ಲಂಡನ್: ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಅವರು ಮೊದಲ ಸುತ್ತಿನಲ್ಲಿ ಫ್ಯಾಬಿಯೊ ಫಾಗ್ನಿನಿ ಅವರನ್ನು ಎದುರಿಸುವ ಮೂಲಕ ವಿಂಬಲ್ಡನ್ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನ ಆರಂಭಿಸಲಿದ್ದಾರೆ.
ಸೋಮವಾರ ಆರಂಭವಾಗುವ ಈ ಪ್ರತಿಷ್ಠಿತ ಹುಲ್ಲುಹಾಸಿನ ಗ್ರ್ಯಾನ್‌ಸ್ಲಾಮ್ ಟೂರ್ನಿಗೆ ಶುಕ್ರವಾರ ಡ್ರಾ ಎತ್ತಲಾಯಿತು. ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರಿಗೆ ಸೆಮಿಫೈನಲ್‌ನಲ್ಲಿ ನೊವಾಕ್ ಜೊಕೊವಿಚ್ ಸಂಭವನೀಯ ಎದುರಾಳಿ ಆಗಲಿದ್ದಾರೆ
ಮಹಿಳೆಯರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಬಾರ್ಬೊರಾ ಕ್ರಾಚಿಕೋವಾ ಅವರು ಸೆಂಟರ್‌ಕೋರ್ಟ್‌ನಲ್ಲಿ ನಡೆಯುವ ಮೊದಲ ಸುತ್ತಿನ ಪಂದ್ಯದಲ್ಲಿ ಉದಯೋನ್ಮುಖ ತಾರೆ ಅಲೆಕ್ಸಾಂಡರ್ ಇಯಾಲಾ ಅವರನ್ನು ಎದುರಿಸಲಿದ್ದಾರೆ. ತೊಡೆಯ ನೋವಿನಿಂದ ಬಳಲುತ್ತಿರುವ ಬಾರ್ಬೊರಾ ಆಡುವುದು ಖಚಿತವಾಗಿಲ್ಲ. 20 ವರ್ಷ ವಯಸ್ಸಿನ ಇಯಾಲಾ ಫಿಲಿಪೀನ್ಸ್ ದೇಶದ ಆಟಗಾರ್ತಿ.
22 ವರ್ಷ ವಯಸ್ಸಿನ ಅಲ್ಕರಾಜ್ ಅವರು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಈ ಹಿಂದಿನ ಎರಡು ಫೈನಲ್‌ಗಳಲ್ಲಿ ಜೊಕೊವಿಚ್ ಅವರನ್ನು ಸೋಲಿಸಿದ್ದಾರೆ. ಸತತ 18 ಪಂದ್ಯಗಳಲ್ಲಿ ಗೆದ್ದಿದ್ದಾರೆ.
ಓಪನ್ ಯುಗ (1968) ಆರಂಭವಾದ ಮೇಲೆ ಕನಿಷ್ಠ ಮೂರು ಸತತ ಪ್ರಶಸ್ತಿಗಳನ್ನು ಗೆದ್ದ ಕೇವಲ ಐದನೇ ಆಟಗಾರ ಎನಿಸುವ ಗುರಿ ಅಲ್ಕರಾಜ್ ಅವರದು. ಬ್ಯೋನ್ ಬೋರ್ಗ್ (ಸ್ವೀಡನ್), ಪೀಟ್ ಸಾಂಪ್ರಸ್ (ಅಮೆರಿಕ), ರೋಜರ್ ಫೆಡರರ್ (ಸ್ವಿಜರ್ಲೆಂಡ್) ಮತ್ತು ನೊವಾಕ್ ಜೊಕೊವಿಚ್ (ಸರ್ಬಿಯಾ) ಮೊದಲ ನಾಲ್ವರು.
ಸ್ಪೇನ್‌ನ ಆಟಗಾರ, 38 ವರ್ಷ ವಯಸ್ಸಿನ ಫಾಗ್ನಿನಿ ವಿರುದ್ಧ 2–0 ಗೆಲುವಿನ ದಾಖಲೆ ಹೊಂದಿದ್ದಾರೆ.
ವಿಂಬಲ್ಡನ್‌ನಲ್ಲಿ ಮೊದಲ ಬಾರಿ ಟ್ರೋಫಿ ಎತ್ತುವ ಬಯಕೆ ಹೊಂದಿರುವ ಸಿನ್ನರ್ ಅವರು ಸೆಮಿಫೈನಲ್ ತಲುಪಿದಲ್ಲಿ, ಏಳು ಬಾರಿಯ ಚಾಂಪಿಯನ್ ಜೊಕೊವಿಚ್ ಸಂಭವನೀಯ ಎದುರಾಳಿ ಆಗಬಹುದು.
ಹೋದ ತಿಂಗಳು ಫ್ರೆಂಚ್ ಓಪನ್ ಫೈನಲ್‌ನಲ್ಲಿ ಅಲ್ಕರಾಜ್ ಅವರಿಗೆ ರೋಚಕ ಹಣಾಹಣಿಯಲ್ಲಿ ಸೋತಿದ್ದ ಇಟಲಿಯ ಸಿನ್ನರ್ ಮೊದಲ ಸುತ್ತಿನಲ್ಲಿ ಸ್ವದೇಶದ ಲುಕಾ ನಾರ್ಡಿ ಅವರನ್ನು ಎದುರಿಸಲಿದ್ದಾರೆ.
2018ರ ನಂತರ ಇಲ್ಲಿ ಮೊದಲ ಬಾರಿ ಕನಿಷ್ಠ ಶ್ರೇಯಾಂಕ (ಆರನೇ) ಪಡೆದಿರುವ ಜೊಕೊವಿಚ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ ಆಡಲಿದ್ದಾರೆ. ಜೊಕೊ ಅವರು ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಅವರು ಈ ಮೈಲಿಗಲ್ಲು ತಲುಪಿದರೆ, ಆಸ್ಟ್ರೇಲಿಯಾದ ಆಟಗಾರ್ತಿ ಮಾರ್ಗರೆಟ್ ಕೋರ್ಟ್ ಅವರ ಸಾಧನೆ ಸರಿಗಟ್ಟಿದಂತೆ ಆಗಲಿದೆ. ಅಷ್ಟೇ ಅಲ್ಲ; ರೋಜರ್ ಫೆಡರರ್ ಅವರ ಎಂಟು ಸಿಂಗಲ್ಸ್ ಪ್ರಶಸ್ತಿಗಳ ಸಾಧನೆ ಹಂಚಿಕೊಳ್ಳಲೂ ಅಗಲಿದೆ.
ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಮೊದಲ ಸುತ್ತಿನಲ್ಲಿ ಫ್ರಾನ್ಸ್‌ನ ಆರ್ಥರ್ ರಿಂಡರ್‌ನೆಕ್ ಅವರನ್ನು ಎದುರಿಸಲಿದ್ದಾರೆ. ಅವರಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಅಮೆರಿಕದ ಟೇಲರ್ ಫ್ರಿಟ್ಝ್ ಎದುರಾಗಬಹುದು.
ಅಗ್ರ ಶ್ರೇಯಾಂಕದ ಆಟಗಾರ್ತಿ ಅರಿನಾ ಸಬಲೆಂಕಾ ಅವರಿಗೆ ಕೆನಡಾದ ಕ್ವಾಲಿಫೈಯರ್ ಕಾರ್ಸನ್ ಬ್ರಾನ್‌ಸ್ಟೀನ್ ಮೊದಲ ಸುತ್ತಿನ ಎದುರಾಳಿ. ಮೂರು ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಆಗಿರುವ ಬೆಲರೂಸ್‌ನ ಆಟಗಾರ್ತಿ ಈ ವರ್ಷ ಆಸ್ಟ್ರೇಲಿಯಾ ಮತ್ತು ಫ್ರೆಂಚ್ ಓಪನ್ ಫೈನಲ್‌ನಲ್ಲಿ ಸೋತಿದ್ದಾರೆ.
ರೋಲಂಡ್ ಗ್ಯಾರೋಸ್‌ನಲ್ಲಿ ಸಬಲೆಂಕಾ ವಿರುದ್ಧ ಗೆದ್ದಿರುವ ಕೊಕೊ ಗಾಫ್ ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದು ಮೊದಲ ಸುತ್ತಿನಲ್ಲಿ ಡಯಾನಾ ಯಾಸ್ಟ್ರೆಮ್‌ಸ್ಕಾ ಎದುರು ಆಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.