ADVERTISEMENT

ಹಲೆಪ್‌ ಪರಾಭವ

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಅನಿಸಿಮೊವಾ, ಬಾರ್ಟಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 20:00 IST
Last Updated 6 ಜೂನ್ 2019, 20:00 IST
ಚೆಂಡು ಹಿಂದಿರುಗಿಸುತ್ತಿರುವ ಅನಿಸಿಮೊವಾ– ಎಫ್‌ಪಿ ಚಿತ್ರ
ಚೆಂಡು ಹಿಂದಿರುಗಿಸುತ್ತಿರುವ ಅನಿಸಿಮೊವಾ– ಎಫ್‌ಪಿ ಚಿತ್ರ   

ಪ್ಯಾರಿಸ್‌ (ಎಎಫ್‌ಪಿ): ಅಮೆರಿಕದ ಯುವ ಆಟಗಾರ್ತಿ ಅಮಂಡಾ ಅನಿಸಿಮೊವಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಸಿಮೊನಾ ಹಲೆಪ್‌ ಅವರಿಗೆ ಆಘಾತ ನೀಡಿದರು. ಗುರುವಾರ ನಡೆದ ಪಂದ್ಯದಲ್ಲಿ 6–2, 6–4 ಸೆಟ್‌ಗಳಿಂದ ಗೆದ್ದ ಅನಿಸಿಮೊವಾ ಸೆಮಿಫೈನಲ್‌ಗೆ ಪ್ರವೇಶಿಸಿದರು.

ಮೂರನೇ ಶ್ರೇಯಾಂಕದ ರೊಮೇನಿಯಾ ಆಟಗಾರ್ತಿ ಹಲೆಪ್‌, ಬೆಲ್ಜಿಯಂನ ಜಸ್ಟಿನ್‌ ಹೆನಿನ್‌ ನಂತರ, ಫ್ರೆಂಚ್‌ ಓಪನ್‌ ಪ್ರಶಸ್ತಿಯನ್ನು ಉಳಿಸಿಕೊಂಡ ಮೊದಲ ಆಟಗಾರ್ತಿ ಎನಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದರು. ಆದರೆ ಅವರ ಕನಸು ಭಗ್ನಗೊಂಡಿತು. ಹೆನಿನ್‌ ಸತತ ಮೂರು ಬಾರಿ ಇಲ್ಲಿ ಪ್ರಶಸ್ತಿ ಗೆದ್ದಿದ್ದರು. ಪಂದ್ಯದಲ್ಲಿ ಎಸಗಿದ 17 ಅನಗತ್ಯ ತಪ್ಪುಗಳು ಹಲೆಪ್‌ ಅವರಿಗೆ ಮುಳುವಾದವು.

ಇನ್ನೊಂದೆಡೆ ಅನಿಸಿಮೊವಾ ಅವರು ಸೆರೆನಾ ವಿಲಿಯಮ್ಸ್‌ ನಂತರ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ನಾಲ್ಕರ ಘಟ್ಟ ಪ್ರವೇಶಿಸಿದ ಅಮರಿಕದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡರು.

ADVERTISEMENT

ಮಹಿಳಾ ಸಿಂಗಲ್ಸ್‌ನ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅವರು 14ನೇ ಶ್ರೇಯಾಂಕದ ಮ್ಯಾಡಿಸನ್‌ ಕೀಸ್‌ ಅವರಿಗೆ 6–3, 7–5 ಸೆಟ್‌ಗಳಿಂದ ಸೋಲಿನ ರುಚಿ ತೋರಿಸಿದರು. ಬಾರ್ಟಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಸೆಮಿಫೈನಲ್‌ ತಲುಪಿದ ಸಂಭ್ರಮ ಆಚರಿಸಿದರು.

ಸುಸಾನ್‌ ಲೆಂಗ್‌ಲೆನ್‌ ಅಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಸರ್ವ್‌ಗಳ ಮೂಲಕ ಗಮನಸೆಳೆದ ಬಾರ್ಟಿ ಸಮಾಧಾನಕರ ಜಯ ದಾಖಲಿಸಿದರು.

10 ವರ್ಷಗಳ ಬಳಿಕ ಇಬ್ಬರು ಯುವ ಆಟಗಾರ್ತಿಯರು ಗ್ರ್ಯಾನ್‌ಸ್ಲಾಮ್‌ವೊಂದರ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಬಾರ್ಟಿ ಅವರು ಸೆಮಿಫೈನಲ್‌ ಪಂದ್ಯದಲ್ಲಿ ಅನಿಸಿಮೊವಾ ಅವರಿಗೆ ಮುಖಾಮುಖಿಯಾಗಲಿದ್ದಾರೆ.ಸೆಮಿಫೈನಲ್‌ ಪಂದ್ಯಗಳು ಶುಕ್ರವಾರ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.