ADVERTISEMENT

ಬೆಕ್ಕಿನಂತೆ ಕೈ ಹಿಡಿತ ಇರಲಿ

ಜಿ.ಕೆ.ವೆಂಕಟೇಶಮೂರ್ತಿ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST
ಬೆಕ್ಕಿನಂತೆ ಕೈ ಹಿಡಿತ ಇರಲಿ
ಬೆಕ್ಕಿನಂತೆ ಕೈ ಹಿಡಿತ ಇರಲಿ   

ಪೆನ್ಸಿಲ್ ಅಥವಾ ಪೆನ್ ಹಿಡಿಯುವುದಕ್ಕೂ ಬರವಣಿಗೆಗೂ ಏನು ಸಂಬಂಧ ಎಂದು ಕೆಲವರು ಕೇಳುತ್ತಾರೆ. ಟೂತ್ ಬ್ರಶ್ ಹಿಡಿಯಲು ಒಂದು ಕ್ರಮ ಇದೆ, ಚಮಚ ಹಿಡಿಯಲು, ಕ್ರಿಕೆಟ್ ಬ್ಯಾಟ್ ಹಿಡಿಯಲು, ಸ್ಕ್ರೂ ಡ್ರೈವರ್ ಹಿಡಿಯಲು ಸಹ ಒಂದು ನಿರ್ದಿಷ್ಟ ಕ್ರಮ ಇರುತ್ತದೆ. ಹಾಗೆಯೇ ಪೆನ್ ಮಾತ್ರ ಹೇಗೆ ಹಿಡಿದರೂ ಆದೀತು ಎಂಬುದನ್ನು ನಾನು ಒಪ್ಪಲಾರೆ.

42 ವರ್ಷದ ಆನಂದ ಬಾಬು ಒಬ್ಬ ಸರ್ಕಾರಿ ಅಧಿಕಾರಿ, ಸುಶಿಕ್ಷಿತರು. ಎರಡು ವರ್ಷದ ಹಿಂದೆ ನಡೆದ ಕೈಬರಹದ ಶಿಬಿರಕ್ಕೆ ಮಗಳೊಡನೆ ತಾವೂ ಸೇರಿದರು. ಅವರು ಮಣಿಕಟ್ಟಿನಲ್ಲಿ (ರಿಸ್ಟ್) ಮುಂಗೈ ಅನ್ನು 90 ಡಿಗ್ರಿಯಷ್ಟು ಹಿಂದಕ್ಕೆ ಬಾಗಿಸಿ ಪೆನ್ ಹಿಡಿಯುತ್ತಿದ್ದರು. ಚೆನ್ನಾಗಿ ಬೇರು ಬಿಟ್ಟಿದ್ದ ಆ ಅಭ್ಯಾಸವನ್ನು ಸರಿಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲೇ ಇಲ್ಲ. ಅವರು ಈಗ ಕೈ ಬರಹ ಸುಧಾರಿಸಿಕೊಳ್ಳುವ ಪ್ರಯತ್ನವನ್ನು ಕೈಬಿಟ್ಟಿದ್ದಾರೆ.

ಪೆನ್ಸಿಲ್ ಅಥವಾ ಪೆನ್ ಹಿಡಿಯುವಾಗ ಮೂರು ಸಂಗತಿಗಳ ಕಡೆ ಗಮನ ಅಗತ್ಯ.
1. ಸ್ಥಾನ 2. ರೀತಿ ಮತ್ತು 3. ಹಿಡಿತ

ಸ್ಥಾನ: ಪೆನ್ಸಿಲ್ ಅಥವಾ ಪೆನ್ನನ್ನು ಹಿಡಿಯುವ ನಮ್ಮ ಬೆರಳುಗಳು ಅದರ ತುದಿಯಿಂದ ಸುಮಾರು 2 ಸೆಂಟಿ ಮೀಟರಿನಷ್ಟು ದೂರದಲ್ಲಿ ಇರಬೇಕು. ಆಗ ಬೆರಳುಗಳನ್ನು ಸುಲಭವಾಗಿ ಚಲಿಸಲು ಸಾಧ್ಯವಾಗುತ್ತದೆ. ತೀರಾ ತುದಿಯಲ್ಲಿ ಪೆನ್ ಹಿಡಿದರೆ ಹಾಳೆಯ ಮೇಲೆ ಅನವಶ್ಯಕ ಒತ್ತಡ ಬೀಳುತ್ತದೆ. ಕೆಲವು ಪೆನ್‌ಗಳಿಗೆ ಹಿಡಿಯಬೇಕಾದ ಕಡೆ ಸರಿಯಾಗಿ `ಗ್ರಿಪ್' ಇರುತ್ತದೆ.

ರೀತಿ: ಮೂರು ಬೆರಳುಗಳಿಂದ ಪೆನ್ ಅಥವಾ ಪೆನ್ಸಿಲ್ ಹಿಡಿಯುವುದು ಸೂಕ್ತ- ತೋರು ಬೆರಳು, ಹೆಬ್ಬೆರಳು ಮತ್ತು ಮಧ್ಯದ ಬೆರಳು. ಇವುಗಳಲ್ಲಿ ಮಧ್ಯದ ಬೆರಳು ಪೆನ್ ಅಥವಾ ಪೆನ್ಸಿಲ್‌ಗೆ ಕೆಳಗಿನಿಂದ ಆಧಾರ ಕೊಡುವಂತೆ ಇರಬೇಕು. ಕೆಲವು ಕಂಪೆನಿಗಳು ಮೂರು ಮುಖಗಳುಳ್ಳ ಪೆನ್ಸಿಲ್ ಹಾಗೂ ಪೆನ್ನನ್ನು ತಯಾರಿಸುವುದು ಈ ಉದ್ದೇಶದಿಂದಲೇ. ಉಳಿದೆರಡು ಬೆರಳುಗಳಾದ ಉಂಗುರದ ಬೆರಳು ಮತ್ತು ಕಿರು ಬೆರಳುಗಳು ಮಧ್ಯದ ಬೆರಳಿನ ಕೆಳಗೆ ಮಡಿಸಿದ ಸ್ಥಿತಿಯಲ್ಲಿ ಇರಬೇಕು. ಅವು ಹೊರಕ್ಕೆ ಚಾಚಿರಬಾರದು.

ADVERTISEMENT

ಹಿಡಿತ: ಪೆನ್ಸಿಲ್ ಅಥವಾ ಪೆನ್ನಿನ ಮೇಲಿನ ಹಿಡಿತ ತುಂಬಾ ಬಿಗಿಯಾಗಿರಬೇಕಾದ ಅಗತ್ಯ ಇಲ್ಲ. ಪೆನ್ಸಿಲ್ ಅಥವಾ ಪೆನ್ನು ತನ್ನ ಸ್ಥಾನದಿಂದ ಜಾರದಂತೆ ಇದ್ದರೆ ಸಾಕು. ಕೆಲವು ಮಕ್ಕಳು ಎಷ್ಟು ಬಿಗಿಯಾಗಿ ಒತ್ತಿ ಹಿಡಿದಿರುತ್ತಾರೆ ಎಂದರೆ ಉಗುರಿನ ತುದಿಯಲ್ಲಿ ರಕ್ತ ಸಂಚಾರ ನಿಂತು, ಅದು ಬೆಳ್ಳಗೆ ಕಾಣುತ್ತಿರುತ್ತದೆ. ಇಂಥವರಿಗೆ ಬರವಣಿಗೆ ಅಗಾಧವಾದ ಕೆಲಸ ಎನಿಸಿ ತ್ರಾಸದಾಯಕ ಆಗಬಹುದು. ಇದು ಎಷ್ಟು ಅಜ್ಞಾನದ ಕೆಲಸ ಎಂದರೆ `ಉಗುರಿನಲ್ಲಿ ಆಗುವುದಕ್ಕೆ ಕೊಡಲಿಯನ್ನು ತೆಗೆದುಕೊಂಡರು' ಎಂಬ ಗಾದೆಯನ್ನು ನೆನಪಿಸುತ್ತದೆ.

ಪೆನ್ಸಿಲ್ ಅಥವಾ ಪೆನ್ನಿನ ಮೇಲಿನ ಹಿಡಿತ ಹೇಗಿರಬೇಕು ಎಂಬುದಕ್ಕೆ ನಾನು ಒಂದು ಹೋಲಿಕೆ ನೀಡುತ್ತೇನೆ. ಆಗ ತಾನೇ ಹುಟ್ಟಿದ ಬೆಕ್ಕಿನ ಮರಿಗೆ ಕಣ್ಣು ಕಾಣಿಸುವುದಿಲ್ಲ. ಅದರ ತಾಯಿ ತನ್ನ ಬಾಯಿಯಿಂದ ಮರಿಯ ಕುತ್ತಿಗೆಯನ್ನು ಕಚ್ಚಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಒಯ್ಯುವುದನ್ನು ನೀವು ನೋಡಿರಬಹುದು. ಬಿಗಿ ಜಾಸ್ತಿ ಮಾಡಿದರೆ ಮರಿ ಸತ್ತುಹೋಗುತ್ತದೆ. ಸಡಿಲ ಮಾಡಿದರೆ ಅದು ಬಿದ್ದು ಹೋಗಬಹುದು. ಮರಿಯು ಸಾಯಲೂಬಾರದು ಬೀಳಲೂಬಾರದು. ನಮ್ಮ ಪೆನ್ನಿನ ಹಿಡಿತವೂ ಹಾಗಿರಬೇಕು.

ಮಕ್ಕಳು ಪೆನ್ಸಿಲ್‌ನಿಂದ ಬರೆಯಲು ಪ್ರಾರಂಭಿಸುತ್ತಾರೆ. ಹೇಗೆ ಹಿಡಿಯಬೇಕೆಂದು ಯಾರೂ ಅವರಿಗೆ ಹೇಳಿರುವುದಿಲ್ಲ. ಚೂಪು ಮಾಡಿದಲ್ಲೇ ಹಿಡಿಯುತ್ತಾರೆ. ಅದು ಇಳಿಜಾರಾಗಿರುತ್ತದೆ. ಹಾಗಾಗಿ ಜಾರಬಹುದೆಂಬ ಕಾರಣಕ್ಕೆ ಹಿಡಿತವನ್ನು ಬಿಗಿಗೊಳಿಸುತ್ತಾರೆ. ಅದೇ ಅಭ್ಯಾಸವನ್ನು ಪೆನ್ನಿನಿಂದ ಬರೆಯುವಾಗಲೂ ಮುಂದುವರಿಸುತ್ತಾರೆ.

ಒರಟಾದ ಕಲ್ಲಿಗೆ ಪೆನ್ಸಿಲ್/ ಪೆನ್ ಉಜ್ಜಿ ಅವರಿಗೆ ಗ್ರಿಪ್ ಮಾಡಿಕೊಟ್ಟು ನೋಡಿ, ಅವರು ಹೇಗೆ ನಿರಾಳವಾಗಿ ಅದನ್ನು ಹಿಡಿಯುತ್ತಾರೆ ಎಂದು! ಆಗ ಬರೆಯುವ ಕೆಲಸ ಎಷ್ಟು ಹಗುರ ಅನ್ನಿಸುತ್ತದೆ ಅವರಿಗೆ. ನಾವು ಅಷ್ಟು ಸೂಕ್ಷ್ಮವಾಗಿ ಯೋಚಿಸದಿದ್ದರೆ ಅದು ನಮ್ಮದೇ ತಪ್ಪು.

ಮುಂದಿನ ವಾರ: ಒತ್ತಡ, ಚಲನೆ ಮತ್ತು ತಳ್ಳುವಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.