ADVERTISEMENT

ಪ್ರಶ್ನೆ ಉತ್ತರ

ಡಾ.ಎಚ್ ಎನ್ ಸುಬ್ರಹ್ಮಣ್ಯಂ, ಪ್ರೊ.ಬೇಸ್ ಎಜುಕೇಶನ್ ಸರ್ವೀಸ್ ಸಂಸ್ಥೆ
Published 20 ಅಕ್ಟೋಬರ್ 2013, 19:30 IST
Last Updated 20 ಅಕ್ಟೋಬರ್ 2013, 19:30 IST

ಶಿವಕುಮಾರ್ ಟಿ.ಎನ್., ತುಮಕೂರು
ನಾನು ಈ ವರ್ಷ ಇ.ಸಿ.ಇ.ಯಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ಮುಂದೆ ಏರೊನಾಟಿಕಲ್ ಎಂಜಿನಿಯರಿಂಗ್ ಮಾಡುವ ಆಸೆ ಇದೆ. ಇದನ್ನು ಸಂಜೆ ಕಾಲೇಜಿನಲ್ಲಿ ಮಾಡಲು ಸಾಧ್ಯವೇ? ಇದಕ್ಕೆ ಮಾನ್ಯತೆ ಮತ್ತು ಉತ್ತಮ ಭವಿಷ್ಯ ಇದೆಯೇ? ದೈನಂದಿನ ಮತ್ತು ಸಂಜೆ ಕಾಲೇಜುಗಳಿಗೆ ಇರುವ ವ್ಯತ್ಯಾಸವೇನು?


-– ನೀವು ಸಂಜೆ ಕಾಲೇಜಿನಲ್ಲಿ ಏರೊನಾಟಿಕಲ್ ಎಂಜಿನಿಯರಿಂಗ್ ಮಾಡಲು ಯಾವ ತೊಂದರೆಯೂ ಇಲ್ಲ. ದೈನಂದಿನ ಮತ್ತು ಸಂಜೆ ಕಾಲೇಜುಗಳ ವಿದ್ಯಾಭ್ಯಾಸದಲ್ಲಿ ಯಾವ ವ್ಯತ್ಯಾಸಗಳೂ ಇಲ್ಲ. ಉದ್ಯೋಗದಲ್ಲಿ ಇದ್ದುಕೊಂಡೇ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಂಜೆ ಕಾಲೇಜುಗಳು ಅನುಕೂಲ. ಆದರೆ ಸಂಜೆ ಕಾಲೇಜಿನ ವಿದ್ಯಾಭ್ಯಾಸದಲ್ಲಿ ನಿಮಗೆ ಓದಲು ಸಿಗುವ ಸಮಯ ಪರಿಮಿತವಾದದ್ದು.

ಉದ್ಯೋಗ, ಓದು ಮತ್ತು ಮನೆಯ ಜವಾಬ್ದಾರಿಯನ್ನು ಬುದ್ಧಿವಂತಿಕೆಯಿಂದ ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ. ದೈನಂದಿನ ಕಾಲೇಜು ವಿದ್ಯಾಭ್ಯಾಸದಲ್ಲಿ ನಿಮಗೆ ಅಧ್ಯಯನಕ್ಕೆ ತುಂಬಾ ಸಮಯ ಸಿಗುತ್ತದೆ. ವಿಷಯಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಉದ್ಯೋಗದ ದೃಷ್ಟಿಯಿಂದ ಎರಡೂ ಒಂದೇ. ಎರಡಕ್ಕೂ ಒಂದೇ ಭವಿಷ್ಯ.

ಮಧು ಎಂ. ದೊಡ್ಡಬಳ್ಳಾಪುರ
ನಾನು ಪಿ.ಯು.ನಲ್ಲಿ ಪಾಸಾಗಿಲ್ಲ. ಮುಂದೆ ದೂರಶಿಕ್ಷಣದ ಮೂಲಕ ಬಿ.ಎಸ್ಸಿ. ಮಾಡಬೇಕೆಂದಿದ್ದೇನೆ. ಇದು ಸಾಧ್ಯವೇ ಅಥವಾ ಬೇರೆ ದಾರಿ ಇದೆಯೇ?


–ನೀವು ಪಿ.ಯು.ಸಿ.ಯಲ್ಲಿ ಅನುತ್ತೀರ್ಣರಾಗಿದ್ದರೆ, ಮೊದಲು ಅದನ್ನು  ಮುಗಿಸಿಕೊಳ್ಳುವುದು ಒಳ್ಳೆಯದು. ಮುಂದೆ ದೂರಶಿಕ್ಷಣದ ಮೂಲಕ ಬಿ.ಎಸ್ಸಿ. ಮಾಡಿದರಾಯಿತು ಎಂದು ಈಗ ಪಿ.ಯು. ಮುಗಿಸಿಕೊಳ್ಳದೇ ಇರುವುದು ಪಲಾಯನ ಆಗುತ್ತದೆ. ಈಗ ಪಿ.ಯು. ಮುಗಿಸಿಕೊಳ್ಳದೇ ಇರಲು ಬಲವಾದ ಕಾರಣಗಳೇನು ಎಂದು ಯೋಚಿಸಿ. ಮುಂದೆ ದೂರಶಿಕ್ಷಣದ ಮೂಲಕ ಪದವಿ ಪಡೆಯಲು ನೀವು ಈಗ ಪಿ.ಯು. ಮುಗಿಸುವುದು ಅನಿವಾರ್ಯ.

ಗಿರಿಣಿ ಎ.ಎಂ.
ನಾನು ದ್ವಿತೀಯ ಪಿ.ಯು.ಸಿ. (ವಿಜ್ಞಾನ) ಎರಡು ವಿಷಯಗಳಲ್ಲಿ ಉತ್ತೀರ್ಣನಾಗಿಲ್ಲ. ಈಗ ಮತ್ತೆ ಪಿ.ಯು. ವಿಜ್ಞಾನಕ್ಕೆ ನಾನು ಪ್ರವೇಶ ಪಡೆಯಬಹುದೇ?


–ದ್ವಿತೀಯ ಪಿ.ಯು.ನಲ್ಲಿ ಎರಡು ವಿಷಯಗಳಲ್ಲಿ ನೀವು ಅನುತ್ತೀರ್ಣರಾಗಿದ್ದರೆ, ಮತ್ತೆ ಪಿ.ಯು. ವಿಜ್ಞಾನ ವಿಭಾಗಕ್ಕೆ ಸೇರಲು ಅವಕಾಶವಿಲ್ಲ. ವಾಣಿಜ್ಯ ಅಥವಾ ಕಲಾ ವಿಭಾಗಕ್ಕೆ ಬೇಕಾದರೆ ಪ್ರವೇಶ ಪಡೆಯಬಹುದು. ವಿಜ್ಞಾನ ವಿಭಾಗದಲ್ಲೇ ಅಧ್ಯಯನವನ್ನು ಮುಂದುವರಿಸುವ ಇಚ್ಛೆ ಇದ್ದರೆ ನೀವು ಅನುತ್ತೀರ್ಣರಾಗಿರುವ ವಿಷಯಗಳಲ್ಲಿ ಮತ್ತೆ ಪರೀಕ್ಷೆ ತೆಗೆದುಕೊಂಡು ಅವುಗಳಲ್ಲಿ ಉತ್ತೀರ್ಣರಾಗುವುದು ಒಳ್ಳೆಯದು. ವಿಜ್ಞಾನ ವಿಭಾಗದಲ್ಲಿ ನಿಮಗೆ ಆಸಕ್ತಿ ಇಲ್ಲದಿದ್ದರೂ, ಈಗ ಪಿಯು. ಮುಗಿಸಿಕೊಂಡು ಮುಂದೆ ಪದವಿ ಹಂತದಲ್ಲಿ ಕಲಾ ವಿಭಾಗಕ್ಕೋ ಅಥವಾ ವಾಣಿಜ್ಯ ವಿಭಾಗಕ್ಕೋ ಸೇರಬಹುದು.

ADVERTISEMENT

ಭಾರ್ಗವ ಜೋಶಿ
ನಾನು ಬಿ.ಇ. ಮೆಕ್ಯಾನಿಕಲ್‌ಗೆ ಪ್ರವೇಶ ಪಡೆದಿದ್ದೇನೆ. ಬಿ.ಇ. ನಂತರ ಎಂ.ಟೆಕ್. ಅವಕಾಶಗಳ ಕುರಿತು ಮಾಹಿತಿ ಒದಗಿಸಿಕೊಡಿ.


–ನೀವು ಬಿ.ಇ. ಮುಗಿಸಿದ ನಂತರ ಎಂ.ಟೆಕ್. ಮಾಡಲು ಬೇಕಾದಷ್ಟು ಅವಕಾಶಗಳಿವೆ. ಬಿ.ಇ. ಮುಗಿದ ನಂತರ, ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದವರು ನಡೆಸುವ ಪಿ.ಜಿ. ಸಿ.ಇ.ಟಿ ಆಯ್ಕೆ ಪರೀಕ್ಷೆ ತೆಗೆದುಕೊಂಡು ಉತ್ತಮ ಯಾಂಕ್ ಪಡೆದರೆ, ನೀವು ಬಯಸುವ ಕಾಲೇಜಿನಲ್ಲಿ ಎಂ.ಟೆಕ್ ಮಾಡಬಹುದು.

ಜಿ.ಆರ್.ಇ. ಆಯ್ಕೆ ಪರೀಕ್ಷೆ ತೆಗೆದುಕೊಂಡು, ಉತ್ತಮ ರ್ಯಾಂಕ್ ಪಡೆದರೆ, ರಾಷ್ಟ್ರ ಮಟ್ಟದ ತಾಂತ್ರಿಕ ಸಂಸ್ಥೆಗಳಲ್ಲಿ ಎಂ.ಟೆಕ್ ಮಾಡಬಹುದು. ಆದರೆ ಈಗಿನ್ನೂ ಬಿ.ಇ.ಗೆ ಪ್ರವೇಶ ಪಡೆದಿರುವ ನೀವು, ಎಂ.ಟೆಕ್. ಯೋಚನೆಯನ್ನು ಬಿಟ್ಟು, ಸದ್ಯದ ಓದಿನ ಕಡೆ ಗಮನ ಹರಿಸಿ. ಶ್ರದ್ಧೆ ಮತ್ತು ಪರಿಶ್ರಮದಿಂದ ಅಧ್ಯಯನ ಮಾಡಿ, ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು, ಎಲ್ಲ ಸೆಮಿಸ್ಟರ್‌ಗಳಲ್ಲೂ ಉತ್ತಮ ಅಂಕಗಳನ್ನು ಪಡೆಯಿರಿ.

ಮಾಲ್ಕಣ್ಣ ಎಸ್.ಪಿ.
ನಾನು ಪಿ.ಯು.ಸಿ. (ವಿಜ್ಞಾನ) ಮುಗಿದ ನಂತರ ಈಗ ಬಿ.ಬಿ.ಎಂ. ಮಾಡುತ್ತಿದ್ದೇನೆ. ನನ್ನ ಆಯ್ಕೆ ಸರಿ ಇದೆಯೇ? ಇದಕ್ಕೆ ಮುಂದೆ ಉದ್ಯೋಗಾವಕಾಶಗಳು ಹೇಗಿವೆ?


–ನಿಮಗೆ ವಾಣಿಜ್ಯ ಸಂಬಂಧಿ ವಿಷಯಗಳಲ್ಲಿ ಆಸಕ್ತಿ ಇದ್ದು ಬಿ.ಬಿ.ಎಂ. ಕೋರ್ಸ್‌ನ್ನು  ಆಯ್ಕೆ ಮಾಡಿಕೊಂಡಿದ್ದರೆ, ನೀವು ಮಾಡಿದ್ದು ಸರಿ. ಉದ್ಯೋಗಾವಕಾಶಗಳು ಎಲ್ಲ ಕೋರ್ಸ್‌ಗಳಲ್ಲೂ ಇವೆ. ನಮ್ಮ ಆಸಕ್ತಿಗೆ ಅನುಸಾರವಾಗಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ.

ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಸಂಬಂಧಿ ಕೋರ್ಸ್‌ಗಳಿಗೆ ಇರುವಷ್ಟೇ ಬೇಡಿಕೆ ವಾಣಿಜ್ಯ ಸಂಬಂಧಿ ಕೋರ್ಸ್‌ಗಳಿಗೂ ಇದೆ. ಉತ್ತಮ ವಿದ್ಯಾರ್ಥಿಗಳು ವಿಜ್ಞಾನ ಕೋರ್ಸ್‌ಗಳಿಗೆ ಹೋಗುವ ಹಾಗೆ ವಾಣಿಜ್ಯ ಕೋರ್ಸ್‌ಗಳಿಗೂ ಹೋಗುತ್ತಿದ್ದಾರೆ. ಆದ್ದರಿಂದ ನಿಮ್ಮ ಆಯ್ಕೆ ಸರಿಯಾಗಿಯೇ ಇದೆ. ಆದರೆ ನೀವು ಶ್ರದ್ಧೆಯಿಂದ ಓದಿ, ಉತ್ತಮ ಅಂಕಗಳೊಂದಿಗೆ ಬಿ.ಬಿ.ಎಂ. ಮುಗಿಸಿದರೆ ಮಾತ್ರ ನಿಮ್ಮ ಆಯ್ಕೆ ಸಾರ್ಥಕವಾಗುತ್ತದೆ.

ಶಿವು, ಗದಗ
ನಾನು ದ್ವಿತೀಯ ಪಿ.ಯು. (ಪಿ.ಸಿ.ಎಂ.ಎಸ್) ಓದುತ್ತಿದ್ದೇನೆ. ಮುಂದೆ ಸಾಫ್‌್ಟವೇರ್‌ ಎಂಜಿನಿಯರ್ ಆಗಬೇಕೆಂದಿದ್ದೇನೆ. ಆದ್ದರಿಂದ ಮುಂದಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ತಿಳಿಸಿ.


–ಪಿ.ಯು. ಓದುತ್ತಿದ್ದಾಗಲೇ ಮುಂದೆ ಸಾಫ್ಟ್ ವೇರ್‌ ಎಂಜಿನಿಯರ್ ಆಗಬೇಕೆಂಬ ಕನಸು ಕಾಣುತ್ತಿರುವ ನೀವು ಅಭಿನಂದನೀಯರು. ನಮ್ಮ ತೀವ್ರವಾದ ಕನಸುಗಳೇ ನಮ್ಮನ್ನು ಗುರಿಯೆಡೆಗೆ ಕರೆದೊಯ್ಯುವ ಮಾರ್ಗಗಳು. ಒಳ್ಳೆಯ ಸಾಫ್ಟವೇರ್‌ ಎಂಜಿನಿಯರ್ ಆಗಲು ನೀವು ಒಳ್ಳೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಮಾಡಬೇಕು.

ಇದಕ್ಕೆ ಪಿ.ಯು.ನಲ್ಲಿ ಮತ್ತು ಸಿ.ಇ.ಟಿ/ಮೈನ್ಸ್ ಆಯ್ಕೆ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕು. ಆದ್ದರಿಂದ ಈಗಿನಿಂದಲೇ ಶ್ರದ್ಧೆ ಮತ್ತು ಪರಿಶ್ರಮದಿಂದ ಬೋರ್ಡ್‌ ಪರೀಕ್ಷೆ ಮತ್ತು ಸಿ.ಇ.ಟಿ ಪರೀಕ್ಷೆಗಳೆರಡಕ್ಕೂ ಸಿದ್ಧತೆ ಮಾಡಿಕೊಳ್ಳಿ. ಸಿ.ಇ.ಟಿ ಪರೀಕ್ಷೆಯನ್ನು ಎದುರಿಸಲು ದೀರ್ಘಕಾಲಿಕ ತರಬೇತಿ ಅಗತ್ಯ. ನಿಖರವಾಗಿ ಮತ್ತು ವೇಗವಾಗಿ ಸಮಸ್ಯೆಗಳನ್ನು ಬಿಡಿಸುವ ಕೌಶಲವು ತರಬೇತಿಯಿಂದ ಮಾತ್ರ ದೊರೆಯುತ್ತದೆ. ಆದ್ದರಿಂದ ಈಗಿನಿಂದಲೇ ಕಾರ್ಯಮಗ್ನರಾಗಿ.

ರುದ್ರೇಶ  
ನಾನು ಈಗಷ್ಟೇ ಇ.ಸಿ.ಇ. ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದ್ದೇನೆ. ಮುಂದೆ ಉದ್ಯೋಗಕ್ಕೆ ಸೇರಿ ದೂರಶಿಕ್ಷಣ ಅಥವಾ ಸಂಜೆ ಕಾಲೇಜಿನಲ್ಲಿ ಬಿ.ಇ. ಅಥವಾ ಬಿ.ಟೆಕ್ ಮಾಡಬೇಕೆಂದಿದ್ದೇನೆ. ಇದು ಸರಿಯೇ? ಹೀಗೆ ಮಾಡಿದರೆ ನಿತ್ಯ ಕಾಲೇಜಿಗೆ ಹೋಗಿ ಪದವಿ ಪಡೆದವರಿಗೆ ಇರುವಷ್ಟೇ ಮಾನ್ಯತೆ ಇರುತ್ತದೆಯೇ? ಬಿ.ಇ. ಮತ್ತು ಬಿ.ಟೆಕ್ ಎರಡರಲ್ಲಿ ಯಾವುದು ಸೂಕ್ತ?


– ನೀವು ಡಿಪ್ಲೊಮಾ ಮುಗಿಸಿದ ನಂತರ ಉದ್ಯೋಗಕ್ಕೆ ಸೇರಿ ಸಂಜೆ ಕಾಲೇಜಿನಲ್ಲಿ ಬಿ.ಇ. ಮಾಡಬಹುದು. ಇಂತಹ ಕಾಲೇಜುಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮಾನ್ಯತೆ ದೊರಕಿರುವುದರಿಂದ ನೀವು ಪಡೆಯುವ ಪದವಿಗೂ  ಮಾನ್ಯತೆ ಇರುತ್ತದೆ. ಬಿ.ಇ. ಮತ್ತು ಬಿ.ಟೆಕ್. ಎರಡೂ ಒಂದೇ. ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಬೇರೆ ಬೇರೆ ಹೆಸರುಗಳಿರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.