ADVERTISEMENT

ಕುಸ್ತಿ: ಬೆಳಗಾವಿಯ ನಾಗರಾಜು ‘ಸುತ್ತೂರು ಕೇಸರಿ’, ಮಂಜು ‘ಸುತ್ತೂರು ಕುಮಾರ’

ಕುಸ್ತಿ : ಶ್ರೀರಂಗಪಟ್ಟಣದ ಮಂಜು ‘ಸುತ್ತೂರು ಕುಮಾರ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 19:08 IST
Last Updated 22 ಜನವರಿ 2023, 19:08 IST
‘ಸುತ್ತೂರು ಕೇಸರಿ’ ಪ್ರಶಸ್ತಿ ಪಡೆದ ಬೆಳಗಾವಿಯ ಪೈಲ್ವಾನ್ ನಾಗರಾಜು
‘ಸುತ್ತೂರು ಕೇಸರಿ’ ಪ್ರಶಸ್ತಿ ಪಡೆದ ಬೆಳಗಾವಿಯ ಪೈಲ್ವಾನ್ ನಾಗರಾಜು   

ನಂಜನಗೂಡು (ಮೈಸೂರು ಜಿಲ್ಲೆ): ಎರಡು ವರ್ಷಗಳ ನಂತರ ರಂಗೇರಿದ್ದ ಸುತ್ತೂರು ಕುಸ್ತಿ ಅಖಾಡದಲ್ಲಿ ಕುಸ್ತಿಪ್ರಿಯರ ಶಿಳ್ಳೆ– ಚಪ್ಪಾಳೆಗಳ ನಡುವೆ ಬೆಳಗಾವಿಯ ನಾಗರಾಜು ಹಾಗೂ ಶ್ರೀರಂಗಪಟ್ಟಣದ ಮಂಜು ಕ್ರಮವಾಗಿ ‘ಸುತ್ತೂರು ಕೇಸರಿ’ ಹಾಗೂ ‘ಸುತ್ತೂರು ಕುಮಾರ’ ಪ್ರಶಸ್ತಿ ಗೆದ್ದರು.

ಸುತ್ತೂರು ಉಚಿತ ಶಾಲೆಯ ಮೈದಾನದ ಅಖಾಡದಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ 41ನೇ ರಾಷ್ಟಮಟ್ಟದ ಸುತ್ತೂರು ಕುಸ್ತಿ ಸ್ಪರ್ಧೆಯ ಹಣಾಹಣಿಯಲ್ಲಿ ಬೆಳಗಾವಿ ನಾಗರಾಜು ಹರಿಯಾಣದ ಪೈಲ್ವಾನ್‌ ಬಂಟಿ ಅವರನ್ನು ಮಣಿಸಿದರು.

ಒಂದು ಗಂಟೆಗೂ ಹೆಚ್ಚು ಜಿದ್ದಾಜಿದ್ದಿ ನಡೆದರೂ ಫಲಿತಾಂಶ ದೊರೆಯಲಿಲ್ಲ. ನಂತರ 10 ನಿಮಿಷದ ಪಾಯಿಂಟ್‌ ಕುಸ್ತಿಯಲ್ಲಿ 1–0 ಅಂತರದಲ್ಲಿ ನಾಗರಾಜು ಅವರು ಗೆದ್ದು ‘ಸುತ್ತೂರು ಕೇಸರಿ’ ಎನಿಸಿದರು. ಗದೆ, ಪಾರಿತೋಷಕ ಹಾಗೂ ₹25ಸಾವಿರ ಬಹುಮಾನ ತಮ್ಮದಾಗಿಸಿಕೊಂಡರು.

ADVERTISEMENT

ಶ್ರೀರಂಗಪಟ್ಟಣದ ಮಂಜು ಹಾಗೂ ಮೈಸೂರಿನ ರಮ್ಮನಹಳ್ಳಿ ರವಿ ಎರಡೂವರೆ ಗಂಟೆ ಕಾದಾಡಿದರೂ ಫಲಿತಾಂಶ ಸಿಗಲಿಲ್ಲ. ನಂತರ ನಡೆದ ಪಾಯಿಂಟ್‌ ಕುಸ್ತಿಯಲ್ಲಿ 7–6 ಅಂತರದಲ್ಲಿ ರೋಚಕ ಜಯ ಸಾಧಿಸಿದ ಮಂಜು, ‘ಸುತ್ತೂರು ಕುಮಾರ್‌’ ಆದರು.

60 ಜೊತೆ ಕುಸ್ತಿಪಟುಗಳು ಸ್ಪರ್ಧಿಸಿದ್ದರು. ತೀರ್ಪುಗಾರರಾಗಿ ಪೈಲ್ವಾನ್ ಕೆಂಪೇಗೌಡ ಅಮೃತ್ ಪುರೋಹಿತ್, ರವಿ ಬನ್ನೂರು, ಸಿದ್ದರಾಜು ನಂಜನಗೂಡು, ಮಲ್ಲುಸ್ವಾಮಿ, ಅಶೋಕಪುರಂ ಕೃಷ್ಣ, ಬಸ್ತಿಪುರ ದೇವರಾಜು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.