ADVERTISEMENT

ವೈರತ್ವ ಕರಗಿಸಿದ 'ಒಲಿಂಪಿಕ್ಸ್‌'

ಮಹಮ್ಮದ್ ನೂಮಾನ್
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಉತ್ತರ ಕೊರಿಯಾದ ರ‍್ಯೋಮ್‌ ಟೇ ಓಕ್ ಮತ್ತು ಕಿಮ್‌ ಜು ಸೀಕ್‌ ಅವರ ಫಿಗರ್‌ ಸ್ಕೇಟಿಂಗ್‌ ಸ್ಪರ್ಧೆಯ ನೋಟ
ಉತ್ತರ ಕೊರಿಯಾದ ರ‍್ಯೋಮ್‌ ಟೇ ಓಕ್ ಮತ್ತು ಕಿಮ್‌ ಜು ಸೀಕ್‌ ಅವರ ಫಿಗರ್‌ ಸ್ಕೇಟಿಂಗ್‌ ಸ್ಪರ್ಧೆಯ ನೋಟ   

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವಿನ ಹಗೆತನಕ್ಕೆ ಸುದೀರ್ಘ ಇತಿಹಾಸವಿದೆ. ಉಭಯ ರಾಷ್ಟ್ರಗಳು ಶಾಂತಿಯ ಹಸ್ತ ಚಾಚಲು ನಡೆಸುವ ಪ್ರತಿಯೊಂದು ಪ್ರಯತ್ನವನ್ನು ಇಡೀ ಜಗತ್ತು ಕುತೂಹಲದಿಂದ ಗಮನಿಸುತ್ತದೆ. ಎರಡೂ ದೇಶಗಳು ಕ್ರೀಡೆಯ ನೆವದಲ್ಲಿ ವೈರತ್ವ ಮರೆಯಲು ಮಂದಾಗಿರುವುದು ಇತ್ತೀಚಿನ ಬೆಳವಣಿಗೆ.

ದಕ್ಷಿಣ ಕೊರಿಯಾದ ಪೊಂಗ್‌ಚಾಂಗ್‌ನಲ್ಲಿ ನಡೆಯಲಿರುವ 2018ರ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯಾದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ. ಕ್ಷಿಪಣಿ ಪರೀಕ್ಷೆ, ಸೇನಾಶಕ್ತಿ ಪ್ರದರ್ಶನ ಮತ್ತು ರಾಷ್ಟ್ರನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಕೊರಿಯಾ ಪರ್ಯಾಯ ದ್ವೀಪದಲ್ಲಿ ಉದ್ವಿಗ್ನತೆ ತಾತ್ಕಾಲಿಕವಾಗಿ ಶಮನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ಮಂಗಳವಾರ ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಿದ್ದು, ಇದರ ಬಳಿಕ ಉತ್ತರ ಕೊರಿಯಾದ ನಿರ್ಧಾರ ಹೊರಬಿದ್ದಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ದೇಶದ ಕ್ರೀಡಾಪಟುಗಳನ್ನು ಕಳುಹಿಸಲು ಒಪ್ಪಿಗೆ ಸೂಚಿಸಿದ್ದಾರೆ.

ADVERTISEMENT

ಉತ್ತರ ಕೊರಿಯಾದ ಇಬ್ಬರು ಫಿಗರ್ ಸ್ಕೇಟಿಂಗ್ ಸ್ಪರ್ಧಿಗಳು ಮಾತ್ರ ಚಳಿಗಾಲದ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿರುವುದು. ಈ ದೇಶದ ಇನ್ನಷ್ಟು ಸ್ಪ‌ರ್ಧಿಗಳು ಕೂಟದಲ್ಲಿ ಪಾಲ್ಗೊಳ್ಳಬೇಕು ಎಂಬುದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಬಯಕೆ. ಅದಕ್ಕಾಗಿ ಕೆಲವು ಕ್ರೀಡಾಪಟುಗಳಿಗೆ ವೈಲ್ಡ್‌ ಕಾರ್ಡ್ ಪ್ರವೇಶ ನೀಡುವ ಚಿಂತನೆ ನಡೆದಿದೆ.

ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳು ಮಾತ್ರವಲ್ಲದೆ, ಅಧಿಕಾರಿಗಳು, ಪತ್ರಕರ್ತರು ಮತ್ತು ಚಿಯರ್‌ ಗರ್ಲ್ಸ್‌ ತಂಡವನ್ನು ಕಳುಹಿಸುವ ಯೋಜನೆಯನ್ನು ಉತ್ತರ ಕೊರಿಯಾ ಹಾಕಿಕೊಂಡಿದೆ. ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಜತೆಯಾಗಿ ಪಾಲ್ಗೊಳ್ಳುವ ಪ್ರಸ್ತಾವವನ್ನು ದಕ್ಷಿಣ ಕೊರಿಯಾ ಮುಂದಿಟ್ಟಿದೆ. ಈ ಬಗ್ಗೆ ಉತ್ತರ ಕೊರಿಯ ತನ್ನ ನಿರ್ಧಾರ ಇನ್ನೂ ಪ್ರಕಟಿಸಿಲ್ಲ.

ಇದೇ ಮೊದಲಲ್ಲ
ಕ್ರೀಡೆಯ ವಿಷಯಕ್ಕೆ ಬಂದಾಗ ಎರಡೂ ದೇಶಗಳು ವೈರತ್ವ ಮರೆತ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅಷ್ಟೇ ಅಲ್ಲದೆ, ದ್ವೇಷ, ಹಗೆತನದಿಂದ ಕ್ರೀಡಾಕೂಟವನ್ನು ಬಹಿಷ್ಕರಿಸಿದ್ದ ಘಟನೆಗಳೂ ನಡೆದಿವೆ. 2000ದಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಎರಡೂ ದೇಶಗಳ ಆಥ್ಲೀಟ್‌ಗಳು ಮೊದಲ ಬಾರಿ ಪಥಸಂಚನದಲ್ಲಿ ಜತೆಯಾಗಿ ಪಾಲ್ಗೊಂಡಿದ್ದರು. ಈ ಕೂಟದಲ್ಲಿ ‘ಸಂಯುಕ್ತ ಧ್ವಜ’ದಡಿ ಒಟ್ಟಾಗಿ ಸ್ಪರ್ಧಿಸಿದ್ದರು.

ನಾಲ್ಕು ವರ್ಷಗಳ ಬಳಿಕ ಅಥೆನ್ಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಮತ್ತು 2006ರ ಟ್ಯುರಿನ್ ಚಳಿಗಾಲದ ಒಲಿಂಪಿಕ್ಸ್‌ಲ್ಲೂ ಒಂದೇ ಧ್ವಜದಡಿ ಪಾಲ್ಗೊಂಡಿದ್ದರು. 2007ರ ಏಷ್ಯಾ ಚಳಿಗಾಲದ ಕ್ರೀಡಾಕೂಟದ ಬಳಿಕ ಉಭಯ ದೇಶಗಳ ಅಥ್ಲೀಟ್‌ಗಳು ಯಾವುದೇ ಕೂಟದಲ್ಲೂ ಜತೆಯಾಗಿ ಪಾಲ್ಗೊಂಡಿಲ್ಲ.

2010ರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಅರ್ಹತಾ ಹಂತದಲ್ಲಿ ಉಭಯ ದೇಶಗಳು ನಾಲ್ಕು ಸಲ ಪೈ‍ಪೋಟಿ ನಡೆಸಿದ್ದವು. ಆದರೆ ಉತ್ತರ ಕೊರಿಯದ ತವರು ಪಂದ್ಯಗಳನ್ನು ಚೀನಾದ ಶಾಂಘೈನಲ್ಲಿ ಆಯೋಜಿಸಲಾಗಿತ್ತು. ತನ್ನ ನೆಲದಲ್ಲಿ ದಕ್ಷಿಣ ಕೊರಿಯಾದ ರಾಷ್ಟ್ರಗೀತೆ ನುಡಿಸುವುದು ಮತ್ತು ರಾಷ್ಟ್ರಧ್ವಜ ಹಾರಾಡುವುದು ಉತ್ತರ ಕೊರಿಯಾಕ್ಕೆ ಇಷ್ಟವಿರಲಿಲ್ಲ.

ಕಳೆದ ವರ್ಷ ಉತ್ತರ ಕೊರಿಯಾ ತನ್ನ ಮಹಿಳಾ ಹಾಕಿ ತಂಡ ಮತ್ತು ಟೇಕ್ವಾಂಡೊ ತಂಡವನ್ನು ದಕ್ಷಿಣ ಕೊರಿಯಾದಲ್ಲಿ ಆಡಲು ಕಳುಹಿಸಿದ್ದರೆ, ದಕ್ಷಿಣ ಕೊರಿಯಾ ತನ್ನ ಫುಟ್‌ಬಾಲ್ ತಂಡವನ್ನು ಉತ್ತರ ಕೊರಿಯಾಕ್ಕೆ ಕಳುಹಿಸಿತ್ತು.

ಹಗೆತನ, ಬಹಿಷ್ಕಾರ
1988 ರಲ್ಲಿ ದಕ್ಷಿಣ ಕೊರಿಯಾದ ಸೋಲ್‌ನಲ್ಲಿ ಆಯೋಜಿಸಿದ್ದ ಒಲಿಂಪಿಕ್ಸ್ಅನ್ನು ಉತ್ತರ ಕೊರಿಯಾ ಬಹಿಷ್ಕರಿಸಿತ್ತು. ಈ ಕೂಟವನ್ನು ಉತ್ತರ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ಆಯೋಜಿಸಬೇಕಿತ್ತು. 23 ಕ್ರೀಡೆಗಳಲ್ಲಿ 13 ಕ್ರೀಡೆಗಳು ಮತ್ತು ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭವನ್ನು ತನ್ನ ನೆಲದಲ್ಲಿ ನಡೆಸಬೇಕೆಂದು ಉತ್ತರ ಕೊರಿಯಾ ಪಟ್ಟುಹಿಡಿದಿತ್ತು. ಐಒಸಿ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ವಿಫಲವಾಗಿತ್ತು. ಇದರಿಂದ ಉತ್ತರ ಕೊರಿಯಾ ಹಿಂದೆ ಸರಿದಿತ್ತು.

ಈ ಕೂಟಕ್ಕೆ 10 ತಿಂಗಳು ಇದ್ದಾಗ (1987ರ ನವೆಂಬರ್) ಉತ್ತರ ಕೊರಿಯಾ ತನ್ನ ಬೇಹುಗಾರರ ನೆರವಿನಿಂದ ದಕ್ಷಿಣ ಕೊರಿಯಾದ ವಿಮಾನವನ್ನು ಸ್ಫೋಟಿಸಿತ್ತು. ವಿಮಾನದಲ್ಲಿದ್ದ ಎಲ್ಲ 115 ಮಂದಿ ಬಲಿಯಾಗಿದ್ದರು.
2002ರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ಮೂರನೇ ಸ್ಥಾನ ನಿರ್ಣಯಿಸುವ ಪಂದ್ಯದಲ್ಲಿ ಟರ್ಕಿ ಎದುರು ಆಡುತ್ತಿದ್ದ ದಿನದಂದೇ (ಜೂನ್ 29) ಉತ್ತರ ಕೊರಿಯಾ ನೌಕಾಪಡೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ದಕ್ಷಿಣ ಕೊರಿಯಾದ ನಾಲ್ವರು ಸೈನಿಕರು ಬಲಿಯಾಗಿದ್ದರು.

ಅಣ್ವಸ್ತ್ರ ಬಟನ್ ತನ್ನ ಮೇಜಿನ ಮೇಲಿದೆ ಎಂದು ಕಿಮ್ ಜಾಂಗ್ ಇತ್ತೀಚೆಗಷ್ಟೇ ಹೇಳಿದ್ದರು. ಚಳಿಗಾಲದ ಒಲಿಂಪಿಕ್ಸ್‌ ವೇಳೆಯೂ ಉತ್ತರ ಕೊರಿಯಾ ಏನಾದರೂ ‘ಕಿತಾಪತಿ’ ಮಾಡಬಹುದು ಎಂಬ ಸಣ್ಣ ಆತಂಕ ಎಲ್ಲರಲ್ಲೂ ಮನೆಮಾಡಿತ್ತು. ಆದರೆ ಉತ್ತರ ಕೊರಿಯಾದ ಅಥ್ಲೀಟ್‌ಗಳು ಪಾಲ್ಗೊಳ್ಳಲಿರುವ ಕಾರಣ ಆ ಭಯ ದೂರವಾಗಿದೆ. ಕೂಟ ನಿರಾತಂಕವಾಗಿ ನಡೆಯಬಹುದೆಂಬ ವಿಶ್ವಾಸ ಮೂಡಿದೆ.

ಶಾಂತಿಯ ಸಂದೇಶ ಸಾರಿದ್ದ ಸೆಲ್ಫಿ
ರಿಯೊ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯದ ಮಹಿಳಾ ಜಿಮ್ನಾಸ್ಟ್ ಲಿ ಯುನ್ ಜು ಮತ್ತು ಉತ್ತರ ಕೊರಿಯದ ಹಾಂಗ್ ಉನ್ ಜಾಂಗ್ ಅವರು ಸ್ಪರ್ಧಾತಾಣದಲ್ಲಿ ಜತೆಯಾಗಿ ನಿಂತು ಸೆಲ್ಫಿ ತೆಗೆದುಕೊಂಡಿದ್ದರು. ಈ ಚಿತ್ರ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.