ADVERTISEMENT

ಬಿಲ್ಲಿ ಜೀನ್‌ ಕಿಂಗ್‌ ಕಪ್‌: ಕ್ವಾಲಿಫೈಯರ್‌ಗೆ ಸ್ಲೊವೇನಿಯಾ ವನಿತೆಯರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 0:35 IST
Last Updated 16 ನವೆಂಬರ್ 2025, 0:35 IST
<div class="paragraphs"><p>ಸ್ಲೊವೇನಿಯಾದ ಕಾಯಾ ಯುವಾನ್ ಅವರ ಆಟದ ವೈಖರಿ </p></div>

ಸ್ಲೊವೇನಿಯಾದ ಕಾಯಾ ಯುವಾನ್ ಅವರ ಆಟದ ವೈಖರಿ

   

ಚಿತ್ರ: ವಿ. ಪುಷ್ಕರ್‌

ಬೆಂಗಳೂರು: ಸಿಂಗಲ್ಸ್‌ ಆಟಗಾರ್ತಿ ಯರಾದ ತಮಾರಾ ಝಿದಾನ್ಸೆಕ್ ಮತ್ತು ಕಾಯಾ ಯುವಾನ್ ಅವರು ಶನಿವಾರವೂ ಪಾರಮ್ಯ ಮೆರೆದರು. ಅವರ ಅಮೋಘ ಆಟದ ನೆರವಿನಿಂದ ಸ್ಲೊವೇನಿಯಾ ತಂಡವು 2-1ರಿಂದ ಆತಿಥೇಯ ಭಾರತ ತಂಡವನ್ನು ಮಣಿಸಿ, ಬಿಲ್ಲಿ ಜೀನ್‌ ಕಿಂಗ್‌ ಕಪ್‌ ಕ್ವಾಲಿಫೈಯರ್‌ಗೆ ಮುನ್ನಡೆಯಿತು.

ADVERTISEMENT

ಕಬ್ಬನ್‌ ಪಾರ್ಕ್‌ನ ಎಸ್‌.ಎಂ.ಕೃಷ್ಣ ಟೆನಿಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಜಿ’ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಶುಕ್ರವಾರ ನೆದರ್ಲೆಂಡ್ಸ್‌ ವಿರುದ್ಧ 2–1ರಿಂದ ಗೆಲುವು ಸಾಧಿಸಿದ್ದ ಸ್ಲೊವೇನಿಯಾ ತಂಡ, ಎರಡನೇ ದಿನ ಭಾರತದ ವಿರುದ್ಧವೂ ಸವಾರಿ ನಡೆಸಿತು. ಈ ಗೆಲುವಿನೊಂದಿಗೆ ಮುಂದಿನ ವರ್ಷ ನಡೆಯಲಿರುವ ಕ್ವಾಲಿಫೈಯರ್‌ ಹಂತಕ್ಕೆ ಟಿಕೆಟ್‌ ಸಂಪಾದಿಸಿತು. ಹೀಗಾಗಿ, ಭಾನುವಾರ ನಡೆಯಲಿರುವ ಭಾರತ– ನೆದರ್ಲೆಂಡ್‌ ತಂಡಗಳ ನಡುವಿನ ಕೊನೆಯ ಮುಖಾಮುಖಿ ಮಹತ್ವ ಕಳೆದುಕೊಂಡಿದೆ. 

ಮೊದಲ ಸಿಂಗಲ್ಸ್‌ನಲ್ಲಿ ತಮಾರಾ 6–3, 4–6, 6–1ರಿಂದ ಭಾರತದ ಶ್ರೀವಲ್ಲಿ ಭಮಿಡಿಪಾಟಿ ಅವರನ್ನು ಮಣಿಸಿ, ಸ್ಲೊವೇನಿಯಾಕ್ಕೆ 1–0 ಮುನ್ನಡೆ ಒದಗಿಸಿದರು. 27 ವರ್ಷದ ತಮಾರಾ ‌ಮೊದಲ ಸೆಟ್‌ನಲ್ಲಿ 4–0ಯಿಂದ ಪ್ರಬಲ ಆರಂಭ ಪಡೆದರು.

ಆರಂಭಿಕ ಸೆಟ್‌ ಕಳೆದುಕೊಂಡ 23 ವರ್ಷದ ಶ್ರೀವಲ್ಲಿ ನಂತರದಲ್ಲಿ ಲಯ ಕಂಡುಕೊಂಡರು. ನಿಖರವಾದ ಸರ್ವ್‌ ಮತ್ತು ಗ್ರೌಂಡ್‌ಸ್ಟ್ರೋಕ್‌ಗಳ ಮೂಲಕ ತಿರುಗೇಟು ನೀಡಿ, ಸೆಟ್‌ ಸಮ ಮಾಡಿಕೊಂಡರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಟೆನಿಸ್ ದಿಗ್ಗಜ ರೋಹನ್‌ ಬೋಪಣ್ಣ ಸೇರಿದಂತೆ ನೂರಾರು ಕ್ರೀಡಾಭಿಮಾನಿಗಳು ಸಂಭ್ರಮಿಸಿದರು. ಆದರೆ, 309ನೇ ಕ್ರಮಾಂಕದ ಶ್ರೀವಲ್ಲಿ ನಿರ್ಣಾಯಕ ಸೆಟ್‌ನಲ್ಲಿ ಹಳಿ ತಪ್ಪಿದರು. ಆಕರ್ಷಕ ಬ್ಯಾಕ್‌ಹ್ಯಾಂಡ್‌ ಹೊಡೆತಗಳನ್ನು ಪ್ರಯೋಗಿಸಿದ ತಮಾರಾ ಮೇಲುಗೈ ಸಾಧಿಸಿದರು.

ಎರಡನೇ ಸಿಂಗಲ್ಸ್‌ನಲ್ಲಿ 98ನೇ ಕ್ರಮಾಂಕದ ಕಾಯಾ 6–4, 6–2ರ ನೇರ ಸೆಟ್‌ಗಳಿಂದ ಸಹಜಾ ಯಮಲಪಲ್ಲಿ ಅವರನ್ನು ಸೋಲಿಸಿ, ತಮ್ಮ ತಂಡಕ್ಕೆ ಗೆಲುವನ್ನು ಖಚಿತಪಡಿಸಿದರು. ಸ್ಲೊವೇನಿಯಾ ಆಟಗಾರ್ತಿ ಆಕರ್ಷಕ ಫೋರ್‌ಹ್ಯಾಂಡ್‌ ಹೊಡೆತಗಳನ್ನು ಪ್ರಯೋಗಿಸುವ ಮೂಲಕ ಭಾರತದ ಆಟಗಾರ್ತಿಯನ್ನು ತಬ್ಬಿಬ್ಬುಗೊಳಿಸಿದರು.

ಮಹತ್ವ ಕಳೆದುಕೊಂಡ ಡಬಲ್ಸ್ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಸಮಾಧಾನಕರ ಜಯ ಸಾಧಿಸಿದರು. ಅಂಕಿತಾ ರೈನಾ ಮತ್ತು ಪ್ರಾರ್ಥನಾ ಜಿ.ಟಿ. 1–6, 6–3,10–7ರಿಂದ ದಲೀಲಾ ಜಕೊಪೊವಿಕ್‌– ನಿಕಾ ರಾಡಿಸಿಕ್ ಜೋಡಿಯನ್ನು ಮಣಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.