ADVERTISEMENT

ಟೆನಿಸ್‌: ಆರಾಧ್ಯ, ಅನ್ವಿ ಮುಡಿಗೆ ಚಾಂಪಿಯನ್ ಪಟ್ಟ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 14:26 IST
Last Updated 8 ಸೆಪ್ಟೆಂಬರ್ 2021, 14:26 IST
ಪ್ರಶಸ್ತಿಯೊಂದಿಗೆ ಆರಾಧ್ಯ ದ್ವಿವೇದಿ ಮತ್ತು ಅನ್ವಿ ಪುನಗಂಟಿ
ಪ್ರಶಸ್ತಿಯೊಂದಿಗೆ ಆರಾಧ್ಯ ದ್ವಿವೇದಿ ಮತ್ತು ಅನ್ವಿ ಪುನಗಂಟಿ   

ಬೆಂಗಳೂರು: ಆರಾಧ್ಯ ದ್ವಿವೇದಿ ಮತ್ತು ಅನ್ವಿ ಪುನಗಂಟಿ ಅವರು ರಾಜ್ಯ ಲಾನ್ ಟೆನಿಸ್ ಸಂಸ್ಥೆ ಆಯೋಜಿಸಿರುವ ಎಐಟಿಎ ಸಿಎಸ್‌–3 ಟೂರ್ನಿಯ 14ವರ್ಷದೊಳಗಿನವರ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು‌.

ಬಾಲಕರ ವಿಭಾಗದ ಫೈನಲ್‌ನಲ್ಲಿ ಆರಾಧ್ಯ 6-4, 6-3ರಲ್ಲಿ ಸಂಚಿತ್ ಸುಧೀರ್ ರಾಜು ವಿರುದ್ಧ ಗೆಲುವು ಸಾಧಿಸಿದರು. ಬೆಳಿಗ್ಗೆ ನಡೆದ ಸೆಮಿಫೈನಲ್‌ನಲ್ಲಿ ಸಂಚಿತ್‌, ಮೂರನೇ ಶ್ರೇಯಾಂಕದ ಪ್ರಜ್ವಲ್ ಹೆಗ್ಗೆರೆ ವಿರುದ್ಧ ಜಯ ಸಾಧಿಸಿದ್ದರು. ಆದರೆ ಫೈನಲ್‌ನಲ್ಲಿ ಆರಾಧ್ಯ ಸಂಪೂರ್ಣ ಮೇಲುಗೈ ಸಾಧಿಸಿದರು.

ಮೊದಲ ಸೆಟ್‌ನ ಆರಂಭದಲ್ಲಿ 1–2ರ ಹಿನ್ನಡೆಯಲ್ಲಿದ್ದ ಸಂಚಿತ್‌ ನಂತರ 4–3ರ ಮುನ್ನಡೆ ಸಾಧಿಸಿದರು. ಆದರೆ ಆ ಮೇಲೆ ಆರಾಧ್ಯ ಸತತ ಮೂರು ಗೇಮ್‌ಗಳನ್ನು ಗೆದ್ದು ಸೆಟ್ ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಸೆಟ್‌ನಲ್ಲಿ ಆರಂಭದಲ್ಲೇ ಆರಾಧ್ಯ 5–2ರ ಮುನ್ನಡೆ ಗಳಿಸಿದರು. ಸಿಲಿಕಾನ್ ಸಿಟಿ ಅಕಾಡೆಮಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯಾಗಿರುವ ಅವರು ನಂತರ ಒಂದು ಗೇಮ್ ಬಿಟ್ಟುಕೊಟ್ಟರೂ ಛಲ ಬಿಡದೆ ಕಾದಾಡಿ ಸೆಟ್‌ ಮತ್ತು ಪಂದ್ಯ ಗೆದ್ದುಕೊಂಡರು. ಇದು 14 ವರ್ಷದೊಳಗಿನವರ ವಿಭಾಗದಲ್ಲಿ ಅವರ ಎರಡನೇ ಪ್ರಶಸ್ತಿಯಾಗಿದೆ.

ಬಾಲಕಿಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಅನ್ವಿ ಒಂದು ಗೇಮ್‌ ಕೂಡ ಬಿಟ್ಟುಕೊಡದೆ 6–0, 6–0ರಲ್ಲಿಅದಿತಿ ಬಾಲಮುರುಘನ್‌ ವಿರುದ್ಧ ಜಯಿಸಿ ಪ್ರಶಸ್ತಿ ಗೆದ್ದುಕೊಂಡರು. ಡಿಪಿಎಸ್‌ ದಕ್ಷಿಣ ಶಾಲೆಯ 12ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅವರಿಗೂ ಈ ವಯೋಮಾನದ ವಿಭಾಗದಲ್ಲಿ ಇದು ಎರಡನೇ ಪ್ರಶಸ್ತಿಯಾಗಿದೆ.

ಫಲಿತಾಂಶಗಳು

14 ವರ್ಷದೊಳಗಿನ ಬಾಲಕರ ವಿಭಾಗದ ಫೈನಲ್‌: ಆರಾಧ್ಯ ದ್ವಿವೇದಿ ಅವರಿಗೆ ಸಂಚಿತ್ ರಾಜು ವಿರುದ್ಧ 6-4, 6-3ರಲ್ಲಿ ಜಯ. ಸೆಮಿಫೈನಲ್‌: ಆರಾಧ್ಯ ದ್ವಿವೇದಿಗೆ ನಿಖಿಲ್‌ ಶ್ರೀನಿವಾಸ್‌ ವಿರುದ್ಧ, ಸಂಚಿತ್‌ ರಾಜುಗೆ ಪ್ರಜ್ವಲ್ ಹೆಗ್ಗೆರೆ ವಿರುದ್ಧ ಜಯ.

ಬಾಲಕಿಯರ ವಿಭಾಗದ ಫೈನಲ್‌: ಅನ್ವಿ ಪುನಗಂಟಿಗೆ ಅದಿತಿ ಬಾಲಮುರುಘನ್‌ ವಿರುದ್ಧ 6-0, 6-0 ಅಂತರದಲ್ಲಿ ಜಯ. ಸೆಮಿಫೈನಲ್‌ನಲ್ಲಿ ಅನ್ವಿಗೆ ಅದಿತಿ ರಂಗಾ ವಿರುದ್ಧ, ಅದಿತಿಗೆ ಕಾವ್ಯಾ ಸರವಣನ್ ಎದುರು ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.