ನ್ಯೂಯಾರ್ಕ್: ಭಾರತದ ರೋಹನ್ ಬೋಪಣ್ಣ –ಕೆನಡಾದ ಡೆನಿಸ್ ಶಪಾವಲೊವ್ ಜೋಡಿಯು ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಈ ಜೋಡಿಯು 6–2, 6–4ರಿಂದ ಅಮೆರಿಕದ ಅರ್ನೆಸ್ಟೊ ಎಸ್ಕೊಬೆಡೊ– ನೊಹ್ ರಾಬಿನ್ ವಿರುದ್ಧ ಜಯ ಸಾಧಿಸಿತು. ಒಂದು ತಾಸು 22 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.
ಮುಂದಿನ ಸುತ್ತಿನ ಪಂದ್ಯದಲ್ಲಿ ಬೋಪಣ್ಣ–ಶಪಾವಲೊವ್ ಅವರು ಆರನೇ ಶ್ರೇಯಾಂಕದ, ಜರ್ಮನಿ ಜೋಡಿ ಕೆವಿನ್ ಕ್ರಾವಿಟ್ಜ್–ಆ್ಯಂಡ್ರಿಯಸ್ ಮೀಸ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.
ಕನ್ನಡಿಗ ಬೋಪಣ್ಣ ಅವರು ಟೂರ್ನಿಯಲ್ಲಿ ಉಳಿದುಕೊಂಡಿರುವ ಏಕೈಕ ಭಾರತೀಯ ಆಟಗಾರನಾಗಿದ್ದಾರೆ. ಸಿಂಗಲ್ಸ್ ವಿಭಾಗದ ಆಟಗಾರ ಸುಮಿತ್ ನಗಾಲ್ ಹಾಗೂ ಡಬಲ್ಸ್ ವಿಭಾಗದ ದಿವಿಜ್ ಶರಣ್ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿದ್ದಾರೆ.
ಜೊಕೊವಿಚ್ ಜಯದ ಅಭಿಯಾನ ಅಬಾಧಿತ: ವಿಶ್ವ ಅಗ್ರ ಕ್ರಮಾಂಕದ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಗೆಲುವಿನ ಅಭಿಯಾನ ಮುಂದುವರಿಸಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 6–3, 6–3, 6–1ರಿಂದ ಜರ್ಮನಿಯ ಜಾನ್ ಲೆನ್ನಾರ್ಡ್ ಸ್ಟ್ರಫ್ ಅವರನ್ನು ಪರಾಭವಗೊಳಿಸಿದರು.
ಜೊಕೊವಿಚ್ ಅವರು ನಾಲ್ಕನೇ ಸುತ್ತಿನಲ್ಲಿ ಪ್ಯಾಬ್ಲೊ ಕರೆನೊ ಬಸ್ಟಾ ವಿರುದ್ಧ ಆಡಲಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇತರ ಫಲಿತಾಂಶಗಳು: ಶುಕ್ರವಾರ ನಡೆದ ಪಂದ್ಯಗಳಲ್ಲಿ ಡೆನ್ನಿಸ್ ಶಪಾವಲೊವ್ 3–6, 6–3, 4–6, 7–6, 6–2ರಿಂದ ಟೇಲರ್ ಫ್ರಿಟ್ಜ್ ಎದುರು, ಡೇವಿಡ್ ಗಫಿನ್ 6–1, 7–6, 6–4ರಿಂದ ಫಿಲಿಪ್ ಕ್ರಾಜಿನೊವಿಚ್ ವಿರುದ್ಧ, ಅಲೆಕ್ಸಾಂಡರ್ ಜ್ವೆರೆವ್ 6–7, 6–4, 6–2, 6–2ರಿಂದ ಗೆದ್ದು ನಾಲ್ಕನೇ ಸುತ್ತು ಪ್ರವೇಶಿಸಿದರು. ಸ್ಟೆಫನೋಸ್ ಸಿಸಿಪಸ್ ಅವರು 6–7, 6–4, 4–6, 7–5, 7–6ರಿಂದ ಬಾರ್ನಾ ಕೊರಿಚ್ ಎದುರು ಸೋತು ಟೂರ್ನಿಯಿಂದ ನಿರ್ಗಮಿಸಿದರು.
ಮಹಿಳಾ ಸಿಂಗಲ್ಸ್ ಮೂರನೇ ಸುತ್ತಿನ ಫಲಿತಾಂಶಗಳು: ನವೊಮಿ ಒಸಾಕಾ 6–3, 6–7, 6–2ರಿಂದ ಮಾರ್ಟಾ ಕೊಸ್ತ್ಯುಕ್ ಎದುರು, ಪೆಟ್ರಾ ಕ್ವಿಟೊವಾ 6–4, 6–3ರಿಂದ ಜೆಸ್ಸಿಕಾ ಪೆಗುಲಾ ವಿರುದ್ಧ, ಎಂಜೆಲಿಕ್ ಕೆರ್ಬರ್ 6–3, 6–4ರಿಂದ ಆ್ಯನ್ ಲಿ ಎದುರು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.