ADVERTISEMENT

ಮಹಾರಾಷ್ಟ್ರ ಓಪನ್‌ ಟೆನಿಸ್ ಟೂರ್ನಿ: ರೋಹನ್‌–ರಾಮ್‌ಕುಮಾರ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 14:52 IST
Last Updated 6 ಫೆಬ್ರುವರಿ 2022, 14:52 IST
ಪ್ರಶಸ್ತಿಯೊಂದಿಗೆ ರೋಹನ್ ಬೋಪಣ್ಣ (ಎಡ) ಮತ್ತು ರಾಮ್‌ಕುಮಾರ್ ರಾಮನಾಥನ್‌
ಪ್ರಶಸ್ತಿಯೊಂದಿಗೆ ರೋಹನ್ ಬೋಪಣ್ಣ (ಎಡ) ಮತ್ತು ರಾಮ್‌ಕುಮಾರ್ ರಾಮನಾಥನ್‌   

ಪುಣೆ: ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಅವರು ಮಹಾರಾಷ್ಟ್ರ ಓಪನ್ ಎಟಿಪಿ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ಬಾಳೇವಾಡಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರಬಲ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ಜೋಡಿ ಲೂಕ್ ಸವಿಲೆ ಮತ್ತು ಜಾನ್ ಪ್ಯಾಟ್ರಿಕ್ ಸ್ಮಿತ್ ಅವರನ್ನು ರೋಹನ್‌–ರಾಮ್‌ಕುಮಾರ್‌ 6-7 (10-12), 6-3, 10-6ರಲ್ಲಿ ಮಣಿಸಿದರು.

2019ರಲ್ಲೂ ರೋಹನ್ ಬೋಪಣ್ಣ ಇಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಆ ವರ್ಷ ದಿವಿಜ್ ಶರಣ್ ಜೊತೆಗೂಡಿ ಕಣಕ್ಕೆ ಇಳಿದಿದ್ದರು. ಒಟ್ಟಾರೆ ಬೋಪಣ್ಣ ಅವರ 21ನೇ ಡಬಲ್ಸ್ ಪ್ರಶಸ್ತಿ ಇದು.

ಜನವರಿಯಲ್ಲಿ ನಡೆದ ಅಡಿಲೇಡ್ ಓಪನ್‌ ಟೂರ್ನಿಯಲ್ಲಿ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್ ಪ್ರಶಸ್ತಿ ಗೆದ್ದು ಈ ಋತುವಿನಲ್ಲಿ ಶುಭಾರಂಭ ಮಾಡಿದ್ದರು. ಅಗ್ರ ಶ್ರೇಯಾಂಕದ ಆಸ್ಟ್ರೇಲಿಯಾ ಆಟಗಾರರ ವಿರುದ್ಧ ಭಾನುವಾರ ಅರಂಭದ ಸೆಟ್‌ನಲ್ಲಿ 5–4ರ ಮುನ್ನಡೆ ಸಾಧಿಸಿದರು. ಮೊದಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟು ಕಣಕ್ಕೆ ಇಳಿದ ಆಸ್ಟ್ರೇಲಿಯಾ ಜೋಡಿ ತಿರುಗೇಟು ನೀಡಿ ಸೆಟ್ಟನ್ನು ಟೈ ಬ್ರೇಕರ್‌ಗೆ ಕೊಂಡೊಯ್ದು ನಂತರ ಗೆಲುವು ಸಾಧಿಸಿದರು.

ADVERTISEMENT

ಎರಡನೇ ಸೆಟ್‌ನ ಆರಂಭದಲ್ಲೂ ಭಾರತದ ಜೋಡಿ4-2ರ ಮುನ್ನಡೆ ಸಾಧಿಸಿದರು. ನಂತರ ಅದೇ ಲಯವನ್ನು ಮುಂದುವರಿಸಿ ಸೆಟ್‌ ಗೆದ್ದು ಪಂದ್ಯವನ್ನು ಸಮ ಮಾಡಿಕೊಂಡರು. ನಿರ್ಣಾಯಕ ಮೂರನೇ ಸೆಟ್‌ ಅತ್ಯಂತ ರೋಚಕವಾಗಿತ್ತು. ಎದುರಾಳಿಗಳ ಸವಾಲು ಮೆಟ್ಟಿನಿಲ್ಲಲು ಭಾರತದ ಆಟಗಾರರು ಸಮರ್ಥರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.