
ಬಿಲ್ಲೀ ಜೀನ್ ಕಿಂಗ್ ಕಪ್ ಅಂತರರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿಯ ‘ಜಿ’ ಗುಂಪಿನ ಪ್ಲೇಆಫ್ ಪಂದ್ಯಗಳು ನ.14ರಂದು ಆರಂಭವಾಗಲಿದೆ. ಅದರ ಅಂಗವಾಗಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಆತಿಥೇಯ ಭಾರತ ತಂಡದ ಆಟಗಾರ್ತಿಯರು ತಮ್ಮ ಹಸ್ತಾಕ್ಷರವಿರುವ ಜರ್ಸಿಯನ್ನು ಕೆಎಸ್‌ಎಲ್‌ಟಿಎಗೆ ಉಡುಗೊರೆಯಾಗಿ ನೀಡಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಝಗಮಗ ಬೆಳಗುವ ವಿದ್ಯುದೀಪಗಳ ಬೆಳಕಿನಲ್ಲಿ ಟೆನಿಸ್ ಕ್ರೀಡೆಯ ‘ನಾರಿಶಕ್ತಿ’ ವಿಜೃಂಭಿಸಿತು. 60ರ ದಶಕದಲ್ಲಿ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮೀರಿ ಟೆನಿಸ್ ಅಂಗಳಕ್ಕಿಳಿದು ಇತಿಹಾಸ ರಚಿಸಿದ ವನಿತೆಯರು ಅಲ್ಲಿದ್ದರು. ಅವರ ಹಿಂದೆಯೇ ಈಗಿನ ಆಟಗಾರ್ತಿಯರ ದಂಡು ನಿಂತಿತ್ತು.
ಬಿಲ್ಲೀ ಜೀನ್ ಕಿಂಗ್ ಕಪ್ ಟೆನಿಸ್ ಟೂರ್ನಿಯ ಆತಿಥ್ಯ ವಹಿಸುತ್ತಿರುವ ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯು (ಕೆಎಸ್‌ಎಲ್‌ಟಿಎ) ಬುಧವಾರ ಆಯೋಜಿಸಿದ್ದ ‘ತಂಡಗಳ ಸ್ವಾಗತ ಔತಣಕೂಟ’ದಲ್ಲಿ ಕಂಡ ದೃಶ್ಯ ಇದು.
60ರ ದಶಕದಲ್ಲಿಯೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ವನಿತೆಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ವ್ಹೀಲ್‌ಚೇರ್ ಟೆನಿಸ್ ಆಟಗಾರ್ತಿ ಶಿಲ್ಪಾ ಪುಟ್ಟರಾಜು ಅವರನ್ನೂ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಲ್ಲೀ ಜೀನ್ ಕಿಂಗ್ ಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದ ಆಟಗಾರ್ತಿಯರು ತಮ್ಮ ಹಸ್ತಾಕ್ಷರ ಇರುವ ಜೆರ್ಸಿಯನ್ನು ಕೆಎಸ್‌ಎಲ್‌ಟಿಎಗೆ ಕಾಣಿಕೆ ನೀಡಿದರು. ಸ್ಲೊವೇನಿಯಾ ಮತ್ತು ನೆದರ್ಲೆಂಡ್ಸ್ ಆಟಗಾರ್ತಿಯರು ಸೀರೆಯುಟ್ಟು ಬಂದಿದ್ದರು. ಭಾರತೀಯ ಖಾದ್ಯಗಳನ್ನು ಸವಿಯುತ್ತ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ. ಗೋವಿಂದರಾಜ್, ಕೆಎಸ್‌ಎಲ್‌ಟಿಎ ಪದಾಧಿಕಾರಿಗಳಾದ ಎಂ. ಲಕ್ಷ್ಮೀನಾರಾಯಣ, ಎಂ.ಬಿ. ದ್ಯಾಬೇರಿ, ಮಹೇಶ್ವರ್ ರಾವ್, ಸುನೀಲ್ ಯಜಮಾನ್ ಅವರು ಹಾಜರಿದ್ದರು.
ಟೂರ್ನಿಯು ಇದೇ 14 ರಿಂದ 16ರವರೆಗೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.