ADVERTISEMENT

Australian Open 2025 | ಎರಡನೇ ಸುತ್ತಿಗೆ ಸಿನ್ನರ್‌, ಜೊಕೊವಿಚ್

ಆಸ್ಟ್ರೇಲಿಯನ್ ಓಪನ್ ಟೆನಿಸ್‌: ಕಿರ್ಗಿಯೋಸ್‌, ಸಿಸಿಪಸ್‌, ಅಜರೆಂಕಾ ನಿರ್ಗಮನ

ಏಜೆನ್ಸೀಸ್
Published 14 ಜನವರಿ 2025, 0:00 IST
Last Updated 14 ಜನವರಿ 2025, 0:00 IST
<div class="paragraphs"><p>ನೊವಾಕ್ ಜೊಕೊವಿಚ್‌</p></div>

ನೊವಾಕ್ ಜೊಕೊವಿಚ್‌

   

(ರಾಯಿಟರ್ಸ್ ಚಿತ್ರ)

ಮೆಲ್ಬರ್ನ್‌: ಚಾರಿತ್ರಿಕ ದಾಖಲೆಯ ಹೊಸ್ತಿಲಲ್ಲಿರುವ ನೊವಾಕ್ ಜೊಕೊವಿಚ್‌ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲ್ಲುವ ಮೊದಲು ಸ್ವಲ್ಪ ಆತಂಕ ಎದುರಿಸಿದರು. ಆದರೆ ಸಕಾಲದಲ್ಲಿ ಚೇತರಿಸಿಕೊಂಡರು. ಅವರೊಂದಿಗೆ ಕಾರ್ಲೋಸ್‌ ಅಲ್ಕರಾಜ್ ಮತ್ತು ಹಾಲಿ ಚಾಂಪಿಯನ್ ಯಾನಿಕ್ ಸಿನ್ನರ್ ಅವರೂ ಸೋಮವಾರ ಎರಡನೇ ಸುತ್ತಿಗೆ ಮುನ್ನಡೆದರು.

ADVERTISEMENT

ಆದರೆ ತವರಿನ ನೆಚ್ಚಿನ ಆಟಗಾರ ನಿಕ್‌ ಕಿರ್ಗಿಯೋಸ್ ಮತ್ತು ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್‌ ಅವರ ಮೊದಲ ಸುತ್ತಿನಲ್ಲೇ ಹೊರಬಿದ್ದ ಪ್ರಮುಖರೆನಿಸಿದರು. 

ಮಹಿಳೆಯರ ಸಿಂಗಲ್ಸ್‌ನಲ್ಲಿ, ಎರಡು ಬಾರಿಯ ಚಾಂಪಿಯನ್ಅರಿನಾ ಸಬಲೆಂಕಾ ಅವರ ಆದಿಪತ್ಯಕ್ಕೆಸವಾಲೊಡ್ಡುವ ಯತ್ನದಲ್ಲಿರು ಪೋಲೆಂಡ್‌ನ  ಶ್ವಾಂಟೆಕ್ ಮತ್ತು ಅಮೆರಿಕದ ಕೊಕೊ ಗಾಫ್‌ ಅವರು ನೇರ ಸೆಟ್‌ಗಳ ಗೆಲುವಿನೊಡನೆ ಶುಭಾರಂಭ ಮಾಡಿದರು. ‌

ಮೆಲ್ಬರ್ನ್‌ನಲ್ಲಿ ಎರಡನೇ ದಿನ ತಡವಾಗಿ ಮುಗಿದ ಪಂದ್ಯದಲ್ಲಿ ಜೊಕೊ ವಿಚ್ ಅವರು 107ನೇ ಕ್ರಮಾಂಕದಲ್ಲಿರುವ ಅಮೆರಿಕದ ಆಟಗಾರ, ಭಾರತ ಮೂಲದ ನಿಶೇಷ್ ಬಸವರೆಡ್ಡಿ ಎದುರು ಮೊದಲ ಸೆಟ್‌ ಕಳೆದುಕೊಂಡರು. ಆದರೆ ದಾಖಲೆಯ 25ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಮತ್ತು ಇಲ್ಲಿ 11ನೇ ಬಾರಿ ಕಿರೀಟ ಧರಿಸುವ ಗುರಿಯಲ್ಲಿರುವ ಸರ್ಬಿಯಾದ ಆಟಗಾರ ಚೇತರಿಸಿಕೊಂಡು 4–6, 6–3, 6–4, 6–2ರಲ್ಲಿ ಜಯಗಳಿಸಿದರು.

ವಿಶ್ವದ ಅಗ್ರಮಾನ್ಯ ಆಟಗಾರ ಸಿನ್ನರ್ ಅವರು ರಾಡ್‌ ಲೇವರ್‌ ಅರೇನಾದಲ್ಲಿ 7–6 (2), 7–6 (5), 6–1 ರಿಂದ ಚಿಲಿಯ ನಿಕೋಲಸ್ ಜಾರಿ ಅವರ ಹೋರಾಟವನ್ನು ಬದಿಗೊತ್ತಿದರು. ಕಳೆದ ಅಕ್ಟೋಬರ್‌ನಲ್ಲಿ ಬೀಜಿಂಗ್ ಫೈನಲ್‌ನಲ್ಲಿ ಸ್ಪೇನ್‌ನ ಅಲ್ಕರಾಜ್ ಅವರಿಗೆ ಸೋತ ಬಳಿಕ ಇಟಲಿಯ ದಿಗ್ಗಜ ಒಂದೂ ಪಂದ್ಯ ಸೋತಿಲ್ಲ. 

ಮೂರನೇ ಕ್ರಮಾಂಕದ ಅಲ್ಕರಾಜ್ 6–1, 7–5 6–1 ರಿಂದ ಕಜಕಸ್ತಾನದ ಅಲೆಕ್ಸಾಂಡರ್
ಶೆವ್ಚೆಂಕೊ ಅವರನ್ನು ಸೋಲಿಸಲು ಕಷ್ಟಪಡಲಿಲ್ಲ. ಗ್ರ್ಯಾನ್‌ಸ್ಲಾಮ್‌ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿರುವ 21 ವರ್ಷ ವಯಸ್ಸಿನ ಅಲ್ಕರಾಜ್, ಇಲ್ಲಿ ಮೊದಲ ಕಿರೀಟದ ಯತ್ನದಲ್ಲಿದ್ದಾರೆ.

ಸಿನ್ನರ್ ಅವರು 7–6 (2), 7–6 (5), 6–1 ರಿಂದ ನಿಕೋಲಸ್ ಜಾರಿ ಅವರನ್ನು ಹಿಮ್ಮೆಟ್ಟಿಸಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶುಭಾರಂಭ ಮಾಡಿದರು.

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ ಇಗಾ ಶ್ವಾಂಟೆಕ್ 6–3, 6–4 ರಿಂದ ಡಬಲ್ಸ್‌ ಪರಿಣಿತೆ ಕ್ಯಾತರಿಕಾ ಸಿನಿಕೊವಾ (ಝೆಕ್ ರಿಪಬ್ಲಿಕ್) ಅವರನ್ನು ಮಣಿಸಿದರು. ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಐದು ಪ್ರಶಸ್ತಿ ಗೆದ್ದಿರುವ ಪೋಲೆಂಡ್‌ನ ಆಟಗಾರ್ತಿ ಮೆಲ್ಬರ್ನ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲ.

ಒಳ್ಳೆಯ ಲಯದಲ್ಲಿರುವ ಮೂರನೇ ಕ್ರಮಾಂಕದ ಕೊಕೊ ಗಾಫ್‌ ಅವರು ಸ್ವದೇಶದ  ಸೋಫಿಯಾ ಕೆನಿನ್ ಅವರನ್ನು ಸೋಲಿಸಿದರು. ಗಾಫ್‌ 6–3, 6–3 ರಿಂದ 2020ರ ಚಾಂಪಿಯನ್ ಕೆನಿನ್ ಅವರನ್ನು ಸೋಲಿಸಲು 80 ನಿಮಿಷ ತೆಗೆದುಕೊಂಡರು.

ಅಮೆರಿಕ ತಂಡವು ಯುನೈಟೆಡ್‌ ಕಪ್‌ ಗೆಲ್ಲಲು ನೆರವಾಗಿರುವ ಗಾಫ್ ಈ ವರ್ಷ ಅಜೇಯರಾಗುಳಿದಿದ್ದಾರೆ. 2023ರಲ್ಲಿ ಅವರು ಇಲ್ಲಿ ಚಾಂಪಿಯನ್ ಆಗಿದ್ದರು.

ಸಿಸಿಪಸ್‌ಗೆ ಆಘಾತ:

11ನೇ ಶ್ರೇಯಾಂಕದ ಸಿಸಿಪಸ್‌ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಅಮೆರಿಕದ ಯುವ ಆಟಗಾರ ಅಲೆಕ್ಸ್‌ ಮೈಕೆಲ್ಸನ್ ಅವರು 7–5, 6–3, 2–6, 6–4 ರಿಂದ 26 ವರ್ಷ ವಯಸ್ಸಿನ ಗ್ರೀಸ್‌ ಆಟಗಾರರನ್ನು ಸೋಲಿಸಿದರು.

2023ರ ಫೈನಲ್‌ನಲ್ಲಿ ಜೊಕೊವಿಚ್‌ ಎದುರು ಫೈನಲ್ ಆಡಿದ್ದ ಸಿಸಿಪಸ್‌, 20 ವರ್ಷ ವಯಸ್ಸಿನ ಅಮೆರಿಕದ ಆಟಗಾರನ
ಎದುರು ಲಯ ಕಂಡುಕೊಳ್ಳಲಾಗಲಿಲ್ಲ. ಅಲೆಕ್ಸ್‌, ಅನುಭವಿ ಎದುರಾಳಿಯನ್ನು  ಅಂಕಣದುದ್ದಕ್ಕೂ ಓಡಾಡುವಂತೆ ಮಾಡಿದರು.‌

ಇದು 42ನೇ ಕ್ರಮಾಂಕದ ಅಮೆರಿಕದ ಆಟಗಾರ, ಅಗ್ರ 20ರಲ್ಲಿರುವ ಆಟಗಾರನೊಬ್ಬನ ಎದುರು ದಾಖಲಿಸಿದ ಮೊದಲ ಜಯ ಎನಿಸಿತು.

ಅಜರೆಂಕಾ ನಿರ್ಗಮನ:

ಇಲ್ಲಿ 2012 ಮತ್ತು 2013ರಲ್ಲಿ ಮಹಿಳಾ ಸಿಂಗಲ್ಸ್‌ ಚಾಂಪಿಯನ್ ಆಗಿದ್ದ ವಿಕ್ಟೋರಿಯಾ ಅಜರೆಂಕಾ ಬೇಗನೇ ಹೊರಬಿದ್ದರು. ಇಟಲಿಯ ಲೂಸಿಯಾ ಬ್ರೊಂಝೆಟ್ಟಿ ಅವರು 6–2, 7–6 (2) ರಲ್ಲಿ ಬೆಲಾರೂಸ್‌ನ ಆಟಗಾರ್ತಿಯನ್ನು ಮಣಿಸಿದರು.

ತವರಿನ ತಾರೆ ನಿಕ್‌ ಕಿರ್ಗಿಯೋಸ್‌ ನಿರ್ಗಮನ

ಮೆಲ್ಬರ್ನ್ (ರಾಯಿಟರ್ಸ್‌): ಗ್ರ್ಯಾನ್‌ಸ್ಲಾಮ್‌ ಟೂರ್ನಿಗೆ ನಿಕ್‌ ಕಿರ್ಗಿಯೋಸ್‌ ಅವರ ಬಹುನಿರೀಕ್ಷಿತ  ಪುನರಾಗಮನ ಸೋಲಿನಲ್ಲಿ ಅಂತ್ಯಕಂಡಿತು. ಬ್ರಿಟನ್‌ನ ಜಾಕೋಬ್‌ ಫೆರ್ನ್‌ಲಿ ಅವರು ತವರಿನ ನೆಚ್ಚಿನ ಆಟಗಾರರನ್ನು ಸೋಮವಾರ ಮೊದಲ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಸೋಲಿಸಿದರು.

ಜಾನ್‌ ಕೇನ್ ಅರೇನಾ ಪ್ರೇಕ್ಷಕರಿಂದ ತುಂಬಿದ್ದು, 29 ವರ್ಷ ವಯಸ್ಸಿನ ನಿಕ್ ಕಿರ್ಗಿಯೋಸ್ ಅವರು ಹೊಟ್ಟೆಯ ಸ್ನಾಯ ಸಮಸ್ಯೆಯಿಂದ ಹೊರಬಂದು ಗೆಲ್ಲುವರೆಂಬ ನಿರೀಕ್ಷೆಯಲ್ಲಿತ್ತು. ಆದರೆ ಬ್ರಿಟನಿನ ಆಟಗಾರ 7–6 (3), 6–3, 7–6 (2) ರಲ್ಲಿ ಜಯಗಳಿಸಿದ್ದರಿಂದ ನಿರಾಸೆ ಅನುಭವಿಸಿತು. ಇದು ಫೆರ್ನ್‌ಲಿ ಅವರಿಗೆ ಪದಾರ್ಪಣೆಯ ಗ್ರ್ಯಾನ್‌ಸ್ಲಾಮ್ ಟೂರ್ನಿ

ಹೋರಾಟ ತೋರಿದ ನಿಶೇಷ್‌ ಬಸವರೆಡ್ಡಿ

ಭಾರತ ಮೂಲದ ಅಮೆರಿಕದ ಆಟಗಾರ ನಿಶೇಷ್ ಬಸವರೆಡ್ಡಿ, ತಮ್ಮ ದಿಗ್ಗಜ ಎದುರಾಳಿ ಜೊಕೊವಿಚ್‌ ಎದುರು ಮೊದಲ ಸೆಟ್‌ ಗೆದ್ದು ಗಮನಸೆಳೆದರು. 19 ವರ್ಷ ವಯಸ್ಸಿನ ಅಮೆರಿಕದ ಆಟಗಾರ ಮೊದಲ ಸೆಟ್‌ನಲ್ಲಿ ನಾಜೂಕಿನ ಡ್ರಾಪ್ ಹೊಡೆತಗಳನ್ನು ಮತ್ತು ‘ಲಾಬ್‌’ಗಳನ್ನು ಆಡಿದರು. ‌

‘ಅವನ ಆಟವನ್ನು ತುಂಬಾ ಮೆಚ್ಚಿಕೊಂಡೆ. ಇಡೀ ಕ್ರೀಡಾಂಗಣ ಕೂಡ ಮೆಚ್ಚಿತು. ಅದಕ್ಕಾಗಿಯೇ ಪ್ರೇಕ್ಷಕರಿಂದ ಸಾಕಷ್ಟು ಹರ್ಷೋದ್ಗಾರಗಳು ಕೇಳಿಬಂದವು’ ಎಂದು 37 ವರ್ಷ ವಯಸ್ಸಿನ ಆಟಗಾರ ಶ್ಲಾಘಿಸಿದರು. ‘ಅವನೊಬ್ಬ ಪರಿಪೂರ್ಣ ಆಟಗಾರ, ಹೊಡೆತಗಳಲ್ಲಿ ಇನ್ನಷ್ಟು ಪಕ್ವತೆ ಕಾಣಬೇಕಿದೆ. ಆದರೆ ಅವನಲ್ಲಿ ಒಳ್ಳೆಯ ಆಟವಿದೆ’ ಎಂದೂ ಸರ್ಬಿಯಾದ ಆಟಗಾರ ಹೇಳಿದರು

ನಿಶೇಷ್‌ ಪೋಷಕರು ಹೈದರಾಬಾದ್ ಮತ್ತು ನೆಲ್ಲೂರು ಮೂಲದವರು. ತಂದೆ ಮುರಳಿ ರೆಡ್ಡಿ
ಟೆಕ್‌ ಕಂಪನಿಯಲ್ಲಿ ಉದ್ಯೋಗಿ. 

ಕಳೆದ ವರ್ಷ ಎಟಿಪಿ ಚಾಲೆಂಜರ್‌ ಟೂರ್ನಿಗಳಲ್ಲಿ ತೋರಿದ ಉತ್ತಮ ಪ್ರದರ್ಶನದಿಂದ ಅವರು ಈ ಟೂರ್ನಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದರು. ಬಾಲ್ಯದಿಂದ ನಿಶೇಷ್‌ಗೆ ಜೊಕೊವಿಚ್‌ ಅಚ್ಚುಮೆಚ್ಚಿನ ಆಟಗಾರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.