ADVERTISEMENT

ಅರ್ಜುನ ಪ್ರಶಸ್ತಿಗೆ ಶರಣ್‌, ಅಂಕಿತಾ ಶಿಫಾರಸು ಸಾಧ್ಯತೆ

ಪಿಟಿಐ
Published 18 ಮೇ 2020, 4:54 IST
Last Updated 18 ಮೇ 2020, 4:54 IST
 ಅಂಕಿತಾ,ಶರಣ್‌
ಅಂಕಿತಾ,ಶರಣ್‌   

ನವದೆಹಲಿ: ಏಷ್ಯನ್‌ ಗೇಮ್ಸ್‌ ಪದಕ ವಿಜೇತರಾದ ಅಂಕಿತಾ ರೈನಾ ಹಾಗೂ ದಿವಿಜ್‌ ಶರಣ್‌ ಅವರನ್ನು ರಾಷ್ಟ್ರೀಯ ಟೆನಿಸ್‌ ಫೆಡರೇಷನ್,‌ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಡೇವಿಸ್‌ ಕಪ್‌ ತಂಡದ ಕೋಚ್‌ ಆಗಿದ್ದ ನಂದನ್‌ ಬಾಲ್‌ ಅವರನ್ನು ಧ್ಯಾನ್‌ಚಂದ್‌ ಪುರಸ್ಕಾರಕ್ಕೆ ಹೆಸರಿಸಲು ಚಿಂತನೆ ನಡೆಸಿದೆ.

27ರ ಪ್ರಾಯದ ಅಂಕಿತಾ ಅವರು 2018ರ ಏಷ್ಯನ್‌ ಗೇಮ್ಸ್‌ನಲ್ಲಿ ಸಿಂಗಲ್ಸ್‌ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು. ಫೆಡ್‌ ಕಪ್‌ ಟೂರ್ನಿಯಲ್ಲಿ ಭಾರತ ತಂಡವು ಮೊದಲ ಬಾರಿ ವಿಶ್ವ ಗುಂಪು ಪ್ಲೇ ಆಫ್‌ಗೆ ಅರ್ಹತೆ ಗಳಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು.

ಶರಣ್‌ ಅವರು 2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ಕೂಟದ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಜೊತೆಗೂಡಿ ಚಿನ್ನದ ಪದಕ ಒಲಿಸಿಕೊಂಡಿದ್ದರು. 2019ರ ಅಕ್ಟೋಬರ್‌ನಲ್ಲಿ ಅವರು ಭಾರತದ ಅಗ್ರ ರ‍್ಯಾಂಕಿನ ಡಬಲ್ಸ್‌ ಆಟಗಾರ ಎನಿಸಿಕೊಂಡಿದ್ದರು.

ADVERTISEMENT

‘ಅರ್ಜುನ ಪ್ರಶಸ್ತಿಗೆ ಇವರಿಬ್ಬರೂ (ಶರಣ್‌ ಹಾಗೂ ಅಂಕಿತಾ) ಹೆಚ್ಚು ಅರ್ಹರು. ಅವರನ್ನು ಶಿಫಾರಸು ಮಾಡುತ್ತೇವೆ’ ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಷನ್‌ನ (ಎಐಟಿಎ) ಪ್ರಧಾನ ಕಾರ್ಯದರ್ಶಿ ಹಿರಣ್ಮಯ್‌ ಚಟರ್ಜಿ ಹೇಳಿದ್ದಾರೆ.

2018ರಲ್ಲಿ ಬೋಪಣ್ಣ ಅವರು ಈ ಪುರಸ್ಕಾರಕ್ಕೆ ಭಾಜನರಾಗಿದ್ದರು.

ನಂದನ್‌ ಅವರ ಹೆಸರನ್ನು ಧ್ಯಾನ್‌ಚಂದ್‌ ಪ್ರಶಸ್ತಿಗೆ ಶಿಫಾರಸು ಮಾಡಬೇಕೋ ಅಥವಾ ‘ದ್ರೋಣಾಚಾರ್ಯ’ಕ್ಕೋ ಎಂದು ಎಐಟಿಎ ಚಿಂತನೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.