪ್ರವೇಶ ನೀಡಲು ನಿರ್ಧರಿಸಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ 2012-13ನೇ ಸಾಲಿನ ಪಿಯುಸಿ ಪ್ರವೇಶವನ್ನು ಆನ್‌ಲೈನ್‌ಗೊಳಿಸಿದೆ.

ವಿದ್ಯಾರ್ಥಿ ತಾನು ಗಳಿಸಿದ ಅಂಕಗಳಿಗೆ ಅನುಗುಣವಾಗಿ ಮತ್ತು ಮೀಸಲಾತಿ ಅನ್ವಯ ಬಯಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಈ ಪದ್ಧತಿ ಸಹಾಯಕವಾಗಲಿದೆ. ಹದಿಮೂರು ರಾಜ್ಯಗಳಲ್ಲಿ ಈಗಾಗಲೇ ಆನ್‌ಲೈನ್ ಪದ್ಧತಿ ಯಶಸ್ವಿಯಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿರುವ ಹೊಸ ಪದ್ಧತಿ ಯಶಸ್ವಿಯಾದರೆ ರಾಜ್ಯದ ಐದೂವರೆ ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.

ಎಸ್ಸೆಸ್ಸೆಲ್ಸಿ ಪೂರೈಸಿದ ವಿದ್ಯಾರ್ಥಿ ಪಿಯುಸಿಗೆ ಪ್ರವೇಶ ಪಡೆಯಲು ಹಲವು ಕಾಲೇಜುಗಳಿಂದ ಅರ್ಜಿ ತರಬೇಕಾಗಿತ್ತು. ಪೋಷಕರು - ವಿದ್ಯಾರ್ಥಿಗಳು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಎಡತಾಕಿ ಸುಸ್ತಾಗುತ್ತಿದ್ದರು. ಕೇವಲ ಅರ್ಜಿಗಾಗಿಯೇ ಸಾವಿರಾರು ರೂಪಾಯಿ ಭರಿಸಬೇಕಾಗಿತ್ತು. ಪ್ರವೇಶ ಪದ್ಧತಿಯಲ್ಲಿ ಪಾರದರ್ಶಕತೆ ಇಲ್ಲದೇ ಇದ್ದುದರಿಂದ ಹೀಗಾಗುತ್ತಿತ್ತು.

ADVERTISEMENT

ಅನುದಾನಿತ, ಖಾಸಗಿ ಕಾಲೇಜು ಆಡಳಿತ ಮಂಡಳಿಯವರು ತಮಗಿಷ್ಟ ಬಂದವರಿಗೆ ಸೀಟು ಕೊಟ್ಟು ಹಣ ವಸೂಲಿ ಮಾಡುತ್ತಿದ್ದರು. ಶಿಕ್ಷಣ ಇಲಾಖೆಯ ಮೂಲಗಳ ಮಾಹಿತಿ ಪ್ರಕಾರ 50 ಸಾವಿರದಿಂದ ಒಂದು ಲಕ್ಷ ರೂಪಾಯಿವರೆಗೂ ವಂತಿಕೆ ಪಡೆದು ಸೀಟು ನೀಡುತ್ತಿದ್ದಾರೆ. ನಿಯಮದ ಅನುಸಾರವಾಗಿ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿತೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಕಷ್ಟವಾಗಿತ್ತು. ಈ ಎಲ್ಲ ಸಮಸ್ಯೆಗೆ ಪರಿಹಾರವೇ ಆನ್‌ಲೈನ್ ಪ್ರವೇಶ.

ಯಾವ ಕಾಲೇಜಿನಲ್ಲಿ ಎಷ್ಟು ಸೀಟುಗಳಿಗೆ ಎಂಬುದನ್ನು ವಿದ್ಯಾರ್ಥಿ ವೆಬ್‌ಸೈಟ್‌ನಲ್ಲೇ ನೋಡಿ ತನಗಿಷ್ಟ ಬಂದ ಕಾಲೇಜನ್ನು ಆಯ್ದುಕೊಳ್ಳವ ಅವಕಾಶ ಈ ವ್ಯವಸ್ಥೆಯಲ್ಲಿ ಸಿಗಲಿದೆ.
ಎಸ್ಸೆಸ್ಸೆಲ್ಸಿಯ ಕೊನೆಯ ಪರೀಕ್ಷೆಯ ದಿನಾಂಕದಂದೇ ಪಿಯುಸಿ ಪ್ರವೇಶಕ್ಕೆ ಸಂಬಂಧಿಸಿದ ಸಮಗ್ರ ವಿವರಗಳುಳ್ಳ ಕಿರುಹೊತ್ತಿಗೆ ಇಲಾಖೆಯ ವೆಬ್‌ಸೈಟ್ ಮತ್ತು ಕಾಲೇಜುಗಳಲ್ಲಿ ಲಭ್ಯವಾಗಲಿದೆ. ಸಾಮಾನ್ಯ ಪ್ರವೇಶ ಪ್ರಕ್ರಿಯೆ, ಸೀಟ್ ಮ್ಯಾಟ್ರಿಕ್ಸ್, ಶುಲ್ಕದ ವಿವರ, ನಿರ್ದಿಷ್ಟ ಕಾಲೇಜಿನ ವಿಳಾಸ, ಆ ಕಾಲೇಜು ಮಹಿಳಾ- ಪುರುಷರ ಕಾಲೇಜು ಎಂಬ ವಿವರ, ಕಾಲೇಜಿನ ಕೋಡ್, ಕಾಲೇಜಿನ ಬೋಧನಾ ಭಾಷೆ, ಕಾಲೇಜಿನಲ್ಲಿರುವ ಒಟ್ಟು ಸೀಟು, ಆ ಕಾಲೇಜಿನಲ್ಲಿ ಕಳೆದ ವರ್ಷ ಕೊನೆಯ ಸೀಟು ಪಡೆದ ವಿದ್ಯಾರ್ಥಿ ಗಳಿಸಿದ್ದ ಅಂಕ ಕಾಲೇಜಿನಲ್ಲಿರುವ ಮೂಲ ಸೌಕರ್ಯ, ಆ ಕಾಲೇಜಿನ ಐದು ವರ್ಷಗಳ ಪರೀಕ್ಷೆ ಫಲಿತಾಂಶ ಸೇರಿದಂತೆ ಎಲ್ಲ ವಿವರಗಳೂ ಇರಲಿವೆ.

ವಿದ್ಯಾರ್ಥಿ ಒಂದೊಂದು ಕಾಲೇಜಿಗೆ ಒಂದೊಂದು ಅರ್ಜಿ ಹಾಕುವ ಅಗತ್ಯ ಇರುವುದಿಲ್ಲ. ಸರ್ಕಾರಿ ಮತ್ತು ಆಡಳಿತ ಮಂಡಳಿ ಸೀಟಿಗೆ ಪ್ರತ್ಯೇಕ ಅರ್ಜಿ ಹಾಕುವುದೂ ಬೇಡ. ಅರ್ಜಿಯಲ್ಲಿ ವಿದ್ಯಾರ್ಥಿ ಆಡಳಿತ ಮಂಡಳಿ ಕೋಟಾದ ಸೀಟಿನ ಆದ್ಯತೆ ಬಗ್ಗೆ ಹೇಳಿದರೆ ಸಾಕು. ಅದೇ ಅರ್ಜಿಯನ್ನು ಕಾಲೇಜಿಗೆ ಕಳುಹಿಸಲಾಗುತ್ತದೆ. ವಿದ್ಯಾರ್ಥಿ ತನ್ನ ಆಯ್ಕೆಯ ನಲವತ್ತು ಕಾಲೇಜುಗಳನ್ನು ಆಯ್ಕೆಗಾಗಿ ನಮೂದಿಸಬಹುದು. ಕನಿಷ್ಠ ಮೂರು ಕಾಲೇಜನ್ನು ನಮೂದಿಸಲೇ ಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ನಂತರ ಪಿಡಿಎಫ್ ಮಾದರಿಯ ಒಂದು ಪ್ರತಿಯನ್ನು ವಿದ್ಯಾರ್ಥಿಗೆ ಇ ಮೇಲ್ ಮಾಡಲಾಗುತ್ತದೆ. ಅರ್ಜಿ ಶುಲ್ಕವನ್ನು ವಿದ್ಯಾರ್ಥಿ ಆನ್‌ಲೈನ್‌ನಲ್ಲಿ ಪಾವತಿಸಬಹುದು ಅಥವಾ ಬ್ಯಾಂಕ್‌ನಲ್ಲಿ ಶುಲ್ಕ ಕಟ್ಟಿ ಆ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ನಂತರ ಅರ್ಜಿ ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ಇರುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾದ ನಂತರ ಏಳು ದಿನಗಳಲ್ಲಿ ವಿದ್ಯಾರ್ಥಿಗಳ ಮೆರಿಟ್ ಪಟ್ಟಿ ಪ್ರಕಟವಾಗಲಿದೆ. ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಬಯಸುವ ಕಾಲೇಜಿನಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಸೀಟು ಪಡೆಯಲು ಸಾಧ್ಯವಿಲ್ಲ. ಈ ರೀತಿಯಲ್ಲಿ ಸಾಫ್ಟ್‌ವೇರ್ ವಿನ್ಯಾಸಗೊಳಿಸಲಾಗಿದೆ. ಪ್ರವೇಶ ಪಡೆದ ನಂತರ ವಿದ್ಯಾರ್ಥಿ ಆ ವಿವರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ. ಕಾಲೇಜಿನ ಆಡಳಿತ ಮಂಡಳಿ ಸಹ ಈ ವಿವರವನ್ನು ಅಪ್‌ಲೋಡ್ ಮಾಡಲೇಬೇಕು.

ವೃತ್ತಿ ಶಿಕ್ಷಣ ಪ್ರವೇಶ ಪ್ರಕ್ರಿಯೆಯಲ್ಲಿ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಯೊಬ್ಬ ಪ್ರವೇಶ ಪಡೆಯದೆ ಉಳಿದುಕೊಂಡ ಸೀಟನ್ನು ಆಡಳಿತ ಮಂಡಳಿ ಮಾರಿಕೊಳ್ಳಬಹುದು. ಆದರೆ ಈ ಸಮಸ್ಯೆಗೂ ಪಿಯುಸಿ ಆನ್‌ಲೈನ್ ಪರೀಕ್ಷೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಮೊದಲ ಮೆರಿಟ್ ಪಟ್ಟಿ ಪ್ರಕಟಗೊಂಡ ಮೂರು ದಿನದ ನಂತರ ಎರಡನೇ ಪಟ್ಟಿ ಪ್ರಕಟಗೊಳ್ಳಲಿದೆ. ಮೊದಲ ಪಟ್ಟಿಯಲ್ಲಿ ಸೀಟು ಪಡೆದು ಪ್ರವೇಶ ಪಡೆಯದಿದ್ದರೆ ಆ ಸೀಟು ಎರಡನೇ ಪಟ್ಟಿಯಲ್ಲಿ ಪ್ರಕಟವಾಗಲಿದೆ. ಈ ರೀತಿ ಐದು ಪಟ್ಟಿ ಪ್ರಕಟಿಸಲಾಗುತ್ತದೆ. ಐದನೇ ಪಟ್ಟಿಯಲ್ಲಿ ಖಾಲಿ ಇರುವ ಎಲ್ಲ ಸೀಟು- ಕಾಲೇಜಿನ ವಿವರ ಬಹಿರಂಗಗೊಳ್ಳಲಿದೆ.

ರಾಜ್ಯದಲ್ಲಿ ಒಟ್ಟು 1,202 ಸರ್ಕಾರಿ, 837 ಅನುದಾನಿತ ಮತ್ತು 1,800 ಅನುದಾನ ರಹಿತ ಪಿಯುಸಿ ಕಾಲೇಜುಗಳಿವೆ. ಪ್ರತಿ ವರ್ಷ ಸುಮಾರು ಐದೂವರೆ ಲಕ್ಷ ವಿದ್ಯಾರ್ಥಿಗಳು ಪ್ರಥಮ ಪಿಯುಸಿಗೆ ಪ್ರವೇಶ ಪಡೆಯುತ್ತಿದ್ದಾರೆ. ಪಾರದರ್ಶಕತೆ ಇಲ್ಲದ ಕಾರಣ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ತಮಗಿಷ್ಟ ಬಂದ ಹಾಗೆ ಸೀಟು ಹಂಚಿಕೆ ಮಾಡುತ್ತಿದ್ದವು. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿತ್ತು. ಆನ್‌ಲೈನ್ ಪದ್ಧತಿ ಈ ಎಲ್ಲ ಸಮಸ್ಯೆಗಳಿಗೆ ಉತ್ತರವಾಗಲಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ. ರಶ್ಮಿ ಅವರು ಹೊಸ ಪದ್ಧತಿಯ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿಯ ಅಭಿಪ್ರಾಯವನ್ನೂ ಆಹ್ವಾನಿಸಲಾಗಿದೆ. ಜ26ರ ವರೆಗೆ ಅಭಿಪ್ರಾಯ ಸಲ್ಲಿಸಬಹುದು.  ಇ ಮೇಲ್ ವಿಳಾಸ commissioner.pue@gmail.com.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.