ನ್ಯೂಯಾರ್ಕ್ (ಎಎಫ್‌ಪಿ): ಬೆನ್ನುನೋವನ್ನು ಮೀರಿನಿಂತ ಅನುಭವಿ ನೊವಾಕ್ ಜೊಕೊವಿಚ್ ಅವರು ನಾಲ್ಕು ಸೆಟ್‌ಗಳ ಸೆಣಸಾಟದಲ್ಲಿ ಬ್ರಿಟನ್‌ನ ಕ್ಯಾಮ್ ನೋರಿ ಅವರನ್ನು ಮಣಿಸಿ 1991ರ ನಂತರ ಅಮೆರಿಕ ಓಪನ್ 16ರ ಸುತ್ತನ್ನು ತಲುಪಿದ ಅತಿ ಹಿರಿಯ ಆಟಗಾರ ಎನಿಸಿದರು.
ಆ ವರ್ಷ ಅಮೆರಿಕದ ಜಿಮ್ಮಿ ಕಾನರ್ಸ್ ಅವರೂ 38ನೇ ವಯಸ್ಸಿನಲ್ಲಿ ಪುರುಷರ ಸಿಂಗಲ್ಸ್ ನಾಲ್ಕನೇ ಸುತ್ತಿಗೆ ತಲುಪಿದ್ದರು. ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಸರ್ಬಿಯಾದ ಆಟಗಾರ ಶುಕ್ರವಾರ 6–4, 6–7 (4–7), 6–2, 6–3 ರಿಂದ ನೋರಿ ಅವರನ್ನು ಹಿಮ್ಮೆಟ್ಟಿಸಿದರು.
ಆದರೆ ಎರಡು ವಾರಗಳ ಗ್ರ್ಯಾನ್‌ಸ್ಲಾಮ್ ಟೂರ್ನಿಯ ತೀವ್ರ ಒತ್ತಡವನ್ನು ದೇಹ ತಾಳಿಕೊಳ್ಳುತ್ತದೆಯೇ ಎಂಬುದು ತಮ್ಮ ನಿಯಂತ್ರಣದಲ್ಲಿಲ್ಲ ಎಂದು ಸರ್ಬಿಯಾದ ಆಟಗಾರ ಹೇಳಿದರು.
ಜೊಕೊವಿಚ್ ಅವರು 16ನೇ ಬಾರಿ ಅಮೆರಿಕ ಓಪನ್‌ನಲ್ಲಿ ನಾಲ್ಕನೇ ಸುತ್ತನ್ನು ದಾಟಿದ್ದಾರೆ. ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಈ ಹಂತ ತಲುಪಿರುವುದು 69ನೇ ಸಲ! ಅವರು ಈ ವಿಷಯದಲ್ಲಿ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದರು.
ಜರ್ಮನಿಯ ಸ್ಟ್ರುಫ್ ಮೂರನೇ ಸುತ್ತಿನಲ್ಲಿ 17ನೇ ಶ್ರೇಯಾಂಕದ ಫ್ರಾನ್ಸಿಸ್ ಟಿಯಾಫೊ ಅವರನ್ನು 6–4, 6–3, 7–6 (9–7) ರಿಂದ ಸೋಲಿಸಿದ್ದರು.
ಆರನೇ ಶ್ರೇಯಾಂಕದ ಬೆನ್ ಶೆಲ್ಟನ್ ಅವರೂ ಹೊರಬಿದ್ದರು. ಫ್ರಾನ್ಸ್‌ನ 37 ವರ್ಷ ವಯಸ್ಸಿನ ಆಟಗಾರ ಅಡ್ರಿಯಾನ್ ಮನ್ನಾರಿನೊ 3–6, 6–3, 4–6, 6–4 ರಿಂದ ಮುಂದಿದ್ದಾಗ ಶೆಲ್ಟನ್ ಅವರು ಭುಜದ ನೋವಿನಿಂದಾಗಿ ಪಂದ್ಯ ಬಿಟ್ಟುಕೊಟ್ಟರು.
ವಿಶ್ವ ಕ್ರಮಾಂಕದಲ್ಲಿ 82ನೇಸ್ಥಾನದಲ್ಲಿರುವ ಆರ್ಥರ್ ರಿಂಡರ್‌ನೆಕ್ ಅವರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ನಾಲ್ಕನೇ ಸುತ್ತನ್ನು ತಲುಪಿದರು. ಫ್ರಾನ್ಸ್‌ನ ಆಟಗಾರ 4–6, 6–3, 6–3, 6–2 ರಿಂದ ಬೊಂಜಿ ಅವರನ್ನು ಮಣಿಸಿದರು.
ನಾಲ್ಕನೇ ಶ್ರೇಯಾಂಕದ ಅಮೆರಿಕದ ಆಟಗಾರ ಟೇಲರ್ ಫ್ರಿಟ್ಝ್ ಕೂಡ ನಾಲ್ಕನೇ ಸುತ್ತಿಗೆ ಮುನ್ನಡೆದರು.
ಮೆಡ್ವೆಡೇವ್‌ಗೆ ಭಾರಿ ದಂಡ: ಮೊದಲ ಸುತ್ತಿನಲ್ಲಿ ಬೊಂಜಿ, 2021ರ ಚಾಂಪಿಯನ್, ರಷ್ಯಾದ ಡೇನಿಯಲ್ ಮೆಡ್ವೆಡೇವ್ ಅವರನ್ನು ಐದು ಸೆಟ್‌ಗಳ ಪಂದ್ಯದಲ್ಲಿ ಸೋಲಿಸಿದ್ದರು. ಆ ಪಂದ್ಯದಲ್ಲಿ ಚೇರ್ ಅಂಪೈರ್ ವಿರುದ್ಧ ರೇಗಾಡಿ ಅನುಚಿತವಾಗಿ ವರ್ತಿಸಿದ ಮತ್ತು ರ್‍ಯಾಕೆಟನ್ನು ಕುರ್ಚಿಗೆ ಬಡಿದು ಮುರಿದು ಆಶಿಸ್ತು ತೋರಿದ್ದಕ್ಕೆ ಮೆಡ್ವೆಡೇವ್ ಅವರಿಗೆ ಆಯೋಜಕರು ₹37.42 ಲಕ್ಷ ($42500) ದಂಡ ವಿಧಿಸಿದರು. ಆ ಪಂದ್ಯದ ವೇಳೆ ಛಾಯಾಗ್ರಾಹಕರೊಬ್ಬರು ಅಂಕಣದೊಳಕ್ಕೆ ಬಂದಿದ್ದರು. ಅವರನ್ನು ಹೊರಕಳಿಸಿದ ಮೇಲೆ ಬೊಂಜಿ ಅವರಿಗೆ ಎರಡನೇ ಸರ್ವ್‌ಗೆ ಅವಕಾಶ ಕೊಟ್ಟಿದ್ದು ರಷ್ಯಾ ಆಟಗಾರನಿಗೆ ಹಿಡಿಸಲಿಲ್ಲ. ಮೆಡ್ವೆಡೇವ್ ಅನುಚಿತ ವರ್ತನೆಯಿಂದ ಪಂದ್ಯ ಕೆಲನಿಮಿಷ ಸ್ಥಗಿತಗೊಂಡಿತ್ತು.
ಸಬಲೆಂಕಾ ಮುನ್ನಡೆ: ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ 6–3, 7–6 (7–2) ರಿಂದ ಕೆನಡಾದ ಲೇಲಾ ಫೆರ್ನಾಂಡಿಸ್ ಅವರನ್ನು ಹಿಮ್ಮೆಟ್ಟಿಸಿದರು.
ಚಂದ್ರಶೇಖರ್–ಪ್ರಶಾಂತ್ ಮುನ್ನಡೆ
ನ್ಯೂಯಾರ್ಕ್ (ಪಿಟಿಐ): ಭಾರತದ ಡಬಲ್ಸ್ ಆಟಗಾರರಾದ ಅನಿರುದ್ಧ ಚಂದ್ರಶೇಖರ್– ವಿಜಯ್ ಪ್ರಶಾಂತ್ ಅವರು ಸ್ಥಳೀಯ ಫೇವರಿಟ್ ಹಾಗೂ ಎಂಟನೇ ಶ್ರೇಯಾಂಕದ ಕ್ರಿಸ್ಟಿಯನ್ ಹ್ಯಾರಿಸನ್– ಇವಾನ್ ಕಿಂಗ್ ಜೋಡಿಯನ್ನು ಸೋಲಿಸಿ ಎರಡನೇ ಸುತ್ತಿಗೆ ತಲುಪಿದರು.
ಭಾರತದ ಆಟಗಾರರು ಮೊದಲ ಸುತ್ತಿನ ಪಂದ್ಯವನ್ನು 3–6, 6–4, 6–4 ರಲ್ಲಿ ಗೆದ್ದುಕೊಂಡರು. ಭಾರತದ ಇನ್ನೊಂದು ಜೋಡಿಯಾದ ರಿತ್ವಿಕ್ ಬೊಲ್ಲಿಪಳ್ಳಿ– ಎನ್.ಬಾಲಾಜಿ ಅವರ ಸವಾಲು ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.