ADVERTISEMENT

ಬಿಲ್ಲಿ ಜೀನ್ ಕಿಂಗ್ ಕಪ್‌ ಪ್ಲೇ ಆಫ್‌: ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿ ಭಾರತ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 15:55 IST
Last Updated 13 ನವೆಂಬರ್ 2025, 15:55 IST
ಅಭ್ಯಾಸ ನಡೆಸಿದ ಶ್ರೀವಲ್ಲಿ ಭಮಿಡಿಪಾಟಿ
ಪ್ರಜಾವಾಣಿ ಚಿತ್ರ
ಅಭ್ಯಾಸ ನಡೆಸಿದ ಶ್ರೀವಲ್ಲಿ ಭಮಿಡಿಪಾಟಿ ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತದ ಟೆನಿಸ್‌ನ ಅಗ್ರ ಆಟಗಾರ್ತಿಯರು ಕೆಲದಿನಗಳಿಂದ ಉದ್ಯಾನನಗರಿಯಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಮುಂದಿನ ವರ್ಷದ ಬಿಲ್ಲಿ ಜೀನ್‌ ಕಿಂಗ್ ಕಪ್‌ ಕ್ವಾಲಿಫೈರ್ಸ್‌ನಲ್ಲಿ ಸ್ಥಾನ ಪಡೆಯುವ ವಿಶ್ವಾಸದೊಡನೆ ಪ್ಲೇ ಆಫ್‌ನಲ್ಲಿ ಕಣಕ್ಕಿಳಿಯಲು ತಂಡ ತಯಾರಿ ನಡೆಸಿದೆ. ಮೂರು ತಂಡಗಳಿರುವ ಟೂರ್ನಿಯ ಜಿ ಗುಂಪಿನ ಪ್ಲೇ ಆಫ್‌ ಪಂದ್ಯಗಳು ನಗರದಲ್ಲಿ ಶುಕ್ರವಾರ ಆರಂಭವಾಗಲಿವೆ. 

ಆದರೆ ಭಾರತದ ಮುಂದಿರುವ ಗುರಿ ಅಂದುಕೊಂಡಷ್ಟು ಸುಲಭವಲ್ಲ. ಪ್ರಬಲ ನೆದರ್ಲೆಂಡ್ಸ್‌ ಮತ್ತು ಸ್ಲೊವೇನಿಯಾ ತಂಡಗಳ ಸವಾಲನ್ನು ಎದುರಿಸಬೇಕಾಗಿದೆ.

ಕಬ್ಬನ್‌ಪಾರ್ಕ್‌ನ ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣದಲ್ಲಿ ಮೊದಲ ಮುಖಾಮುಖಿಯಲ್ಲಿ ನೆದರ್ಲೆಂಡ್ಸ್ ತಂಡವು, ಸ್ಲೊವೇನಿಯಾ ತಂಡವನ್ನು ಎದುರಿಸಲಿದೆ. ಭಾರತ ಶನಿವಾರ ಸ್ಲೊವೇನಿಯಾ ವಿರುದ್ಧ ಮೊದಲ ಪಂದ್ಯ ಆಡಲಿದೆ.

ADVERTISEMENT

ಈ ಹಿಂದೆ ಫೆಡರೇಷನ್‌ ಕಪ್‌ (ಪುರುಷರ ಡೇವಿಸ್‌ ಕಪ್‌ ರೀತಿ) ಎಂದು ಕರೆಸಿಕೊಳ್ಳುತ್ತಿದ್ದ ಬಿಲ್ಲಿ ಜೀನ್‌ ಕಿಂಗ್ ಕಪ್ (ಬಿಜೆಕೆಸಿ) ‘ಮಹಿಳಾ ಟೆನಿಸ್‌ನ ಪ್ರತಿಷ್ಠಿತ ಟೂರ್ನಿ. 

ಭಾರತ ತಂಡವು ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಸಹಜಾ ಯಮಲಪಲ್ಲಿ ಅವರ ಮೇಲೆ ಭರವಸೆ ಇಟ್ಟಿದೆ. ವಿಶ್ವ ಕ್ರಮಾಂಕದಲ್ಲಿ 309ನೇ ಸ್ಥಾನದಲ್ಲಿರುವ ಅವರು ಅಕ್ಟೋಬರ್‌ನಲ್ಲಿ ಮೆಕ್ಸಿಕೊದಲ್ಲಿ ನಡೆದ ಪಂದ್ಯದಲ್ಲಿ 2017ರ ಅಮೆರಿಕ ಓಪನ್ ಚಾಂಪಿಯನ್ ಸ್ಲೋನ್‌ ಸ್ಟೀಫನ್ಸ್‌ ಮೇಲೆ ಜಯಗಳಿಸಿದ್ದರು. ಚೆನ್ನೈ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದರು.

ವಿಶ್ವ ಕ್ರಮಾಂಕದಲ್ಲಿ 381ನೇ ಸ್ಥಾನದಲ್ಲಿರುವ ಶ್ರೀವಲ್ಲಿ ಭಮಿಡಿಪಾಟಿ ತಮ್ಮ ಸರ್ವ್‌ಗಳು ಮತ್ತು ನಿಖರವಾದ ಗ್ರೌಂಡ್‌ಸ್ಟ್ರೋಕ್‌ಗಳ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. 

ಪುಣೆಯಲ್ಲಿ ನಡೆದ ಏಷ್ಯಾ–ಒಷಾನಿಯಾ ಒಂದನೇ ಗುಂಪಿನಲ್ಲಿ ಅವರು ಹಾಂಗ್‌ಕಾಂಗ್ ಮತ್ತು ಕೊರಿಯಾ ತಂಡಗಳ ವಿರುದ್ಧ ಪಂದ್ಯದಲ್ಲಿ ತಮಗಿಂತ ಮೇಲಿನ ರ‍್ಯಾಂಕಿನ ಆಟಗಾರ್ತಿಯರನ್ನು ಮಣಿಸಿ ಗಮನ ಸೆಳೆದಿದ್ದರು. ಹೀಗಾಗಿ ಪ್ಲೇ ಆಫ್‌ ತಲುಪಲು ಸಾಧ್ಯವಾಗಿತ್ತು.

ಡಚ್ಚರ ತಂಡದಲ್ಲಿ ಸುಝಾನ್ ಲಮೆನ್ಸ್‌ ಜೊತೆ ಅರಂಟ್ಸಾ ರುಸ್‌ ಮತ್ತು ಡಬಲ್ಸ್ ಪರಿಣತೆ ಡೆಮಿ ಶುರ್ಸ್ ಅವರಿದ್ದಾರೆ. ಸ್ಲೊವೇನಿಯಾ ತಂಡವು, ಫ್ರೆಂಚ್ ಓಪನ್‌ನಲ್ಲಿ ಈ ಹಿಂದೆ ಸೆಮಿಫೈನಲ್ ತಲುಪಿದ್ದ ತಮರಾ ಝಿದಾನ್ಸೆಕ್‌ ಅವರನ್ನು ಒಳಗೊಂಡಿದೆ.

ಭಾರತ ತಂಡ ನವೆಂಬರ್‌ 4 ರಿಂದ ನಗರದಲ್ಲಿ ಸಿದ್ಧತಾ ಶಿಬಿರ ನಡೆಸಿದ್ದು, ಆಟಗಾರ್ತಿಯರಿಗೆ ಇಲ್ಲಿನ ಹವೆಗೆ ಹೊಂದಿಕೊಳ್ಳಲು ನೆರವಾಗಿದೆ.

‘ಆಟಗಾರ್ತಿಯರು ಉತ್ತಮ ಸ್ಪರ್ಧೆ ನೀಡಲಿದ್ದಾರೆ. ನಮಗಿಂತ ಮೇಲಿನ ರ್‍ಯಾಂಕಿನ ಆಟಗಾರ್ತಿಯರಿಗೆ ಪ್ರಬಲ ಪೈಪೋಟಿ ನೀಡಲು ಮಾನಸಿಕವಾಗಿ ಸಜ್ಜಾಗಿದ್ದೇವೆ’ ಎಂದು ಆಟವಾಡದ ನಾಯಕ ವಿಶಾಲ್ ಉಪ್ಪಲ್ ಹೇಳಿದರು.

‘ಬಿಜೆಕೆಸಿ ಒಳ್ಳೆಯ ಸಂದರ್ಭದಲ್ಲೇ ನಡೆಯುತ್ತಿದೆ. ನಮ್ಮ ಮಹಿಳಾ ತಂಡ ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್‌ ಗೆದ್ದಿದ್ದು, ದೇಶದಲ್ಲಿ ಮಹಿಳೆಯರು ಕ್ರೀಡೆ ಪ್ರಗತಿ ಕಾಣುತ್ತಿದೆ. ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮಗೆಲ್ಲಾ ಉತ್ಸಾಹ ತುಂಬಲಿದ್ದಾರೆ ಎಂಬ ನಿರೀಕ್ಷೆಯಿದೆ’ ಎಂದು ಡಬಲ್ಸ್ ಪರಿಣತೆ ಪ್ರಾರ್ಥನಾ ಠೊಂಬರೆ ಹೇಳಿದರು. ಬಿಜೆಕೆಸಿಯಲ್ಲಿ ಪ್ರಾರ್ಥನಾ ಮತ್ತು ಅಂಕಿತಾ ಒಟ್ಟು 90 ಪಂದ್ಯಗಳನ್ನು ಆಡಿದ್ದಾರೆ. 

ತಂಡಗಳು:

ಭಾರತ: ಸಹಜಾ ಯಮಲಪಲ್ಲಿ ಅಂಕಿತಾ ರೈನಾ ಶ್ರೀವಲ್ಲಿ ಭಮಿಡಿಪಾಟಿ ರಿಯಾ ಭಾಟಿಯಾ ಪ್ರಾರ್ಥನಾ ಠೊಂಬರೆ. ಆಟವಾಡದ ನಾಯಕ: ವಿಶಾಲ್ ಉಪ್ಪಲ್‌.

ನೆದರ್ಲೆಂಡ್ಸ್: ಸುಝಾನ್ ಲಮೆನ್ಸ್‌ ಅರಂಟ್‌ಸ್ಕಾ ರುಸ್‌ ಅನೂಕ್ ಕೊವೆರ್‌ಮನ್ಸ್‌ ಡೆಮಿ ಶೂವ್ಸ್‌. ನಾಯಕಿ: ಎಲಿಸ್‌ ತಮೇಲಾ.

ಸ್ಲೊವೇನಿಯಾ: ಕಯಾ ಜುವಾನ್‌ ತಮರಾ ಝಿದಾನ್ಸೆಕ್‌ ದಲೀಲಾ ಜಕುಪೊವಿಕ್‌ ನಿಕಾ ರಾಡಿಸಿಕ್‌. ನಾಯಕಿ: ಮಸಾ ಝೆಕ್‌ ಪೆಸ್ಕಿರಿಕ್.

ಪಂದ್ಯಗಳು: ನ. 14: ನೆದರ್ಲೆಂಡ್ಸ್‌– ಸ್ಲೊವೇನಿಯಾ

ನ.15: ಭಾರತ– ಸ್ಲೊವೇನಿಯಾ

ನ.16: ಭಾರತ– ನೆದರ್ಲೆಂಡ್ಸ್‌

ಪಂದ್ಯಗಳ ಆರಂಭ: ಮಧ್ಯಾಹ್ನ 3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.