ADVERTISEMENT

ಬೆಂಗಳೂರು ಓಪನ್‌ ಟೆನಿಸ್‌ ಇಂದಿನಿಂದ: ಪ್ರಜ್ವಲ್‌, ರಾಮಕುಮಾರ್‌ ಮೇಲೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 1:16 IST
Last Updated 24 ಫೆಬ್ರುವರಿ 2025, 1:16 IST
<div class="paragraphs"><p>ಭಾರತದ ಕರಣ್‌ಸಿಂಗ್‌ ಅವರ ಆಟದ ಪರಿ </p></div>

ಭಾರತದ ಕರಣ್‌ಸಿಂಗ್‌ ಅವರ ಆಟದ ಪರಿ

   

ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.

ಬೆಂಗಳೂರು: ಭಾರತದ ಎಸ್‌.ಡಿ. ಪ್ರಜ್ವಲ್ ದೇವ್‌ ಮತ್ತು ರಾಮಕುಮಾರ್ ರಾಮನಾಥನ್‌ ಅವರು ಸೋಮವಾರ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್ ಟೂರ್‌ ಟೆನಿಸ್‌ ಟೂರ್ನಿಯಲ್ಲಿ ಸುಧಾರಿತ ಆಟ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ADVERTISEMENT

ಕಬ್ಬನ್‌ ಪಾಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ನಲ್ಲಿ ಮಾರ್ಚ್‌ 2ರವರೆಗೆ ನಡೆಯುವ ಒಂಬತ್ತನೇ ಆವೃತ್ತಿಯ ಟೂರ್ನಿಯಲ್ಲಿ ಈ ಇಬ್ಬರು ಅನುಭವಿ ಆಟಗಾರರೊಂದಿಗೆ ಮಹಾರಾಷ್ಟ್ರದ ನವಪ್ರತಿಭೆ ಮಾನಸ್‌ ಧಾಮನೆ ಅವರು ಸಿಂಗಲ್ಸ್‌ನ ಮುಖ್ಯಸುತ್ತಿಗೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

ಮೈಸೂರಿನ 28 ವರ್ಷ ವಯಸ್ಸಿನ ಪ್ರಜ್ವಲ್‌ ಅವರು ಝೆಕ್‌ ರಿಪಬ್ಲಿಕ್‌ನ ಮರೆಕ್ ಗೆಂಗೆಲ್ ವಿರುದ್ಧ ಅಭಿಯಾನ ಆರಂಭಿಸುವರು. ಕಳೆದ ಆವೃತ್ತಿಯಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದ 30 ವರ್ಷ ವಯಸ್ಸಿನ ರಾಮಕುಮಾರ್‌ ಅವರು ಏಳನೇ ಶ್ರೇಯಾಂಕದ ಜಪಾನ್‌ನ ಶಿಂಟಾರೊ ಮೊಚಿಜುಕಿ ಅವರನ್ನು ಎದುರಿಸುವರು.

17 ವರ್ಷ ವಯಸ್ಸಿನ ಧಾಮನೆ ಆರಂಭಿಕ ಸುತ್ತಿನಲ್ಲಿ ಕ್ವಾಲಿಫೈಯರ್‌ ಆಟಗಾರರೊಂದಿಗೆ ಅಭಿಯಾನ ಶುರು ಮಾಡುವರು. ಈಚೆಗೆ ಟುನೀಶಿಯಾದ ಎಂ15 ಮೊನಾಸ್ಟಿರ್‌ನಲ್ಲಿ ತಮ್ಮ ಚೊಚ್ಚಲ ಪ್ರಮುಖ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಅವರು, 2023ರಲ್ಲಿ ಎಟಿಪಿ ಟೂರ್‌ನಲ್ಲಿ ಮುಖ್ಯಸುತ್ತಿನ ಪಂದ್ಯಗಳನ್ನು ಆಡಿದ ಅತಿ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.  

ಕೊಪ್ರಿವಾಗೆ ಅಗ್ರ ಶ್ರೇಯಾಂಕ: ವಿಶ್ವ ರ‍್ಯಾಂಕಿಂಗ್‌ನಲ್ಲಿ 120ನೇ ಸ್ಥಾನದಲ್ಲಿರುವ ಝೆಕ್‌ ರಿಪಬ್ಲಿಕ್‌ನ ವಿಟ್‌ ಕೊಪ್ರಿವಾ ಅವರು ಅಗ್ರ ಶ್ರೇಯಾಂಕದೊಂದಿಗೆ ಕಣಕ್ಕೆ ಇಳಿಯುವರು.

ಭಾರತದಲ್ಲಿ ನಡೆಯುತ್ತಿರುವ ಪ್ರಸಕ್ತ ಋತುವಿನ ಎಟಿಪಿ ಚಾಲೆಂಜರ್‌ ಟೂರ್‌ನ ಕೊನೆಯ ಟೂರ್ನಿ ಇದಾಗಿದೆ. ಕಳೆದ ಮೂರು ವಾರಗಳಲ್ಲಿ ಕ್ರಮವಾಗಿ ನಡೆದ ಚೆನ್ನೈ, ದೆಹಲಿ ಮತ್ತು ಪುಣೆ (ಮಹಾ) ಓಪನ್‌ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ವಿದೇಶಿ ಆಟಗಾರರು ಇಲ್ಲಿ ಮತ್ತೆ ಮುಖಾಮುಖಿಯಾಗುವರು. 

27 ವರ್ಷ ವಯಸ್ಸಿನ ಕೊಪ್ರಿವಾ ಅವರು ಇಲ್ಲಿ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದ್ದಾರೆ. ದೆಹಲಿ ಓಪನ್‌ನಲ್ಲಿ ಸೆಮಿಫೈನಲ್‌ ತಲುಪಿದ್ದ ಅವರು, ಇಲ್ಲಿ ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್ ಆಟಗಾರನನ್ನು ಎದುರಿಸುವರು.

ಎರಡನೇ ಶ್ರೇಯಾಂಕ ಪಡೆದಿರುವ 134ನೇ ರ‍್ಯಾಂಕ್‌ನ ಟ್ರಿಸ್ಟಾನ್ ಸ್ಕೂಲ್ಕೇಟ್‌ (ಆಸ್ಟ್ರೇಲಿಯಾ) ಅವರು ಮೊದಲ ಸುತ್ತಿನಲ್ಲಿ ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ಅವರ ಸವಾಲನ್ನು ಎದುರಿಸುವರು. ಆಸ್ಟ್ರೇಲಿಯಾ ಓಪನ್‌ನಲ್ಲಿ ಎರಡನೇ ಸುತ್ತು ತಲುಪಿದ್ದ ಅವರು, ಚಾಂಪಿಯನ್‌ ಯಾನಿಕ್‌ ಸಿನ್ನರ್‌ ವಿರುದ್ಧ ನಾಲ್ಕು ಸೆಟ್‌ಗಳ ಹೋರಾಟದಲ್ಲಿ ಸೋತಿದ್ದರು.

ಚೆನ್ನೈನ ಅನಿರುದ್ಧ್‌ ಚಂದ್ರಶೇಖರ್‌ ಮತ್ತು ಚೀನಾ ತೈಪೆಯ ರೇ ಹೊ ಅವರು ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದಾರೆ. ಈ ಜೋಡಿ ಭಾರತದ ಸಾಯಿ ಕಾರ್ತಿಕ್‌ ರೆಡ್ಡಿ ಮತ್ತು ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್ ವಿರುದ್ಧ ಅಭಿಯಾನ ಆರಂಭಿಸಲಿದೆ. ‌‌

ಹಾಲಿ ಚಾಂಪಿಯನ್ ರಾಮಕುಮಾರ್ ಮತ್ತು ಸಾಕೇತ್ ಮೈನೇನಿ ಸೇರಿದಂತೆ ಭಾರತದ ನಾಲ್ಕು ಜೋಡಿ ಡಬಲ್ಸ್‌ನಲ್ಲಿ ಸ್ಪರ್ಧಿಸುತ್ತಿದೆ. ಅಲ್ಲದೆ, ಮೂವರು ಭಾರತೀಯರು ವಿದೇಶಿ ಆಟಗಾರರ ಜೊತೆಗೂಡಿ ಕಣಕ್ಕೆ ಇಳಿಯುತ್ತಿದ್ದಾರೆ.

ಕ್ವಾಲಿಫೈಯರ್‌: ಕರಣ್‌, ಮುಕುಂದ್ ಮುನ್ನಡೆ

ಭಾರತದ ಡೇವಿಸ್‌ ಕಪ್‌ ತಂಡದ ಸದಸ್ಯರಾದ ಕರಣ್‌ ಸಿಂಗ್‌, ಮುಕುಂದ್‌ ಶಶಿಕುಮಾರ್‌ ಅವರು ಭಾನುವಾರ ನಡೆದ ಸಿಂಗಲ್ಸ್‌ನ ಕ್ವಾಲಿಫೈಯರ್‌ ಮೊದಲ ಸುತ್ತಿನಲ್ಲಿ ಜಯ ಗಳಿಸಿದರು.

ಕರಣ್‌ 7-5, 6-3ರಿಂದ ಉಕ್ರೇನ್‌ನ ಯೂರಿ ಝವಾಕಿಯಾನ್ ವಿರುದ್ಧ ಜಯ ಸಾಧಿಸಿದರೆ, ಮುಕುಂದ್‌ 6-3, 4-6, 6-3ರಿಂದ ಸ್ವದೇಶದ ರಿಷಿ ರೆಡ್ಡಿ ವಿರುದ್ಧ ಗೆದ್ದರು. ಕ್ವಾಲಿಫೈಯರ್‌ನ ಎರಡನೇ ಸುತ್ತಿನಲ್ಲಿ ಸ್ಪರ್ಧೆ ಸೋಮವಾರ ನಡೆಯಲಿದೆ.

ಯುವ ಆಟಗಾರ ಅರ್ಯನ್‌ ಶಾ 6-4, 7-6(4)ರಿಂದ ಐದನೇ ಶ್ರೇಯಾಂಕದ ಕ್ರಿಸ್ ವ್ಯಾನ್ ವೈಕ್ ಅವರಿಗೆ ಆಘಾತ ನೀಡಿದರು. ಆದರೆ, ಸಿದ್ಧಾಂತ್‌ ರಾವತ್‌ 4–6, 4–6ರಿಂದ ಝೆಕ್‌ ರಿಪಬ್ಲಿಕ್‌ನ ಹೈನೆಕ್ ಬಾರ್ಟನ್ ಅವರಿಗೆ ಮಣಿದರು. ದೆಹಲಿ ಓಪನ್‌ನ ಡಬಲ್ಸ್‌ ರನ್ನರ್‌ ಅಪ್‌ ನಿಕಿ ಪೂಣಚ್ಚ ಅವರೂ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.