ADVERTISEMENT

ಹೊಸ ಭರವಸೆ ಮಲ್ಟಿಮೀಡಿಯಾ

ಪ್ರಜಾವಾಣಿ ವಿಶೇಷ
Published 16 ಫೆಬ್ರುವರಿ 2014, 19:30 IST
Last Updated 16 ಫೆಬ್ರುವರಿ 2014, 19:30 IST
‘ವಿಜ್‌ಟೂನ್ಜ್  ಕಾಲೇಜ್‌ ಆಫ್‌ ಮೀಡಿಯಾ ಆಂಡ್‌ ಡಿಸೈನ್’ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು
‘ವಿಜ್‌ಟೂನ್ಜ್ ಕಾಲೇಜ್‌ ಆಫ್‌ ಮೀಡಿಯಾ ಆಂಡ್‌ ಡಿಸೈನ್’ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು   

ಪ್ರತಿಭೆ, ಕ್ರಿಯಾಶೀಲತೆ, ಆಸಕ್ತಿ... ಇಷ್ಟಿದ್ದರೆ ಸಾಕು. ನಮ್ಮ ಬಳಿ ಬನ್ನಿ. ನಿಮ್ಮ ಉಜ್ವಲ ಭವಿಷ್ಯಕ್ಕೆ ನಾವು ದಾರಿದೀಪವಾಗುತ್ತೇವೆ’ ಎಂದು ಹೇಳುತ್ತಾರೆ ‘ವಿಜ್‌ಟೂನ್ಜ್  ಕಾಲೇಜ್‌ ಆಫ್‌ ಮೀಡಿಯಾ ಆಂಡ್‌ ಡಿಸೈನ್’ ಸಂಸ್ಥಾಪಕ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಧರ್‌ ವಿ ಟಿ.

ಈಚಿನ ವರ್ಷಗಳಲ್ಲಿ ಶಿಕ್ಷಣದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವುದು ಮಲ್ಟಿಮೀಡಿಯಾ ಮತ್ತು ಅನಿಮೇಷನ್‌ ಕ್ಷೇತ್ರ. ಮನರಂಜನಾ ಕ್ಷೇತ್ರದ ಅನಿವಾರ್ಯ ಭಾಗವಾಗಿರುವ ಮಲ್ಟಿಮೀಡಿಯಾ ಮತ್ತು ಅನಿಮೇಷನ್‌, ಟಿವಿ ಜಾಹೀರಾತು, ಚಲನಚಿತ್ರ, ಗೇಮ್‌, ಸಾಫ್ಟ್‌ವೇರ್‌ ವಲಯಗಳಲ್ಲಿ ಹೇರಳ ಅವಕಾಶಗಳನ್ನು ಸೃಷ್ಟಿಸಿದೆ. ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಶಿಕ್ಷಣಗಳಂತೆಯೇ ಮಲ್ಟಿಮೀಡಿಯಾ ಶಿಕ್ಷಣ ಕೂಡ ಇಂದು ಹೆಸರು ಗಳಿಸುತ್ತಿದೆ. ಅಲ್ಲಿರುವಷ್ಟೇ ಅವಕಾಶ ಇಲ್ಲೂ ಇದೆ. ಆದರೆ, ಮಲ್ಟಿಮೀಡಿಯಾ ಶಿಕ್ಷಣವನ್ನು ಆಯ್ಕೆ ಮಾಡಬೇಕಾದರೆ ನಿಮ್ಮಲ್ಲಿ ಒಂದು ಪ್ರಮುಖ ಅರ್ಹತೆ ಇರಬೇಕು. ಸೃಜನಶೀಲತೆ- ಕ್ರಿಯಾಶೀಲತೆ.

ಶ್ರೀಧರ್‌ ಅವರ ಪ್ರಕಾರ, ಈ ಕ್ಷೇತ್ರದಲ್ಲಿ ವ್ಯಕ್ತಿಯ ಕ್ರಿಯಾತ್ಮಕ ಮನಸ್ಸಿಗೆ ಹೆಚ್ಚು ಕೆಲಸ. ನೈಪುಣ್ಯ, ಕಲ್ಪನಾ ಶಕ್ತಿ ಮಿಳಿತ ಪ್ರತಿಭೆಗೆ ಅವಕಾಶಗಳ ಇಲ್ಲಿ ಆಗರವೇ ಇದೆ. ಮಲ್ಟಿಮೀಡಿಯಾ ಎಂದರೆ ಕೇವಲ ಅನಿಮೇಶನ್‌ ಅಲ್ಲ ಎಂದು ಸ್ಪಷ್ಟನೆ ನೀಡುತ್ತಾರೆ ಅವರು. ಅನಿಮೇಷನ್‌ ಇದರ ಒಂದು ಭಾಗವಷ್ಟೇ. ಗ್ರಾಫಿಕ್‌ ಡಿಸೈನಿಂಗ್‌, ವೆಬ್‌ ಡಿಸೈನಿಂಗ್‌, ಡಿಟಿಪಿ... ಇವೆಲ್ಲವೂ ಮಲ್ಟಿಮೀಡಿಯಾದ ಅಡಿಯಲ್ಲಿ ಬರುತ್ತವೆ ಎಂದು ವಿವರಿಸುತ್ತಾರೆ ಶ್ರೀಧರ್‌.

ಅಂದ ಹಾಗೆ, ಬೆಂಗಳೂರಿನ ಜೆಪಿ ನಗರದಲ್ಲಿರುವ ‘ವಿಜ್‌ಟೂನ್ಜ್‌ ಕಾಲೇಜ್‌ ಆಫ್‌ ಮೀಡಿಯಾ ಆಂಡ್‌ ಡಿಸೈನ್‌’ ಅನ್ನು ಅವರು ಸ್ಥಾಪಿಸಿದ್ದು  2007ರಲ್ಲಿ. ಏಳು ವರ್ಷಗಳಿಂದ ಮಲ್ಟಿಮೀಡಿಯಾ, ಅನಿಮೇಷನ್‌ ಶಿಕ್ಷಣದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸಂಸ್ಥೆಯು ಮಲ್ಟಿಮೀಡಿಯಾದಲ್ಲಿ ಪದವಿ (Bachelors in Multimedia) ಮತ್ತು ಸ್ನಾತಕೋತ್ತರ ಪದವಿ (Masters in Multimedia) ಶಿಕ್ಷಣ ನೀಡುತ್ತಿದೆ. ಸುಮಾರು 750 ವಿದ್ಯಾರ್ಥಿಗಳು ತಮ್ಮ ಕೌಶಲವನ್ನು ಒರೆಗೆ ಇಲ್ಲಿ ಹಚ್ಚುತ್ತಿದ್ದಾರೆ.

ಯಾವುದೇ ವಿಷಯದಲ್ಲಿ (ವಿಜ್ಞಾನ, ವಾಣಿಜ್ಯ, ಕಲೆ ವಿಭಾಗ) ಪದವಿ ಪೂರ್ವ ಶಿಕ್ಷಣ ಪದವಿ ಪಡೆದವರು ಮಲ್ಟಿಮೀಡಿಯಾ ಪದವಿ ಪಡೆಯಬಹುದು. ಅದೇ ರೀತಿ, ಯಾವುದೇ ವಿಷಯದಲ್ಲಿ ಪದವಿ ಪಡೆದವರು ಕೂಡ ಮಲ್ಟಿಮೀಡಿಯಾ ಸ್ನಾತಕೋತ್ತರ ಪದವಿ ಪಡೆಯಲು ಅರ್ಹರು.

‘ಇತರ ವಿಷಯಗಳಲ್ಲಿ ಶಿಕ್ಷಣ ಪಡೆದು, ಮಲ್ಟಿಮೀಡಿಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ದಾಖಲುಗೊಂಡವರಿಗೆ ಆರಂಭದಲ್ಲಿ ವಿಶೇಷವಾಗಿ ಸೇತು ಬಂಧ ಶಿಕ್ಷಣವನ್ನು (ಬ್ರಿಜ್‌ ಕೋರ್ಸ್‌) ನಾವು ನೀಡುತ್ತೇವೆ. ಇದರಿಂದ ಹೊಸ ವಿಷಯಕ್ಕೆ ಹೊಂದಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ’ ಎಂದು ಶ್ರೀಧರ್‌ ನುಡಿಯುತ್ತಾರೆ.

ಇತರ ವಿದ್ಯಾರ್ಥಿಗಳೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಕಷ್ಟ ಪಡುವ ದೂರದ ಊರುಗಳಿಂದ ಬಂದಿರುವ ವಿದ್ಯಾರ್ಥಿಗಳ ಸಂವಹನ ಕೌಶಲ ವೃದ್ಧಿಸುವುದಕ್ಕಾಗಿ ತರಬೇತಿಯನ್ನೂ ವಿಜ್‌ಟೂನ್ಜ್ ಸಂಸ್ಥೆ ನೀಡುತ್ತಿದೆ.

ಉದ್ಯೋಗ ಕೇಂದ್ರ
ಸಂಸ್ಥೆಯಲ್ಲಿ ಜ್ಞಾನಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿಯನ್ನು ಸಂಪಾದಿಸಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಉದ್ಯೋಗ ಕೇಂದ್ರ (ಪ್ಲೇಸ್‌ಮೆಂಟ್‌ ಸೆಲ್‌) ಹೊಂದಿರುವುದು ವಿಜ್‌ಟೂನ್ಜ್‌ನ ವೈಶಿಷ್ಠ್ಯ.

‘ಈ ಕೇಂದ್ರದ ಅಡಿಯಲ್ಲಿ ಸಂಸ್ಥೆಯು, ಪ್ರಥಮ ಸೆಮಿಸ್ಟರ್‌ ಮುಗಿದ ತಕ್ಷಣ ವಿದ್ಯಾರ್ಥಿಗಳನ್ನು ವೇತನ ಸಹಿತ ಇಂಟರ್ನ್‌ ಶಿಪ್‌ಗೆ ಕಳುಹಿಸಲು ಜಾಹೀರಾತು, ಗೇಮ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಕಂಪೆನಿಗಳೊಂದಿಗೆ ಕಾಲೇಜು ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ವಿದ್ಯಾರ್ಥಿಗೆ ಶಿಕ್ಷಣ ಪಡೆಯುವಾಗಲೇ ವೃತ್ತಿಯ ಅನುಭವ ಆಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ವೃತ್ತಿ ನಿಪುಣತೆಯೂ ಬೆಳೆಯುತ್ತದೆ. ಪದವಿ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಕೈಗೊಂಡಿದ್ದ ಕಂಪೆನಿಗಳಲ್ಲೇ ಉದ್ಯೋಗ ಸಿಗಬಹುದು; ಇಲ್ಲವೇ ಬೇರೆ ಕಡೆಗಳಲ್ಲಿ ಸಿಗಬಹುದು’ ಎಂದು ವಿವರಿಸುತ್ತಾರೆ ಶ್ರೀಧರ್‌.

‘ಕೇಂದ್ರ ಇದ್ದ ಮಾತ್ರಕ್ಕೆ ಸಂಸ್ಥೆಯಲ್ಲಿ ಶಿಕ್ಷಣ ಪಡೆದವರಿಗೆಲ್ಲರಿಗೂ ಕೆಲಸ ಕೊಡಿಸುತ್ತೇವೆ ಎಂದು ಭರವಸೆ ನೀಡಲು ಸಾಧ್ಯವಿಲ್ಲ. ವೇದಿಕೆ ಮಾತ್ರ ಒದಗಿಸಬಹುದು. ನೇಮಕಾತಿಗಾಗಿ ಕಂಪೆನಿಗಳು ಕಾಲೇಜಿಗೆ ಬರುತ್ತವೆ. ಅಲ್ಲಿ ಪರೀಕ್ಷೆ, ಸಂದರ್ಶನಗಳನ್ನು ವಿದ್ಯಾರ್ಥಿಯೇ ಎದುರಿಸಬೇಕೇ ಹೊರತು ನಾವಲ್ಲ. ಆದರೆ, 2009ರಿಂದ ಪ್ರತಿ ವರ್ಷ ನಮ್ಮ ಸಂಸ್ಥೆಯ ಶೇ 100 ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿದೆ. ಅವರೆಲ್ಲಾ ಉತ್ತಮ ವೇತನವನ್ನೂ ಪಡೆಯುತ್ತಿದ್ದಾರೆ’ ಎನ್ನುತ್ತಾರೆ ಅವರು.

ಏಳು ವರ್ಷಗಳಿಂದ ಯಶಸ್ವಿಯಾಗಿ ಸಂಸ್ಥೆಯನ್ನು ನಿಭಾಯಿಸಿಕೊಂಡು ಬರುತ್ತಿರುವ ಶ್ರೀಧರ್‌  ಅವರು ವಿದ್ಯಾರ್ಥಿಗಳಿಗೆ ಸಿಗಬೇಕಾದ ಗುಣಮಟ್ಟದ ಶಿಕ್ಷಣದ ಬಗ್ಗೆ ಪ್ರಸ್ತಾಪಿಸಲು ಮರೆಯುವುದಿಲ್ಲ.
‘ಪ್ರತಿಯೊಬ್ಬರಲ್ಲೂ ಕ್ರಿಯಾಶೀಲತೆ ಇರುತ್ತದೆ. ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಯೊಬ್ಬನ ಸಾಮರ್ಥ್ಯ, ಆಸಕ್ತಿ, ಪ್ರತಿಭೆಯನ್ನು ಗುರುತಿಸಬೇಕು. ವಿದ್ಯಾರ್ಥಿ ಕಾಲೇಜಿನಿಂದ ಹೊರಗೆ ಕಾಲಿಡುವಾಗ ಪರಿಪೂರ್ಣ ವೃತ್ತಿಪರನಾಗಬೇಕಾದರೆ ಆತ ಅಥವಾ ಆಕೆಗೆ ಗುಣಮಟ್ಟದ ಮೌಲ್ಯಯುತ ಶಿಕ್ಷಣ ದೊರೆಯಬೇಕು’ ಎಂದು ಹೇಳುವ ಶ್ರೀಧರ್‌, ವಿಜ್‌ಟೂನ್ಜ್‌ನಿಂದ ಅಂತಹ ಶಿಕ್ಷಣವನ್ನು ನಿರೀಕ್ಷಿಸಬಹುದು ಎಂಬ ಭರವಸೆ ನೀಡುತ್ತಾರೆ.

(ಮಾಹಿತಿಗೆ: www.wiztoonz.com)
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT