ನವದೆಹಲಿ: ಭಾರತ ಬಾಕ್ಸಿಂಗ್ ತಂಡವು ಬ್ರೆಜಿಲ್ ಫೋಜ್ ಡೊ ಇಕ್ವಾಸುನಲ್ಇಲ ನಡೆದ ವಿಶ್ವ ಬಾಕ್ಸಿಂಗ್ ಕಪ್ ಟೂರ್ನಿಯಲ್ಲಿ ಒಟ್ಟು ಆರು ಪದಕಗಳನ್ನು ಜಯಿಸಿತು. ಅದರಲ್ಲಿ ಒಂದು ಚಿನ್ನವೂ ಇದೆ. ಇದರೊಂದಿಗೆ ಭಾರತ ತಂಡವು ಈ ಸ್ಪರ್ಧೆಯಲ್ಲಿ ತನ್ನ ಅಭಿಯಾನ ಮುಗಿಸಿದೆ.
ವಿಶ್ವ ಬಾಕ್ಸಿಂಗ್ ಆಯೋಜಿಸಿದ್ದ ಎಲೀಟ್ ಮಟ್ಟದ ಅಂತರರಾಷ್ಟ್ರೀಯ ಕೂಟದಲ್ಲಿ ಭಾರತ ಮೊದಲ ಬಾರಿಗೆ ಸ್ಪರ್ಧಿಸಿತ್ತು. ಟೂರ್ನಿಯಲ್ಲಿ ಹಿತೇಶ್ ಚಿನ್ನ ಗೆದ್ದ ಮೊದಲ ಭಾರತೀಯ ಬಾಕ್ಸರ್ ಎಂಬ ಗೌರವಕ್ಕೆ ಪಾತ್ರರಾದರು. ಹಿತೇಶ್ ಅವರು ಟೂರ್ನಿ ಆರಂಭಕ್ಕೂ ಮುನ್ನ ಬ್ರೇಜಿಲ್‌ನಲ್ಲಿ 10 ದಿನಗಳ ಕಾಲ ತರಬೇತಿ ಪಡೆದಿದ್ದರು.
ಶನಿವಾರ 70 ಕೆಜಿ ವಿಭಾಗದ ಫೈನಲ್‌ನಲ್ಲಿ ಇವರ ಎದುರಾಳಿ ಇಂಗ್ಲೆಂಡ್‌ನ ಒಡೆಲ್ ಕಾಮಾರಾ ಗಾಯಗೊಂಡಿದ್ದರಿಂದ ಸ್ಪರ್ಧಾ ಕಣಕ್ಕೆ ಬರಲು ಸಾಧ್ಯವಾಗಲಿಲ್ಲ. ಭಾರತದ ಇನ್ನೊಬ್ಬ ಬಾಕ್ಸರ್ ಅಭಿನಾಶ್ ಜಮಾವಾಲ್ 65 ಕೆ.ಜಿ.ವಿಭಾಗದಲ್ಲಿ ಫೈನಲ್ ತಲುಪಿದ್ದರು. ಸ್ಥಳೀಯ ಬಾಕ್ಸರ್ ಯೂರಿ ರೀಸ್ ವಿರುದ್ಧ ಅಭಿನಾಶ್ ತಮ್ಮ ಪರ ತೀರ್ಪು ಪಡೆಯುವಲ್ಲಿ ವಿಫಲರಾಗಿ ಬೆಳ್ಳಿ ಪದಕ ಗಳಿಸಿದರು.
ಭಾರತದ ನಾಲ್ವರು ಬಾಕ್ಸರ್‌ಗಳಾದ ಜಾದುಮಣಿ ಸಿಂಗ್ ಮಂದೆನ್‌ಗ್‌ಬಾಮ್ (50 ಕೆ.ಜಿ), ಮನೀಶ್ ರಾಥೋಡ್ (55 ಕೆಜಿ), ಸಚಿನ್ (60ಕೆ.ಜಿ) ಮತ್ತು ವಿಶಾಲ್ (90ಕೆ.ಜಿ) ಕಂಚಿನ ಪದಕ ಪಡೆದರು.
ವಿಶ್ವಬಾಕ್ಸಿಂಗ್ ಕಪ್‌ಗೆ 10 ಸದಸ್ಯರನೊಳಗೊಂಡ ಭಾರತ ತಂಡವನ್ನು ಕಳುಹಿಸಲಾಗಿತ್ತು. ಪ್ಯಾರಿಸ್ ಒಲಿಂಪಿಕ್ಸ್ ನಂತರ ನಡೆದ ಮೊದಲ ಅಂತರರಾಷ್ಟ್ರೀಯ ಕೂಟ ಇದಾಗಿತ್ತು. ವಿಶ್ವ ಬಾಕ್ಸಿಂಗ್‌ನಲ್ಲಿ ನೀಡಿದ ಅಮೋಘ ಪ್ರದರ್ಶನ ಭಾರತೀಯ ಬಾಕ್ಸರ್‌ಗಳ ಆತ್ಮವಿಶ್ವಾಸ ಹೆಚ್ಚಿಸಿದ್ದು ಮಾತ್ರವಲ್ಲದೇ 2028ರಲ್ಲಿ ಲಾಸ್ ಏಂಜಲೀಸ್ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಜ್ಜಾಗಲು ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.