
ಸ್ಲೊವೇನಿಯಾದ ಕಾಯಾ ಯುವಾನ್ ಅವರ ಆಟದ ವೈಖರಿ
ಚಿತ್ರ: ವಿ. ಪುಷ್ಕರ್
ಬೆಂಗಳೂರು: ತಮಾರಾ ಝಿದಾನ್ಸೆಕ್ ಮತ್ತು ಕಾಯಾ ಯುವಾನ್ ಅವರು ಸಿಂಗಲ್ಸ್ ಹಣಾಹಣಿಗಳಲ್ಲಿ ಪಡೆದ ಗೆಲುವುಗಳ ನೆರವಿನಿಂದ ಸ್ಲೊವೇನಿಯಾ ತಂಡ, ಶುಕ್ರವಾರ ಆರಂಭವಾದ ಜೀನ್ ಕಿಂಗ್ ಕಪ್ ‘ಜಿ’ ಗುಂಪಿನ ಪ್ಲೇ ಆಫ್ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 2–1 ರಿಂದ ಸೋಲಿಸಿತು.
ಕಬ್ಬನ್ ಪಾರ್ಕ್‌ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸಿಂಗಲ್ಸ್‌ನಲ್ಲಿ, 2021ರ ಫ್ರೆಂಚ್ ಓಪನ್ ಸೆಮಿಫೈನಲಿಸ್ಟ್ ತಮಾರಾ ಝಿದಾನ್ಸೆಕ್ 6–1, 7–6 (8/6) ರಿಂದ ಡಚ್ ಆಟಗಾರ್ತಿ ಅರಂಟ್ಸ್ಕಾ ರೂಸ್ ಅವರನ್ನು ಸೋಲಿಸಿದರು.
ಹೊನಲು ಬೆಳಕಿನಡಿ ನಡೆದ ಎರಡನೇ ಸಿಂಗಲ್ಸ್‌ನಲ್ಲಿ, 98ನೇ ಕ್ರಮಾಂಕದ ಆಟ ಗಾರ್ತಿ ಕಾಯಾ ಯುವಾನ್ 7–6 (5), 4–6, 6–3 ರಿಂದ ವಿಶ್ವ ಕ್ರಮಾಂಕದಲ್ಲಿ 87ನೇ ಸ್ಥಾನದಲ್ಲಿರುವ ಸುಝಾನ್ ಲಮೆನ್ಸ್ ಅವರನ್ನು ಸೋಲಿಸಿ ತಂಡಕ್ಕೆ ಗೆಲುವಿನ ಮುನ್ನಡೆ ಒದಗಿಸಿದರು. 2 ಗಂಟೆ 34 ನಿಮಿಷ ನಡೆದ ಪಂದ್ಯ ಪ್ರೇಕ್ಷಕರನ್ನು ರಂಜಿಸಿತು.
ಮಹತ್ವ ಕಳೆದುಕೊಂಡ ಡಬಲ್ಸ್ ಪಂದ್ಯದಲ್ಲಿ ದಲೀಲಾ ಜಕೊಪೊವಿಕ್–ನಿಕಾ ರಾಡಿಸಿಕ್ ಜೋಡಿ 4–6, 0–6 ಅಂತರದಲ್ಲಿ ನೆದರ್ಲೆಂಡ್ಸ್‌ನ ಲಮೆನ್ಸ್ ಮತ್ತು ಡೆಮಿ ಶುರ್ಸ್ ಅವರಿಗೆ ಮಣಿಯಿತು.
26 ವರ್ಷ ವಯಸ್ಸಿನ ಲಮೆನ್ಸ್– ಕಾಯಾ ನಡುವಣ ಪಂದ್ಯ ದಿನದ ಆಕರ್ಷಣೆಯಾಯಿತು. ಮೊದಲ ಸೆಟ್‌ನ ಒಂದು ಹಂತದಲ್ಲಿ 5–2 ಮುನ್ನಡೆ ಪಡೆದಿದ್ದ ಲಮೆನ್ಸ್ ಸೆಟ್ ಗೆಲ್ಲುವಂತೆ ಕಂಡಿದ್ದರು. ಆದರೆ ನಂತರ ಅವರು ಸ್ವಯಂಕೃತ ತಪ್ಪುಗಳನ್ನು ಎಸಗಿದರು. 9ನೇ ಗೇಮ್‌ನಲ್ಲಂತೂ ಅವರು ಮೂರು ಸತತ ಡಬಲ್ ಫಾಲ್ಟ್‌ಗಳನ್ನು ಎಸಗಿದ್ದರಿಂದ ಕಾಯಾ ಯುವಾನ್ ಬ್ರೇಕ್ ಪಡೆದು ಹಿನ್ನಡೆಯನ್ನು 4–5ಕ್ಕೆ ಇಳಿಸಿದರು. ಪೈಪೋಟಿಯಿಂದ ಕೂಡಿದ್ದ ಟೈಬ್ರೇಕರ್‌ನಲ್ಲೂ ಡಚ್ ಆಟಗಾರ್ತಿ ನಿರ್ಣಾಯಕ ವೇಳೆ ಮತ್ತೆ ಎರಡು ಡಬಲ್ ಫಾಲ್ಟ್ ಮಾಡಿದರು.
ಆದರೆ ಡಚ್ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಗೆದ್ದು ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ವಿಸ್ತರಿಸಿದರು. ಇದರಲ್ಲಿ ಕಾಯಾ ಯುವಾನ್ ಅವರು ಲಮೆನ್ಸ್ ಅವರ ತಪ್ಪುಗಳ ಲಾಭ ಪಡೆದರು. ದೀರ್ಘ ರ‍್ಯಾಲಿಗಳನ್ನು ಆಡಿ ಎದುರಾಳಿ ತಪ್ಪು ಮಾಡಲು ಪ್ರೇರೇಪಿಸಿದರು. 6–3 ರಲ್ಲಿ ಸೆಟ್ ಹಾಗೂ ಆ ಮೂಲಕ ಪಂದ್ಯ ಗೆದ್ದು ಸ್ಲೊವೇನಿಯಾಕ್ಕೆ 2–0 ಗೆಲುವಿನ ಮುನ್ನಡೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.