ADVERTISEMENT

ಸ್ಪೇನ್‌ನಲ್ಲಿ ಅರಳಿದ ‘ರಷ್ಯಾ ಪ್ರತಿಭೆ’

ವರುಣ ನಾಯ್ಕರ
Published 24 ಜೂನ್ 2018, 20:16 IST
Last Updated 24 ಜೂನ್ 2018, 20:16 IST
ಡೆನಿಸ್ ಚೆರಿಶೆವ್
ಡೆನಿಸ್ ಚೆರಿಶೆವ್   

‘ಪ್ರತಿ ಫಿಫಾ ವಿಶ್ವಕಪ್‌ನಲ್ಲಿ ಶ್ರೇಷ್ಠ ಆಟಗಾರರು ಹೊರಹೊಮ್ಮುತ್ತಾರೆ. ಆಟಗಾರ ಎಷ್ಟೇ ಉತ್ತಮನಾಗಿರಬಹುದು. ಆದರೆ, ವಿಶ್ವಕಪ್‌ನಲ್ಲಿ ಆತ ತೋರುವ ಸಾಧನೆ ಇತಿಹಾಸದ ಪುಟ ಸೇರುತ್ತದೆ. ಹಾಗಾಗಿ, ಒಬ್ಬ ಉತ್ತಮ ಆಟಗಾರ ರೂಪುಗೊಳ್ಳಲು ಈ ಟೂರ್ನಿ ಮುಖ್ಯ ಪಾತ್ರ ನಿರ್ವಹಿಸುತ್ತದೆ’

ಫುಟ್‌ಬಾಲ್ ದಂತಕತೆ, ಬ್ರೆಜಿಲ್‌ನ ಪೆಲೆ ಅವರು ಹೇಳಿದ ಮಾತು ಇದು. ಹೌದು, ಕೋಟ್ಯಂತರ ಜನ ವೀಕ್ಷಿಸುವ, ಕಾತರದಿಂದ ಎದುರು ನೋಡುವ ವಿಶ್ವಕಪ್ ಟೂರ್ನಿಯಲ್ಲಿ ತನ್ನ ದೇಶವನ್ನು ಪ್ರತಿನಿಧಿಸಬೇಕೆಂಬ ಆಕಾಂಕ್ಷೆ, ಪ್ರತಿಷ್ಠೆ ಹಾಗೂ ಅಭಿಮಾನದ ಸಂಕೇತವಾದ ವಿಶ್ವಕಪ್ ಟ್ರೋಫಿಯನ್ನು ತನ್ನ ದೇಶಕ್ಕೆ ಗೆಲ್ಲಿಸಿಕೊಡಬೇಕು, ಅದರಲ್ಲಿ ತಾನು ಮಹತ್ವದ ಪಾತ್ರ ವಹಿಸಬೇಕು ಎಂಬ ಮಹದಾಸೆ ಪ್ರತಿಯೊಬ್ಬ ಫುಟ್‌ಬಾಲ್ ಆಟಗಾರನಲ್ಲಿರುತ್ತದೆ. ಇದರಿಂದಾಗಿಯೇ ವಿಶ್ವಕಪ್ ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋದಂತೆ ಅಮೋಘ ಸಾಧನೆ ಮಾಡಿದ ಅನೇಕ ಆಟಗಾರರು ಕಣ್ಣಿಗೆ ಬೀಳುತ್ತಾರೆ.

ಈ ಆಟಗಾರರ ಸಾಲಿನಲ್ಲಿ ಕಾಣಬಹುದಾದ ಇನ್ನೊಂದು ಹೆಸರು ರಷ್ಯಾದ ಡೆನಿಸ್ ಚೆರಿಶೆವ್. ಈ ಬಾರಿಯ ವಿಶ್ವಕಪ್‌ನ ಆತಿಥೇಯ ರಾಷ್ಟ್ರದ ಈ ಆಟಗಾರ ಕಳೆದ ಎರಡು ವಾರಗಳಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಮೂರು ಗೋಲು ದಾಖಲಿಸಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ರಷ್ಯಾದ ಆಟಗಾರ ಎಂಬ ಹೆಗ್ಗಳಿಕೆಗೂ ಡೆನಿಸ್ ಪಾತ್ರರಾಗಿದ್ದಾರೆ.

ADVERTISEMENT

ರಷ್ಯಾ ಈಗಾಗಲೇ ಪ್ರಿ ಕ್ವಾರ್ಟರ್ ಹಂತ ತಲುಪಿದೆ. ಸದ್ಯ ಆ ತಂಡದ ತಾರಾ ಆಟಗಾರನಾಗಿ ರೂಪುಗೊಂಡಿರುವ ಡೆನಿಸ್, ಈ ವಿಶ್ವಕಪ್‌ನಲ್ಲಿ ಮಿಂಚುವ ಬಗ್ಗೆ ಫುಟ್‌ಬಾಲ್ ಪಂಡಿತರಾಗಲಿ, ಅಭಿಮಾನಿ ಯಾಗಲಿ ಊಹಿಸಿರ ಲಿಲ್ಲ. ಅಂದಹಾಗೆ ಸೌದಿ ಅರೇ ಬಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಎರಡು ಗೋಲು ಗಳಿಸಿದ ಅಟ್ಯಾಕಿಂಗ್ ವಿಭಾಗದ ಈ ಆಟಗಾರ ಆ ಪಂದ್ಯದಲ್ಲಿ ಅಂಗಳಕ್ಕಿಳಿದಿದ್ದು ಬದಲಿ ಆಟಗಾರನಾಗಿ!

ಯಾರೀ ಆಟಗಾರ?: ಡೆನಿಸ್ ದಿಮಿಟ್ರಿ ಚೆರಿಶೆವ್ ಹುಟ್ಟಿದ್ದು ರಷ್ಯಾದಲ್ಲಿ. ತಂದೆ ದಿಮಿಟ್ರಿ ಚೆರಿಶೆವ್ 90ರ ದಶಕದಲ್ಲಿ ರಷ್ಯಾ ತಂಡದಲ್ಲಿ ಆಡಿದವರು. ಹಾಗೆಯೇ ವಿಶ್ವಖ್ಯಾತ ರಿಯಲ್ ಮ್ಯಾಡ್ರಿಡ್‌ನ ಯುವ ಆಟಗಾರರ ತಂಡದ ತರಬೇತುದಾರರಾಗಿದ್ದವರು. ಡೆನಿಸ್ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ತಂದೆ ಸ್ಪೇನ್‌ಗೆ ಕಳಿಸುತ್ತಾರೆ.

ಇದೇ ಕಾರಣಕ್ಕೆ ಡೆನಿಸ್ ಇಲ್ಲಿಯವರೆಗೂ ಸ್ಪೇನ್‌ನ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಮಾತ್ರ ಆಡಿದ್ದಾರೆ. ಸ್ಪೇನ್‌ನಲ್ಲಿನ ಫುಟ್‌ಬಾಲ್ ಪ್ರೀತಿಯ ವಾತಾವರಣದಿಂದಾಗಿಯೇ ಅಲ್ಲಿನ ಲಾ ಲಿಗಾದಂತಹ ಶ್ರೇಷ್ಠ ಫುಟ್‌ಬಾಲ್ ಸಂಸ್ಥೆ ಕಲಿಸಿಕೊಡುವ ಆಟದ ಶೈಲಿಯನ್ನು ಅವರು ರೂಢಿ ಮಾಡಿಕೊಂಡಿದ್ದಾರೆ.

ಕಾಲ್ಚೆಂಡಿನ ಆಟದ ಬಗೆಗಿನ ಪ್ರೀತಿ ಡೆನಿಸ್ ಅವರಲ್ಲಿ ಚಿಕ್ಕ ವಯಸ್ಸಿನಲ್ಲೇ ಕಾಣಿಸಿ ಕೊಂಡಿದ್ದರಿಂದಾಗಿ ಅವರು ಸ್ಪೋರ್ಟಿಂಗ್ ಗಿಜೋನ್ ಹಾಗೂ ಬರ್ಗೋಸ್ ಕ್ಲಬ್‌ಗಳಲ್ಲಿ ಅವಕಾಶ ಪಡೆದರು. ಫುಟ್‌ಬಾಲ್ ಜಗತ್ತಿನಲ್ಲಿ ಇವರು ಭರವಸೆಯ ಆಟಗಾರ ಆಗಲಿದ್ದಾರೆ ಎಂದು ಸಹ ಆಟಗಾರರು ಆಗಲೇ ನುಡಿ ದಿದ್ದರು.

ಜಗತ್ತಿನ ಶ್ರೇಷ್ಠ ಫುಟ್‌ಬಾಲ್ ಕ್ಲಬ್‌ಗಳಲ್ಲಿ ಒಂದಾದ ‘ರಿಯಲ್ ಮ್ಯಾಡ್ರಿಡ್’ನಲ್ಲಿ ಆಡುವ ಅವಕಾಶ ಗಳಿಸಿಕೊಂಡ ಡೆನಿಸ್, ಅಲ್ಲಿ ತರಬೇತಿ ಪಡೆದಿದ್ದು ಫ್ರಾನ್ಸ್‌ನ ಶ್ರೇಷ್ಠ ಆಟಗಾರ ಜಿನೆದಿನ್ ಜಿದಾನ್ ಅವರಿಂದ. ರಿಯಲ್ ಮ್ಯಾಡ್ರಿಡ್ ‘ಬಿ’ ತಂಡದ ಪ್ರಮುಖ ಆಟಗಾರನೆನಿಸಿಕೊಂಡ ಚೆರಿಶೆವ್ ಆಡಿದ 109 ಪಂದ್ಯಗಳಲ್ಲಿ 22 ಗೋಲು ಗಳಿಸಿದರು.

ನಂತರ ರಷ್ಯಾ ತಂಡಕ್ಕೆ ಆಯ್ಕೆಯಾದರೂ ಅವರಿಗೆ ಆಡಲು ಅವಕಾಶ ಸಿಕ್ಕಿದ್ದು ಬೆರಳೆ ಣಿಕೆಯ ಪಂದ್ಯಗಳಲ್ಲಿ ಮಾತ್ರ. 2013ರಿಂದ 2016ರವರೆಗಿನ ಅವಧಿಯಲ್ಲಿ ಗಾಯದ ಕಾರಣದಿಂದಲೇ ಅವರು ಫುಟ್‌ಬಾಲ್‌ನಿಂದ ದೂರ ಉಳಿಯಬೇಕಾಯಿತು.

ಆದರೆ, ಕಳೆದೆರೆಡು ವರ್ಷಗಳಲ್ಲಿ ಮತ್ತೆ ಲಯಕ್ಕೆ ಮರಳಿರುವ ಅವರು ತಾಯಿ ನಾಡಿನಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಮೋಡಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.