ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೂರ್ ಟೆನಿಸ್ ಟೂರ್ನಿಯಲ್ಲಿ ಮಂಗಳವಾರ ಭಾರತದ ರಾಮ್‌ಕುಮಾರ್ ರಾಮನಾಥ್ ವಿರುದ್ಧ ಜಪಾನ್‌ನ ಶಿಂಟಾರೋ ಮೊಶಿಝುಕಿ ಅವರ ಹೊಡೆತದ ಪರಿ
ಪ್ರಜಾವಾಣಿ ಚಿತ್ರ/ಕೃಷ್ಣ ಕುಮಾರ್ ಪಿ.ಎಸ್.
ಬೆಂಗಳೂರು: ಅರ್ಹತಾ ಸುತ್ತಿನ ವಿಜೇತ ಹೈನೆಕ್ ಬಾರ್ಟನ್ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಅಗ್ರ ಶ್ರೇಯಾಂಕದ ಆಟಗಾರ ವಿಟ್ ಕೊಪ್ರಿವಾ ಅವರಿಗೆ 4–6, 6–4, 6–3 ರಿಂದ ಆಘಾತ ನೀಡಿ ಪ್ರಿಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು. ಟೂರ್ನಿಯಲ್ಲಿ ಭಾರತದ ಆಟಗಾರರ ಸವಾಲು ಕೂಡ ಬೇಗನೇ ಅಂತ್ಯಗೊಂಡಿತು.
ಕಬ್ಬನ್ ಪಾರ್ಕ್‌ನ ಕೆಎಸ್‌ಎಲ್‌ಟಿಎ ಎರಡನೇ ಅಂಕಣದಲ್ಲಿ ನಡೆದ ಪಂದ್ಯ ದಲ್ಲಿ ಬಾರ್ಟನ್ ಸುಮಾರು ಎರಡು ಗಂಟೆ ನಡೆದ ಪಂದ್ಯವನ್ನು ಮೂರು ಸೆಟ್‌ಗಳಲ್ಲಿ ಗೆದ್ದು ಗಮನ ಸೆಳೆದರು. ಝೆಕ್ ಗಣರಾಜ್ಯದ ಈ ಇಬ್ಬರೂ ಸ್ನೇಹಿತರು.
ಮೊದಲ ಸೆಟ್‌ನ ಏಳನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್ ಬ್ರೇಕ್ ಮಾಡಿದ ಕೊಪ್ರಿವಾ 6–4 ರಲ್ಲಿ ಸೆಟ್ ಕೈವಶ ಮಾಡಿಕೊಂಡರು. ಆದರೆ ಎರಡು ಮತ್ತು ಮೂರನೇ ಸೆಟ್‌ನಲ್ಲಿ 20 ವರ್ಷ ವಯಸ್ಸಿನ ಬಾರ್ಟನ್ ಕೈಮೇಲಾಯಿತು.
ಭಾರತದ ಯುವ ಆಟಗಾರ ಮಾನಸ್ ಧಾಮನೆ ಅವರು ಮೊದಲ ಸುತ್ತಿನಲ್ಲಿ, ಅರ್ಹತಾ ಸುತ್ತಿನ ವಿಜೇತ ಆಟಗಾರ ಪೀಟರ್ ಬರ್ ಬಿರ್ಯುಕೊವ್ ಅವರಿಗೆ ಮಣಿಯುವ ಮೊದಲು ಹೋರಾಟ ನೀಡಿದರು. ಬಿರ್ಯುಕೋವ್ ಅಂತಿಮವಾಗಿ 6–3, 3–6, 7–6 (3) ರಿಂದ 17 ವರ್ಷದ ಮಾನಸ್ ಅವರನ್ನು ಸೋಲಿಸಿ 16ರ ಘಟ್ಟಕ್ಕೆ ಮುನ್ನಡೆದರು.
ಕರಣ್ ಸಿಂಗ್ ಅವರ ಸವಾಲು ಕೂಡ ಬೇಗನೇ ಕೊನೆಗೊಂಡಿತು. ಆಸ್ಟ್ರಿಯಾದ ಜುರಿಜ್ ರೊಡಿಯೊನೊವ್ ತೀವ್ರ ಹೋರಾಟದ ಪಂದ್ಯದಲ್ಲಿ ಕರಣ್ ಅವರನ್ನು 6–4, 4–6, 7–6 (3) ರಿಂದ ಸೋಲಿಸಿದರು. ವೈಲ್ಡ್ ಕಾರ್ಡ್ ಪಡೆದಿದ್ದ ರಾಮಕುಮಾರ್ ರಾಮನಾಥನ್ ನೇರ ಸೆಟ್‌ಗಳಲ್ಲಿ ಸೋತರೂ ಜಪಾನಿನ ಶಿಂಟಾರೊ ಮೊಚಿಝುಕಿ ಅವರಿಗೆ ಪೈಪೋಟಿ ನೀಡಿದರು. ಅಂತಿ ಮವಾಗಿ ಏಳನೇ ಶ್ರೇಯಾಂಕದ ಶಿಂಟಾರೊ 7–6 (3), 7–5 ರಿಂದ ಜಯಗಳಿಸಿದರು.
17 ವರ್ಷ ವಯಸ್ಸಿನ ಬರ್ನಾರ್ಡ್ ಟಾಮಿಕ್ (ಆಸ್ಟ್ರೇಲಿಯಾ) ಇನ್ನೊಂದು ಪಂದ್ಯದಲ್ಲಿ 3–6, 7–6 (4), 6–4 ರಿಂದ ಇಲಿಯಾ ಸಿಮಕಿನ್ ಅವರನ್ನು ಸೋಲಿಸಿದರು. ಆಸ್ಟ್ರೇಲಿಯಾದ ಇನ್ನೊಬ್ಬ ಆಟಗಾರ, ಎರಡನೇ ಶ್ರೇಯಾಂಕದ ಟ್ರಿಸ್ಟಾನ್ ಸ್ಕೂಲ್‌ಕೇಟ್ 7–5, 6–7 (5), 6–3 ರಿಂದ ಖುಮೊಯುನ್ ಸುಲ್ತಾನೋವ್ ಅವರನ್ನು ಸೋಲಿಸಿ ಎರಡನೇ ಸುತ್ತಿಗೇರಿದರು.
ಇತ್ತೀಚೆಗೆ ಡೆಲ್ಲಿ ಓಪನ್ ಟೂರ್ನಿಯ ಸಿಂಗಲ್ಸ್ ವಿಜೇತರಾಗಿದ್ದ, ಐದನೇ ಶ್ರೇಯಾಂಕದ ಕೈರಿಯನ್ ಜಾಕ್ವೆಟ್ ಹೊರಬಿದ್ದರು. ಆಸ್ಟ್ರೇಲಿಯಾದ ಜೇಮ್ಸ್ ಮೆಕ್‌ಕ್ಯಾಬ್ 6–7 (8), 6–1, 6–2 ರಿಂದ ಜಾಕ್ವೆಟ್ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.