ಯಾನಿಕ್ ಸಿನ್ನರ್
ರಾಯಿಟರ್ಸ್ ಚಿತ್ರ
ಮೆಲ್ಬರ್ನ್: ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ಮೊದಲ ಸೆಟ್ ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿ ಗುರುವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತಿಗೆ ಮುನ್ನಡೆದರು. ಪೋಲೆಂಡ್‌ನ ಇಗಾ ಶ್ವಾಂಟೆಕ್ ಕೂಡ ಮುನ್ನಡೆದಿದ್ದು, ಮೂರನೇ ಸುತ್ತಿನಲ್ಲಿ ಎಮ್ಮಾ ರಾಡುಕಾನು ಜೊತೆ ಮುಖಾಮುಖಿಯಾಗಲಿದ್ದಾರೆ.
ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯತ್ತ ಕಣ್ಣಿಟ್ಟಿರುವ ಅಮೆರಿಕದ ಆಟಗಾರ ಟೇಲರ್ ಫ್ರಿಟ್ಜ್ ತಮ್ಮ ಪಂದ್ಯವನ್ನು ಗೆಲ್ಲಲು ಕಷ್ಟಪಡಲಿಲ್ಲ. ಮೊದಲ ಸುತ್ತಿನಲ್ಲಿ ಶ್ರೇಯಾಂಕ ಆಟಗಾರ ಆಂದ್ರೆ ರುಬ್ಲೇವ್ ಅವರನ್ನು ಹೊರದೂಡಿ ಗಮನಸೆಳೆದ 18 ವರ್ಷ ವಯಸ್ಸಿನ ಜೊವೊ ಫೊನ್ಸೆಕಾ ಐದು ಸೆಟ್‌ಗಳ ತೀವ್ರ ಹೋರಾಟದಲ್ಲಿ ಸೋಲನುಭವಿಸಬೇಕಾಯಿತು.
ಸಿನ್ನರ್ 14 ಪಂದ್ಯಗಳಲ್ಲಿ ಇದೇ ಮೊದಲ ಬಾರಿ ಸೆಟ್ ಕಳೆದುಕೊಂಡರು. ತಂಗಾಳಿ ಬೀಸುತ್ತಿದ್ದ ರಾಡ್ ಲೇವರ್ ಅರೇನಾದಲ್ಲಿ ಅವರು ತಕ್ಷಣ ಚೇತರಿಸಿ ಆಸ್ಟ್ರೇಲಿಯಾದ ಟ್ರಿಸ್ಟನ್ ಸ್ಕೂಲ್ಕೇಟ್ ಅವರನ್ನು 4–6, 6–4, 6–1, 6–3 ರಿಂದ ಸೋಲಿಸಿದರು. 173ನೇ ಕ್ರಮಾಂಕದ ಸ್ಕೂಲ್ಕೇಟ್ ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದರು.
ನಾಲ್ಕನೇ ಶ್ರೇಯಾಂಕದ ಫ್ರಿಟ್ಜ್ ಎರಡನೇ ಸುತ್ತಿನಲ್ಲಿ ಪ್ರಬಲ ಹೊಡೆತ ಗಳನ್ನು ಪ್ರದರ್ಶಿಸಿ ಕ್ವಾಲಿಫೈಯರ್, ಚಿಲಿಯ ಕ್ರಿಸ್ಟಿಯಾನ್ ಗಾರಿನ್ ಅವರನ್ನು 6–2, 6–1, 6–0ಯಿಂದ ಪರಾಭವಗೊಳಿಸಿದರು. ಫ್ರಿಟ್ಜ್ ಕಳೆದ ವರ್ಷ ಅಮೆರಿಕ ಓಪನ್ ಫೈನಲ್ ತಲುಪಿದ್ದರು. ಮೂರನೇ ಸುತ್ತಿನಲ್ಲಿ ಅವರ ಎದುರಾಳಿ ಫ್ರಾನ್ಸ್‌ನ ಗೇಲ್ ಮಾನ್ಫಿಲ್ಸ್.
ಕಾರ್ಲೋಸ್ ಅಲ್ಕರಾಜ್, ಜೊಕೊವಿಚ್ ಮೊದಲಾದ ತಾರೆಗಳ ಮೆಚ್ಚುಗೆ ಪಡೆದಿರುವ ಹದಿಹರೆಯದ ಫೊನ್ಸೆಕಾ ಅವರನ್ನು ಇಟಲಿಯ ಲೊರೆಂಝೊ ಸೊನೆಗೊ ಅವರು ಸೋಲಿಸಿದರು. ಇಟಲಿಯ ಆಟಗಾರ 6–7 (6–8), 6–3, 6–1, 3–6, 6–3ರಲ್ಲಿ ಜಯಗಳಿಸಿದರು. ಸಾಕಷ್ಟು ಸಂಖ್ಯೆಯಲ್ಲಿದ್ದ ಬ್ರೆಜಿಲ್ ಅಭಿಮಾನಿಗಳು ಫೊನ್ಸೆಕಾ ಸೋಲಿನಿಂದ ನಿರಾಶರಾದರು.
ಆಸ್ಟ್ರೇಲಿಯಾದ ಭರವಸೆಯಾಗಿರುವ ಅಲೆಕ್ಸ್ ಡಿ ಮಿನೋರ್ ಮತ್ತು 13ನೇ ಶ್ರೇಯಾಂಕದ ಡೆನ್ಮಾರ್ಕ್ ಆಟಗಾರ ಹೋಲ್ಗರ್ ರೂನ್ ಕೂಡ ಮೂರನೇ ಸುತ್ತಿಗೆ ಮುನ್ನಡೆದಿದ್ದಾರೆ.
ಶ್ವಾಂಟೆಕ್‌ಗೆ ಜಯ:
ಎರಡನೇ ಶ್ರೇಯಾಂಕದ ಪೋಲೆಂಡ್ ಆಟಗಾರ್ತಿ ಇಗಾ ಶ್ವಾಂಟೆಕ್ 6–0, 6–2 ರಿಂದ ರೆಬೆಕಾ ಸ್ರಮ್ಕೋವಾ ಅವರನ್ನು ಸದೆಬಡಿದರು. ಬ್ರಿಟನಿನ ಎಮ್ಮಾ ರಾಡುಕಾನು 6–3, 7–5 ರಿಂದ ಅಮಂಡಾ ಅನಿಸಿಮೊವಾ ಅವರನ್ನು ಸೋಲಿಸಿ ಮೊದಲ ಬಾರಿ ಈ ಟೂರ್ನಿಯ ಮೂರನೇ ಸುತ್ತಿಗೇರಿದರು.
ಮೂರು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಫೈನಲ್ ಆಡಿರುವ ಟ್ಯುನೀಸಿಯಾದ ಆನ್ಸ್ ಜೇಬರ್ 7–5, 6–3 ರಿಂದ ಕೊಲಂಬಿಯಾದ ಕ್ಯಾಮಿಲಾ ಒಸೊರಿಯೊ ಮೇಲೆ ಜಯಗಳಿಸಿದರು.
ಪ್ರೇಕ್ಷಕರಿಗೆ ತಿರುಗೇಟು:
ಹತ್ತನೇ ಶ್ರೇಯಾಂಕದ ಡೇನಿಲಿ ಕಾಲಿನ್ಸ್ 7–6 (4), 4–6, 6–2 ರಿಂದ ದೆಸ್ತಾನೀ ಐಯೇವಾ (ಆಸ್ಟ್ರೇಲಿಯಾ) ವಿರುದ್ಧ ಜಯ ಗಳಿಸಿದರು. ಪಂದ್ಯದುದ್ದಕ್ಕೂ ತಮ್ಮನ್ನು ಕೆಣಕುತ್ತಿದ್ದ ಪ್ರೇಕ್ಷಕರತ್ತ ಅಮೆರಿಕದ ಆಟಗಾರ್ತಿ ಮುತ್ತುಗಳನ್ನು ಹರಿಬಿಟ್ಟು ತಿರುಗೇಟು ಕೊಟ್ಟರು.
ಬಾಲಾಜಿ–ಮಿಗೆಲ್ ಜೋಡಿಗೆ ಜಯ
ಮೆಲ್ಬರ್ನ್ (ಪಿಟಿಐ): ಭಾರತದ ಎನ್.ಶ್ರೀರಾಮ್ ಬಾಲಾಜಿ ಮತ್ತು ಮೆಕ್ಸಿಕೊದ ಅವರ ಜೊತೆಗಾರ ಮಿಗೆಲ್ ಏಂಜೆಲ್ ರೇಯೆಸ್–ವರೆಲಾ ಅವರು ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ನೇರ ಸೆಟ್‌ಗಳ ಗೆಲುವಿನೊಡನೆ ಡಬಲ್ಸ್ ಎರಡನೇ ಸುತ್ತನ್ನು ತಲುಪಿದರು.
ಗುರುವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀರಾಮ್– ಮಿಗೆಲ್ ಜೋಡಿ 6–4, 6–3 ರಿಂದ ರಾಬಿನ್ ಹಾಸೆ (ನೆದರ್ಲೆಂಡ್ಸ್) ಮತ್ತು ಅಲೆಕ್ಸಾಂಡರ್ ನೆಡೊವಿಸೊವ್ (ಕಜಕಸ್ತಾನ) ಅವರನ್ನು ಸೋಲಿಸಿತು. ಇದೇ ವೇಳೆ ಕಣದಲ್ಲಿದ್ದ ಭಾರತದ ರಿತ್ವಿಕ್ ಬೊಲ್ಲಿಪಳ್ಳಿ– ಅಮೆರಿಕದ ರಯಾನ್ ಸೆಗ್ಗರ್‌ಮನ್ (ಅಮೆರಿಕ) ಅವರು 6–7, 1–6 ರಿಂದ ಹ್ಯಾರಿ ಹೆಲಿಯೊವರ (ಫಿನ್ಲೆಂಡ್)– ಹೆನ್ರಿ ಪ್ಯಾಟೆನ್ (ಯು.ಕೆ) ಜೋಡಿ ಎದುರು ಸೋಲನುಭವಿಸಿತು.
ಮಡ್ವೆಡೇವ್‌ಗೆ ‘ಲರ್ನರ್’ ಆಘಾತ
ಮೆಲ್ಬರ್ನ್ (ಎಎಫ್‌ಪಿ): ಕ್ವಾಲಿಫೈಯರ್, 19 ವರ್ಷ ವಯಸ್ಸಿನ ಲರ್ನರ್ ಟಿಯನ್ ಅವರು ಗುರುವಾರೆ ತಡರಾತ್ರಿಯವರೆಗೆ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಡೇನಿಯಲ್ ಮೆಡ್ವೆಡೇವ್ ಅವರನ್ನು ಐದು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ಸೋಲಿಸಿ ಅತಿ ದೊಡ್ಡ ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣರಾದರು.
ವಿಶ್ವ ಕ್ರಮಾಂಕದಲ್ಲಿ 121ನೇ ಸ್ಥಾನದಲ್ಲಿರುವ ಲರ್ನರ್ 6–3, 7–6 (7–4), 6–7 (8–10), 1–6, 7–6 (10–7) ರಿಂದ ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ರಷ್ಯಾದ ಆಟಗಾರನಿಗೆ ಆಘಾತ ನೀಡಿದರು. 4 ಗಂಟೆ 48 ನಿಮಿಷಗಳವರೆಗೆ ನಡೆದ ಈ ಪಂದ್ಯ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಮುಗಿಯಿತು. ಮೊದಲ ಬಾರಿ ಇಲ್ಲಿ ಆಡುತ್ತಿರುವ ಕ್ಯಾಲಿಫೋರ್ನಿಯಾದ ಎಡಗೈ ಆಟಗಾರ ಮೂರನೇ ಸುತ್ತಿನಲ್ಲಿ ಫ್ರಾನ್ಸ್‌ನ ಕೊರೆಂಟಿನ್ ಮೊಟೆಟ್ ಅವರನ್ನು ಎದುರಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.