ADVERTISEMENT

ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್: ಮೊಲ್ಲರ್‌ಗೆ ಮೆಹಿಯಾ ಆಘಾತ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 23:09 IST
Last Updated 24 ಫೆಬ್ರುವರಿ 2025, 23:09 IST
<div class="paragraphs"><p>ಕೊಲಂಬಿಯಾದ ನಿಕೋಲಸ್‌ ಮೆಹಿಯಾ</p></div>

ಕೊಲಂಬಿಯಾದ ನಿಕೋಲಸ್‌ ಮೆಹಿಯಾ

   

ಪ್ರಜಾವಾಣಿ ಚಿತ್ರ: ಪುಷ್ಕರ್‌ ವಿ.

ಬೆಂಗಳೂರು: ಶ್ರೇಯಾಂಕರಹಿತ ಆಟಗಾರ ನಿಕೋಲಸ್‌ ಮೆಹಿಯಾ ಅವರು ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯ ಮೊದಲ ದಿನವಾದ ಸೋಮವಾರ ನಾಲ್ಕನೇ ಶ್ರೇಯಾಂಕದ ಎಲ್ಮರ್‌ ಮೊಲ್ಲರ್ ಅವರನ್ನು ಸೋಲಿಸಿ ಗಮನ ಸೆಳೆದರು.

ADVERTISEMENT

ವಿಶ್ವ ಕ್ರಮಾಂಕದಲ್ಲಿ 155ನೇ ಸ್ಥಾನದಲ್ಲಿರುವ ಮೊಲ್ಲರ್‌, ಕರ್ನಾಟಕ ರಾಜ್ಯ ಟೆನಿಸ್‌ ಸಂಸ್ಥೆ ಕ್ರೀಡಾಂಗಣದ ಅಂಕಣದಲ್ಲಿ ನಡೆದ ಮೊದಲ ಸುತ್ತಿನ ಈ ಪಂದ್ಯದಲ್ಲಿ 3–6, 4–6ರಲ್ಲಿ ಕೊಲಂಬಿಯಾದ ಮೆಹಿಯಾ ಎದುರು ಸೋಲನುಭವಿಸಿದರು. ವಿಶ್ವ ಕ್ರಮಾಂಕದಲ್ಲಿ 209ನೇ ಸ್ಥಾನದಲ್ಲಿರುವ ಮೆಹಿಯಾ ಸೊಗಸಾದ ಆಟ ‍ಪ್ರದರ್ಶಿಸಿ ಎರಡನೇ ಸುತ್ತಿಗೇರಿದರು. ಅವರೆದುರು ಡೆನ್ಮಾರ್ಕ್‌ನ 21 ವರ್ಷ ವಯಸ್ಸಿನ ಮೊಲ್ಲರ್ ಪೇಲವವಾಗಿ ಕಂಡರು.

25 ವರ್ಷ ವಯಸ್ಸಿನ ಮೆಹಿಯಾ ಎರಡನೇ ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿ 2–0 ಮುನ್ನಡೆ ಪಡೆದರಲ್ಲದೇ, ತಮ್ಮ ಸರ್ವ್‌ ಉಳಿಸಿ ಅದನ್ನು 3–0ಗೆ ಏರಿಸಿದರು. ಇದು ಮೊದಲ ಸೆಟ್‌ ಗೆಲ್ಲಲು ಅವರಿಗೆ ದಾರಿಯಾಯಿತು.

ಎರಡನೇ ಸೆಟ್‌ ತುಂಬಾ ಭಿನ್ನವಾಗಿರಲಿಲ್ಲ. ಒಮ್ಮೆ ಮಾತ್ರ (ಎಂಟನೇ ಗೇಮ್‌ನಲ್ಲಿ) ಮೊಲ್ಲರ್‌, ಎದುರಾಳಿಯ ಸರ್ವ್‌ ಗೇಮ್ ಬ್ರೇಕ್ ಮಾಡಿ ಕೆಲ ಮಟ್ಟಿಗೆ ಪ್ರತಿರೋಧ ತೋರಿದರು. ಆದರೆ ಅಷ್ಟರಲ್ಲಿ ಮೆಹಿಯಾ ಎರಡು ಗೇಮ್‌ಗಳ ಬ್ರೇಕ್ ಪಡೆದು 5–3 ರಲ್ಲಿ ಮುನ್ನಡೆ ಕಟ್ಟಿಕೊಂಡಿದ್ದರು.

‘ನಾನು ಉತ್ತಮವಾಗಿ ಸರ್ವ್‌ಗಳನ್ನು ಮಾಡಿದೆ. ಇದು ಹೋರಾಟದ ಪಂದ್ಯವಾಗಿದ್ದು, ಗೆಲುವು ಸಂತಸ ನೀಡಿದೆ’ ಎಂದು ಕೊಲಂಬಿಯಾದ ಆಟಗಾರ ಪಂದ್ಯದ ನಂತರದ ಸಂವಾದದಲ್ಲಿ ಪ್ರತಿಕ್ರಿಯಿಸಿದರು.

ಆತಿಥೇಯ ಕರ್ನಾಟಕದ ಎಸ್‌.ಡಿ.ಪ್ರಜ್ವಲ್‌ ದೇವ್‌ ಹೋರಾಟ ತೋರಿದರೂ, ತಮಗಿಂತ ಮೇಲಿನ ಕ್ರಮಾಂಕದ ಮರೆಕ್ ಜೆಂಜೆಲ್ ಎದುರು ಸೋಲನುಭವಿಸಬೇಕಾಯಿತು. ಹಿನ್ನಡೆಯಿಂದ ಚೇತರಿಸಿಕೊಂಡ ಝೆಕ್‌ ಗಣರಾಜ್ಯದ ಮರೆಕ್ 6–7 (2), 6–3, 6–3 ರಿಂದ ಮೈಸೂರಿನ ಆಟಗಾರನ ವಿರುದ್ಧ ಜಯಗಳಿಸಿದರು.

ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಬ್ಲೇಕ್ ಎಲ್ಲಿಸ್‌  6–7 (2), 6–4, 7–6 (6) ರಿಂದ ಬೆಲ್ಜಿಯಂನ ಮೈಕೆಲ್‌ ಗೀರ್ಟ್ಸ್ ಅವರನ್ನು ಸೋಲಿಸಿದರೆ, ಜಪಾನ್‌ನ ರಿಯೊ ನೊಗುಚಿ 7–5, 6–2 ರಿಂದ ಜರ್ಮನಿಯ ಜಸ್ಟಿನ್‌ ಎಂಗೆಲ್ ಅವರನ್ನು ಮಣಿಸಿದರು.

ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲು ನಡೆದಿದ್ದ ಅಂತಿಮ ಪಂದ್ಯದಲ್ಲಿ ಭಾರತದ ಕರಣ್‌ ಸಿಂಗ್‌ 6–4, 7–6 (6) ರಿಂದ ಸ್ವದೇಶದ ಆರ್ಯನ್ ಶಾ ಅವರನ್ನು ಮಣಿಸಿದರು. ಅವರು ಅರ್ಹತಾ ಸುತ್ತಿನಿಂದ ಪ್ರಧಾನ  ಡ್ರಾಕ್ಕೆ ಅರ್ಹತೆ ಪಡೆದ ಭಾರತದ ಏಕೈಕ ಆಟಗಾರ ಎನಿಸಿದರು. ಭಾರತದ ಬಹುತೇಕ ಆಟಗಾರರು ಭಾನುವಾರ ಅರ್ಹತಾ ವಿಭಾಗದ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು.

ಸೋಮವಾರ ನಡೆದ ಅರ್ಹತಾ ವಿಭಾಗದ ಎರಡನೇ ಸುತ್ತಿನಲ್ಲಿ ಭಾರತದ ಇನ್ನೊಬ್ಬ ಪ್ರಮುಖ ಆಟಗಾರ ಶಶಿಕುಮಾರ್ ಮುಕುಂದ್, ಝೆಕ್‌ ಗಣರಾಜ್ಯದ ಹ್ಯಾನೆಕ್‌ ಬಾರ್ಟನ್‌ ಅವರಿಗೆ 2–6, 6–4, 4–6ರಲ್ಲಿ  ಅವರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.